ಹುಬ್ಬಳ್ಳಿ: ಸಾರಿಗೆ, ಮುದ್ರಣ ಹಾಗೂ ಮಾಧ್ಯಮ ಕ್ಷೇತ್ರದ ಯಶಸ್ವಿ ಉದ್ಯಮಿ, ವಿಆರ್‌ಎಲ್ ಸಮೂಹ ಸಂಸ್ಥೆಯ ಚೇರ್ಮನ್ ಡಾ| ವಿಜಯ ಸಂಕೇಶ್ವರ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹದಿನಾರನೇ ವಯಸ್ಸಿನಲ್ಲಿ ಪ್ರಿಂಟಿಂಗ್ ಪ್ರಸ್ ಆರಂಭದೊಂದಿಗೆ ಉದ್ಯಮಕ್ಕೆ ಕಾಲಿ ರಿಸಿದ್ದ ಅವರು 1976ರಲ್ಲಿ ಒಂದು ಲಾರಿಯಿಂದ ವಿಜಯಾನಂದ ರೋಡ್‌ಲೈನ್ಸ್ ಕಂಪನಿ ಆರಂಭಿಸಿದ್ದರು. ರಾಷ್ಟ್ರಮಟ್ಟದಲ್ಲೇ ಅತಿ ದೊಡ್ಡ ಖಾಸಗಿ ಸಾರಿಗೆ ಸಂಸ್ಥೆ ಕಂಪೆನಿ ಕಟ್ಟಿ ಬೆಳೆಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ.
2006ರಲ್ಲಿ ವಿಆರ್‌ಎಲ್ ಲಾಜಿಸ್ಟಿಕ್ ಲಿಮಿಟೆಡ್ ಎಂದು ಮರು ನಾಮಕರಣಗೊಂಡ ಸಂಸ್ಥೆ ಇಂದು 20 ರಾಜ್ಯ, ಆರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೇವಾ ಜಾಲ ಹೊಂದಿದ್ದು, ದೇಶದಲ್ಲೇ ಖಾಸಗಿ ಒಡೆತನದ ಅತಿ ಹೆಚ್ಚು ವಾಹನಗಳನ್ನು ಹೊಂದಿದ ಖ್ಯಾತಿಗೆ ಪಾತ್ರವಾಗಿದೆ. 2898 ಸ್ವಂತ ಒಡೆತನದ ಲಾರಿಗಳು, 4004 ಪ್ರಯಾಣಿಕರ ಬಸ್, 21,000ಕ್ಕೂ ಅಧಿಕ ನೌಕರರು, 859 ಫ್ರಾಂಚೈಸಿ ಗಳು ಹಾಗೂ ಪ್ರೀಮಿಯರ್ ಜೆಟ್ ವಿಮಾನ ವನ್ನು ಸಂಸ್ಥೆ ಹೊಂದಿದೆ.
ಇದಕ್ಕಾಗಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಗರಿ ಮುಡಿಗೇರಿಸಿ ಕೊಂಡಿದೆ. ನವೀಕರಿ ಸಬಹುದಾದ ಇಂಧನ, ಕೋರಿ ಯರ್ ಹಾಗೂ ವೈಮಾನಿಕ ಸೇವಾ ವಲಯ ಅಷ್ಟೇ ಅಲ್ಲ, ಮಾಧ್ಯಮ ಕ್ಷೇತ್ರದಲ್ಲೂ ಸಂಕೇಶ್ವರ ಅವರು ಹೆಜ್ಜೆ ಗುರುತು ಮೂಡಿಸಿದ್ದಾರೆ. ಉದ್ಯಮ ಜತೆ ರಾಜಕೀಯ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದ ಸಂಕೇಶ್ವರ ಧಾರವಾಡ ಲೋಕ ಸಭಾ ಕ್ಷೇತ್ರದಿಂದ ಬಿಜೆಪಿ ಸಂಸದರಾಗಿ ಸತತ ಮೂರು ಬಾರಿ ಆಯ್ಕೆಯಾಗಿದ್ದರು.
