ಹೊಸಪೇಟೆ: ಜಗತ್ತನ್ನು ಅಳ್ವಿಕೆ ಮಾಡಿರುವುದು ಜ್ಞಾನವೇ ಹೊರತು ಬಂದೂಕು, ಮದ್ದು, ಗುಂಡುಗಳಲ್ಲ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ| ಪದ್ಮಾ ಶೇಖರ್ ಪ್ರತಿಪಾದಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಬಯಲು ರಂಗ ಮಂದಿರದಲ್ಲಿ ಶುಕ್ರವಾರ ಕನ್ನಡ ವಿವಿಯ 29ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಜ್ಞಾನ ಯಾವತ್ತೂ ಜೀವನ್ಮುಖೀಯಾಗಿ ದುಡಿದಿದೆ. ಅದನ್ನು ಯಾರೂ ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ.
ಬಹುಮುಖೀ ಆಲೋಚನೆಗಳು ಹುಟ್ಟುವುದೇ ಜ್ಞಾನದ ನಿರ್ದಿಗಂತ ಸ್ಥಿತಿಯಲ್ಲಿ. ಜೀವನ್ಮುಖೀ ಸಂಸ್ಕೃತಿಯ ಪೋಷಣೆ ನಿರ್ಮೋಹಮುಖೀಯಾದ ಜ್ಞಾನದಿಂದ ಮಾತ್ರ ಸಾಧ್ಯ. ಇದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದರು.
ಡಿಲಿಟ್ ಪದವಿ: ಸಾಗರ ತಾಲೂಕಿನ ವೀರಾಪುರ ಹಿರೇಮಠದ ಶ್ರೀ ಮರುಳಸಿದ್ಧ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಒಟ್ಟು 10 ಜನರಿಗೆ ಡಿ.ಲಿಟ್ ಪದವಿ ಪ್ರದಾನ ಮಾಡಲಾಯಿತು.
ಶ್ರೀ ಮರುಳಸಿದ್ಧ ಪಂಡಿತರಾಧ್ಯ ಶಿವಾಚಾರ್ಯರು ವ್ಯಕ್ತಿತ್ವ ವಿಕಾಸಕ್ಕೆ ಸಂಸ್ಕಾರಗಳ ಅಗತ್ಯ
: ವೈಜ್ಞಾನಿಕ ಅಧ್ಯಯನ ಎಂಬುದರ ಕುರಿತು ಮಹಾಪ್ರಬಂಧಕ್ಕೆ ಡಿ.ಲಿಟ್ ಸಂದಿದೆ. ಇದೇ ರೀತಿ ಈಶ್ವರ ದೈತೋಟ ಅವರು ಅಭಿವೃದ್ಧಿ ಸಂವಹನ ನೆಲೆಯಲ್ಲಿ ಅಭ್ಯುದಯ ಪತ್ರಿಕೋದ್ಯಮ: ಸವಾಲು-ಸಾಧ್ಯತೆಗಳು, ನಾರಾಯಣ ಯಾಜಿ ಅವರು ಭಾರತೀಯ ನ್ಯಾಯ ಕಲ್ಪನೆ ಮತ್ತು ಸಾಮಾಜಿಕ ನ್ಯಾಯ, ಕೆ.ಕರಿಸ್ವಾಮಿ ಅವರು ಕನ್ನಡ ಪತ್ರಿಕೋದ್ಯಮಕ್ಕೆ ಸಾಹಿತ್ಯದ ಕೊಡುಗೆ, ತಲಕಾಡು ಚಿಕ್ಕೆರಂಗೇಗೌಡ ಅವರು ತಲಕಾಡು: ಸಾಂಸ್ಕೃತಿಕ ಅಧ್ಯಯನ, ಬಿ. ಶಿವಶಂಕರ ಅವರು ಕರ್ನಾಟಕ ಭೋವಿ ಸಮುದಾಯದ ಸಾಮಾಜಿಕ ಅಧ್ಯಯನ, ಸರಳಾ ರಮೇಶ ಕುಂದರ್ ಅವರು ಕರ್ನಾಟಕದ ಮದರಂಗಿ ಚಿತ್ರಕಲೆ, ಸೀಮಾ ಉಪಾಧ್ಯಾಯ ಅವರು ಪ್ರವಾಸಿ ಕಂಡ ನರ್ತನಲೋಕ, ವಿ. ನಾಗೇಂದ್ರಪ್ರಸಾದ್ ಅವರು ಕನ್ನಡ ಚಲನಚಿತ್ರಗೀತೆಗಳ ಸಾಮಾಜಿಕ ಪರಿಣಾಮ: ಒಂದು ಅಧ್ಯಯನ ಹಾಗೂ ಸಿದ್ದಲಿಂಗ ಮರಿಬಾಶೆಟ್ಟಿ ಅವರು ಅಶ್ವಾರೋಹಣ ಕಲೆ (ಪ್ರಾಚೀನತೆಯಿಂದ ಸಮಕಾಲೀನವರೆಗೆ)ವಿಷಯದ ಕುರಿತು ಮಹಾಪ್ರಬಂಧಗಳಿಗೆ ಡಿ.ಲೀಟ್ ಪದವಿಯನ್ನು ಕನ್ನಡ ವಿವಿ ನುಡಿಹಬ್ಬದಲ್ಲಿ ಪ್ರದಾನ ಮಾಡಲಾಯಿತು.
100 ಜನರಿಗೆ ಇದೇ ಸಂದರ್ಭದಲ್ಲಿ ಪಿಎಚ್‌ಡಿ ಪದವಿಯನ್ನು ಪ್ರದಾನ ಮಾಡಲಾಯಿತು. ಕನ್ನಡ ವಿವಿ ಕುಲಪತಿಗಳಾದ ಡಾ| ಸ.ಚಿ. ರಮೇಶ, ಕುಲಸಚಿವ ಡಾ| ಎ.ಸುಬ್ಬಣ್ಣ ರೈ ಅವರು ಡಿ. ಲಿಟ್ ಪ್ರದಾನ ಮಾಡಿದರು. ನಾಡೋಜ ಪ್ರಶಸ್ತಿ ಪುರಸ್ಕೃತರಾದ ಜಗದೀಶ ಗುಡಗುಂಟಿ, ಡಾ| ಕೆ. ಕೃಷ್ಣಪ್ರಸಾದ್ ಇದ್ದರು.
ರಾಜ್ಯಪಾಲ ವಜುಭಾಯಿ ವಾಲಾ, ಉನ್ನತ ಶಿಕ್ಷಣ ಸಚಿವ ಡಾ| ಅಶ್ವಥ್ ನಾರಾಯಣ, ಸಚಿವ ಆನಂದ ಸಿಂಗ್ ಗೈರಾಗಿದ್ದರು.