Advertisement
ಸಿದ್ದಲಿಂಗಯ್ಯ“ದಲಿತಕವಿ’, “ಊರುಕೇರಿ’ ಖ್ಯಾತಿಯ ದಿ| ಸಿದ್ದಲಿಂಗಯ್ಯನವರಿಗೆ ಮರಣೋತ್ತರ ಗೌರವವಾಗಿ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿದೆ. ಕಳೆದ ವರ್ಷವಷ್ಟೇ ಕೋವಿಡ್‌ನಿಂದ ಅಗಲಿದ ಸಿದ್ದಲಿಂಗಯ್ಯ ಅವರದ್ದು ದಲಿತ-ಬಂಡಾಯ ಚಳವಳಿಯಲ್ಲಿ ಬಹುದೊಡ್ಡ ಹೆಸರು. ಹೊಲೆ ಮಾದಿಗರ ಹಾಡು, ಸಾವಿರಾರು ನದಿಗಳು, ಕಪ್ಪು ಕಾಡಿನ ಹಾಡು, ಮೆರವಣಿಗೆ- ಇವರಿಗೆ ಶ್ರೇಷ್ಠತೆ ತಂದುಕೊಟ್ಟ ಕವನ ಸಂಕಲನಗಳು. ಅಲ್ಲದೆ, “ಊರುಕೇರಿ’ ಆತ್ಮಕಥನ ಸರಣಿ ಮೂಲಕ ದಲಿತ ಸಮುದಾಯದ ನೋವುಗಳಿಗೆ ಅಕ್ಷರಗನ್ನಡಿ ಹಿಡಿದಿದ್ದರು. ಅಂಬೇಡ್ಕರ್, ಪೆರಿಯಾರ್ ಚಿಂತನೆಗಳಿಂದ ಪ್ರಭಾವಿತರಾಗಿ ಬಿ. ಕೃಷ್ಣಪ್ಪ ಅವರ ಜತೆಗೂಡಿ ದಲಿತ ಸಂಘರ್ಷ ಸಮಿತಿಯನ್ನು ಕಟ್ಟಿ, ದಮನಿತರ ನೋವುಗಳಿಗೆ ಧ್ವನಿಯಾಗಿದ್ದರು. ನೃಪತುಂಗ, ರಾಜ್ಯೋತ್ಸವ ಪ್ರಶಸ್ತಿಗಳಿಗೆ ಪಾತ್ರರಾಗಿದ್ದ ಸಿದ್ದಲಿಂಗಯ್ಯನವರು 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನೂ ಅಲಂಕರಿಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನೂ ಮುನ್ನಡೆಸಿದ್ದರು. ಎರಡು ಬಾರಿ ವಿಧಾನಪರಿಷತ್‌ಗೆ ಆಯ್ಕೆಯಾಗುವ ಮೂಲಕ ರಾಜಕೀಯವಾಗಿಯೂ ಸೇವೆ ಸಲ್ಲಿಸಿದ ಹೆಗ್ಗಳಿಕೆ ಸಿದ್ದಲಿಂಗಯ್ಯನವರಿಗಿತ್ತು.
ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸಿ ಪದ್ಮಶ್ರಿ ಗೌರವಕ್ಕೆ ಪಾತ್ರರಾದ ಮತ್ತೂಬ್ಬ ಸಾಧಕ ಸುಬ್ಬಣ್ಣ ಅಯ್ಯಪ್ಪನ್ ಅವರದ್ದು ಬೆಂಗಳೂರು ಮೂಲ. ಭಾರತೀಯ ಕೃಷಿ ಸಂಶೋಧನ ಮಂಡಳಿಯಲ್ಲಿ (ಐಸಿಎಆರ್) ಕೃಷಿ ವಿಜ್ಞಾನಿಯಾಗಿ, ದೇಶದ ಕೃಷಿ ರಂಗ ಎದುರಿಸುತ್ತಿರುವ ನಾನಾ ಸವಾಲುಗಳಿಗೆ ಸೂಕ್ತ ಪರಿಹಾರ ಸೂಚಿಸಿದ ಹೆಗ್ಗಳಿಕೆ ಇವರದ್ದು. ರೈತ ವಿಜ್ಞಾನಿಗಳನ್ನು ಗುರುತಿಸುವುದಕ್ಕಾಗಿಯೇ “ಫಾರ್ಮರ್ ಫಸ್ಟ್’ ಪ್ರಾಜೆಕ್ಟ್ ಪರಿಚಯಿಸಿದವರು. ಐಎಸಿಆರ್ ಮೂಲಕ ಬೆಳೆ, ಮೀನುಗಾರಿಕೆ, ಪೌಲಿó, ಕೃಷಿ ಸಂಪನ್ಮೂಲ ನಿರ್ವಹಣೆ- ಮುಂತಾದ ವಿಭಾಗಗಳ ಅಭಿವೃದ್ಧಿಗೆ ಸೂತ್ರಗಳನ್ನು ಹೆಣೆದವರು. ದೇಶದ 60ಕ್ಕೂ ಅಧಿಕ ಕೃಷಿ ವಿವಿಗಳು, 600 ಕ್ಕೂ ಅಧಿಕ ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ಕೃಷಿ ಸಂಶೋಧನೆಗೆ ಅನುಕೂಲವಾಗುವಂಥ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. 21 ರಾಜ್ಯಗಳ 500 ಜಿಲ್ಲೆಗಳಲ್ಲಿ ಜಿಐಎಸ್ ಆಧಾರಿತ ಮಣ್ಣಿನ ಫಲವಂತಿಕೆ ನಕ್ಷೆಯನ್ನು ಅಭಿವೃದ್ಧಿಪಡಿಸಿದ ಹೆಗ್ಗಳಿಕೆ. ಕೃಷಿ ಅಭಿವೃದ್ಧಿ ಸಂಶೋಧನೆ ಮತ್ತು ಶಿಕ್ಷಣ ವಿಭಾಗದ (ಡಿಎಆರ್‌ಇ) ಕಾರ್ಯದರ್ಶಿಯೂ ಆಗಿರುವ ಅಯ್ಯಪ್ಪನ್, ಭಾರತ ವಾರ್ಷಿಕ 100 ದಶಲಕ್ಷ ಅಕ್ಕಿ ಉತ್ಪಾದನೆಯ ಮೈಲುಗಲ್ಲು ದಾಟಲು ಪ್ರಮುಖ ಕಾರಣಕರ್ತರು. ಅಲ್ಲದೆ, ಮುಂದಿನ 20-30 ವರ್ಷಗಳವರೆಗೆ ದೇಶದ ಆಹಾರ ಉತ್ಪಾದನೆಯ ಹೆಚ್ಚಳಕ್ಕೂ ಇವರ ಸಂಶೋಧನೆಗಳು ನೆರವಾಗಿವೆ. ಎಚ್.ಆರ್. ಕೇಶವಮೂರ್ತಿ
ಪ್ರಸಿದ್ಧ ಗಮಕ ಕಲಾವಿದ, ಕುಮಾರವ್ಯಾಸ ಪ್ರಶಸ್ತಿ ಪುರಸ್ಕೃತ ಎಚ್.ಆರ್. ಕೇಶವಮೂರ್ತಿ ಅವರಿಗೆ ಕೇಂದ್ರ ಸರಕಾರ ಪದ್ಮ ಪ್ರಶಸ್ತಿ ನೀಡಿ ಗೌರವಿಸಿದೆ. ಶಿವಮೊಗ್ಗ ಸಮೀಪದ ಗಮಕ ಗ್ರಾಮ ಎಂದೇ ಹೆಸರುವಾಸಿಯಾಗಿರುವ ಹೊಸಹಳ್ಳಿಯಲ್ಲಿ ಫೆ.22, 1934ರಲ್ಲಿ ವೇದ ಬ್ರಹ್ಮ ರಾಮಸ್ವಾಮಿ ಶಾಸ್ತ್ರಿ ಹಾಗೂ ಲಕ್ಷ್ಮೀದೇವಮ್ಮ ಮಗನಾಗಿ ಎಚ್.ಆರ್. ಕೇಶವಮೂರ್ತಿ ಜನಿಸಿದರು. ಪ್ರಸಿದ್ಧ ಸಂಗೀತ ವಿದ್ವಾಂಸ ಲಾಲ್‌ಗುಡಿ ಜಯರಾಮನ್ ಅವರು ಕೇಶವಮೂರ್ತಿ ಅವರ ಗಮಕ ವಾಚನಕ್ಕೆ ಮರುಳಾಗಿ ಮತ್ತೂಮ್ಮೆ ಕರೆಸಿ ಹಾಡಿಸಿ ಕೇಳಿ ಆನಂದ ಪಟ್ಟಿದ್ದರಂತೆ. ಕುಮಾರವ್ಯಾಸ ಭಾರತ, ಜೈಮಿನಿ ಭಾರತ, ಪಂಪ ಭಾರತ, ರನ್ನನ ಗದಾಯುದ್ಧ, ಹರಿಶ್ಚಂದ್ರ ಕಾವ್ಯ, ವಚನಗಳು, ಮಂಕುತಿಮ್ಮನ ಕಗ್ಗ, ರಾಮಾಯಣ, ಮಹಾಭಾರತ, ಭಾಗವತ, ಕುಮಾರಸಂಭವ, ರಘುವಂಶವನ್ನು ಸಂಸ್ಕೃತದಲ್ಲಿ ಗಮಕ ವಾಚನ ಮಾಡುತ್ತಿದ್ದರು. ವಾರಣಾಸಿ, ಕಾನ್ಪುರ, ಜೈಪುರ, ಮುಂಬಯಿ, ಪುಣೆ ಸೇರಿ ದೇಶದ ವಿವಿಧ ಮೂಲೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಸಾವಿರಾರು ಅಭಿಮಾನಿಗಳನ್ನು ಸಂಪಾದಿಸಿದ ಹೆಗ್ಗಳಿಕೆ ಇವರದ್ದು. ಗಮಕ ಕಲೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಇವರಿಗೆ ರಾಜ್ಯ ಸರ್ಕಾರ ನೀಡುವ ಅತ್ಯುನ್ನತ ಗೌರವ ಕುಮಾರವ್ಯಾಸ ಪ್ರಶಸ್ತಿ ಲಭಿಸಿರುವುದು ಇವರ ಸಾಧನೆಗೆ ಹಿಡಿದ ಕೈಗನ್ನಡಿ. ಅವರ ಸಾಧನೆ ಮೆಚ್ಚಿ ಹಿರೇಮಗಳೂರು ಕಣ್ಣನ್ ಅವರು “ತುಟಿ ತೆರೆದರೆ ಸಾಕು ಲಕ್ಷ್ಮೀಶ, ಕುಮಾರವ್ಯಾಸರ ಸಾûಾತ್ಕಾರವಯ್ನಾ, ಕಂಚಿನ ದನಿಯ ರಂಗೂನ್ ಗಂಟೆಯ ನಾದ ಮಾಧುರ್ಯ, ವೇದಮಯ, ಮಂತ್ರಮಯ, ರುದ್ರಮಯ, ಚಮಕಮಯ, ನಮಕ ಮಯ ಸರ್ವಂ ಗಮಕಮಯ’ ಎಂದು ಬರೆದಿದ್ದಾರೆ. ಗಮಕ ಕೋಕಿಲ, ಗಮಕ ಗಂಧರ್ವ, ಗಮಕ ಕೇಸರಿ, ಗಮಕ ಪಲ್ಗುಣ, ಗಮಕ ಕಲಾ ಚಕ್ರವರ್ತಿ ಸಾವಿರಾರು ಪ್ರಶಸ್ತಿಗಳು ಇವರಿಗೆ ಒಲಿದು ಬಂದಿವೆ.
Related Articles
ಧಾರವಾಡ ಜಿಲ್ಲೆ ಅಣ್ಣಿಗೇರಿಯ ಅಬ್ದುಲ್ ಖಾದರ್ ನಡಕಟ್ಟಿನ್ ಅವರು ಯಾವುದೇ ಪದವೀಧರರಲ್ಲ. ಆದರೆ ಅವರು ಕೈಗೊಂಡ ಆವಿಷ್ಕಾರ, ರೂಪುಗೊಳಿಸಿದ ಕೃಷಿ ಸಲಕರಣೆಗಳಿಂದಾಗಿ ಉತ್ತರ ಕರ್ನಾಟಕವಷ್ಟೇ ಅಲ್ಲ; ರಾಜ್ಯ-ವಿವಿಧ ರಾಜ್ಯಗಳಲ್ಲಿಯೂ ತಮ್ಮದೇಯಾದ ಖ್ಯಾತಿ ಹೊಂದಿದ್ದಾರೆ. ರೈತರಿಗೆ ಪ್ರಯೋಜನಕಾರಿ ವಿವಿಧ ಸರಳ ಕೃಷಿ ಸಲಕರಣೆಗಳನ್ನು ತಯಾರಿಸುವ ಮೂಲಕ ನಡಕಟ್ಟಿನ್ ಫಾರ್ಮ್ ಉತ್ತರ ಕರ್ನಾಟಕದ ಮನೆ ಮಾತಾಗಿದೆ. ಕೃಷಿ ಬದುಕಿಗೆ ಪ್ರಮುಖವಾದ ಕೂರಿಗೆ, ಕುಂಟೆ ಸೇರಿದಂತೆ ವಿವಿಧ ಸಲಕರಣೆಗಳನ್ನು ಸಂಪ್ರದಾಯದ ಸೊಗಡು ಹಾಗೂ ಆಧುನಿಕತೆಯನ್ನು ಸಮ್ಮಿಲಿತಗೊಳಿಸಿ ಅನೇಕ ಪರಿಕರಗಳನ್ನು