ಈ ಅವಧಿ ಯಲ್ಲಿ ಕೇಂದ್ರದಲ್ಲಿ ಹಣಕಾಸು ಸಮಿತಿ, ಭೂ ಸಾರಿಗೆ ಸಚಿವಾಲಯದ ಸಲಹಾ ಸಮಿತಿ, ವಾಣಿಜ್ಯ ಮಂಡಳಿ ಹಾಗೂ ಸಾರಿಗೆ ಮತ್ತು ಪ್ರವಾಸೋದ್ಯಮ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿ ದ್ದರು. 2008ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಯೂ ಕಾರ್ಯ ನಿರ್ವಹಿಸಿದ್ದಾರೆ. ರಾಜಕಾರಣಿ, ಉದ್ಯಮಿ ಯಾಗಿ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿ ರುವ ಅವರು, ಮಧ್ಯಮ ವರ್ಗದ ಸಮಸ್ಯೆ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
ವೆಂಕಯ್ಯ ನಾಯ್ಡು ಅವರು ನೀಡಿದ ನಿಧಿ ಯೊಂದಿಗೆ ಒಂದಿಷ್ಟು ಹಣ ಸೇರಿಸಿ ಸಮುದಾಯ ಭವನ ನಿರ್ಮಿಸಿದ್ದಾರೆ. ಹುಬ್ಬಳ್ಳಿಯ ಮಹಿಳಾ ವಿದ್ಯಾಪೀಠದಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಆರಂಭಕ್ಕೆ ಕಾರಣೀಕರ್ತರಾಗಿದ್ದಾರೆ. ಈ ಭಾಗದ ಹಲವು ವಿಚಾರಗಳ ಬಗ್ಗೆ ಹೋರಾಟ ಮಾಡಿದ್ದಾರೆ.
ಪ್ರಶಸ್ತಿ-ಪುರಸ್ಕಾರಗಳು: ವ್ಯಾಪಾರ ಶ್ರೇಷ್ಠತೆಗಾಗಿ ನವದೆಹಲಿಯ ಆರ್ಥಿಕ ಅಧ್ಯಯನ ಸಂಸ್ಥೆ ವತಿಯಿಂದ 1994ರಲ್ಲಿ ಉದ್ಯೋಗ ರತ್ನ ಪ್ರಶಸ್ತಿ, 1998ರಲ್ಲಿ ಸಾರಿಗೆ ರತ್ನ’ ಪ್ರಶಸ್ತಿ, 2003ರಲ್ಲಿ ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ, ಪತ್ರಿಕೋದ್ಯಮ ಹಾಗೂ ಸಾಮಾಜಿಕ ಸೇವೆಗಾಗಿ ಪತ್ರಿಕೋದ್ಯಮ ಹಾಗೂ ಸಾಮಾಜಿಕ ಸೇವಾ ಪುರಸ್ಕಾರ, 2007ರಲ್ಲಿ ಕರ್ನಾಟಕ ವಾಣಿಜೋದ್ಯಮ (ಎಫ್ಕೆಸಿಸಿಐ) ಸಂಸ್ಥೆಯ ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ,
2008ರಲ್ಲಿ ಆಲ್ ಇಂಡಿಯಾ ಟ್ರಾನ್ಸ್‌ಪೊರ್ಟ್ ಕಾಂಗ್ರೆಸ್‌ನಿಂದ ಸಾರಿಗೆ ಸಾಮ್ರಾಟ’ ಗೌರವಕ್ಕೆ ಪಾತ್ರರಾಗಿದ್ದಾರೆ. ಇವರ ಕನಸಿನ ಕೂಸಾದ ವಿಆರ್‌ಎಲ್ ಸಂಸ್ಥೆಗೆ ಹಲವು ಪ್ರಶಸ್ತಿ ಸಂದಿವೆ. ಇಷ್ಟೆಲ್ಲಾ ಪ್ರಶಸ್ತಿಗಳನ್ನು ಹೊಂದಿರುವ ಬತ್ತಳಿಕೆಗೆ ಇದೀಗ ಪದ್ಮಶ್ರೀ ಪ್ರಶಸ್ತಿಯೂ ಸೇರಿಕೊಂಡಿದೆ.