ತಯಾರಿಸಿದ್ದು, ವಿಶೇಷವಾಗಿ ನಡಕಟ್ಟಿನ್‌ನ ಕೂರಿಗೆ ಎಂದೇ ಎಲ್ಲೆಡೆ ಖ್ಯಾತಿ ಪಡೆದಿದೆ. ಬಿತ್ತನೆಗೆ ಕೂರಿ, ಕಸ ಕೀಳಲು ಕುಂಟೆ, ಎಡೆಕುಂಟೆ ಅಲ್ಲದೆ ಟ್ಯಾಕ್ಟರ್‌ಗಳನ್ನು ಬಳಸಿ ಕೃಷಿ ಕಾಯಕ ಕೈಗೊಳ್ಳುವ ವಿವಿಧ ವಿನ್ಯಾಸ ಹಾಗೂ ನವೀನ ತಂತ್ರಜ್ಞಾನದ ಕೃಷಿ ಸಲಕರಣೆಗಳನ್ನು ತಯಾರಿಸಿದ್ದಾರೆ.ಯಾವುದೇ ಪದವಿ ಇಲ್ಲ ವಾದರೂ ಇವರ ಚಿಂತನೆ, ತಯಾರಿಸಿದ ಕೃಷಿ ಸಲಕರಣೆಗಳ ವಿನ್ಯಾಸ ನೋಡಿದರೆ ಎಂಜಿನಿಯರಿಂಗ್ ಪದವೀಧರರು, ತಜ್ಞರು ಸಹ ವಿಸ್ಮಯಗೊಳ್ಳುವಂತೆ ಅವರ ಕೌಶಲ ಸಲಕರಣೆಗಳ ರೂಪದಲ್ಲಿ ಕಾಣ ಸಿಗುತ್ತದೆ. ಸದಾ ಪ್ರಯೋಗಶೀಲರಾಗಿರುವ ಅಬ್ದುಲ್ ಖಾದರ್ ನಡಕಟ್ಟಿನ್ ಅವರು ಈಗಲೂ ಏನಾದರೊಂದು ಹೊಸ ವಿನ್ಯಾಸ ಇಲ್ಲವೇ ಇದ್ದ ಸಲಕರಣೆಯಲ್ಲಿ ಸುಧಾರಣೆ ಕಾಯಕದಲ್ಲಿ ತೊಡಗಿರುತ್ತಾರೆ.
Advertisement
ಅಮೈ ಮಹಾಲಿಂಗ ನಾಯ್ಕದಕ್ಷಿಣ ಕನ್ನಡ ಜಿಲ್ಲೆಯ ಕೇಪು ಗ್ರಾಮದ ಅಮೈ ನಿವಾಸಿ ಮಹಾಲಿಂಗ ನಾಯ್ಕ ಅಮೈ ನೀರಿಗಾಗಿ ಭಗೀರಥ ಪ್ರಯತ್ನ ಮಾಡಿದವರು. ಅತೀವ ಪರಿಶ್ರಮಿಯಾದ ಈ ಕೃಷಿಕನ ಸ್ವಾವಲಂಬಿ ಯಶೋಗಾಥೆ ಅತ್ಯದ್ಭುತ. ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರು ಇವರು. ಸಾಲವಾಗಿ ಪಡೆದ ಜಮೀನಿನಲ್ಲಿ ಬೆವರು ಹರಿಸಿ ದುಡಿದು ಬಂಗಾರವನ್ನೇ ಬೆಳೆದಿದ್ದಾರೆ. ಅಡಿಕೆ, ತೆಂಗು, ಬಾಳೆ, ಕೊಕೊ, ಕಾಳುಮೆಣಸು ಇತ್ಯಾದಿ ಸಮ್ಮಿಶ್ರ ಬೆಳೆಗಳೊಂದಿಗೆ ದನ, ಜೇನು ಸಾಕಣೆಯನ್ನು ಕೂಡ ಮಾಡುತ್ತ ಬಂದರು. ಈಗ ತೋಟದಲ್ಲಿ 300ಕ್ಕೂ ಅಧಿಕ ಅಡಿಕೆ, 70 ತೆಂಗು, 200 ಬುಡ ಕಾಳುಮೆಣಸು, 75 ಕೊಕ್ಕೋ ಬೆಳೆಯುತ್ತಿದ್ದಾರೆ. ಹಲಸು, ಮಾವು, ಇತ್ಯಾದಿ ಫಲವಸ್ತುಗಳು ಇಲ್ಲಿವೆ. ಸುರಂಗ ವೀರ: ಕಲ್ಲು, ಮುಳ್ಳು ಮತ್ತು ಮುಳಿ ಹುಲ್ಲನ್ನು ಹೊಂದಿರುವ ಗುಡ್ಡದಲ್ಲಿ ಕೃಷಿ ಕನಸಿನ ಮಾತಾಗಿತ್ತು. ಅವರಿಗೆ ದೊರೆತ ಜಾಗದಲ್ಲಿ ಪ್ರಥಮ ಪ್ರಯತ್ನ ಮಾಡಿದ್ದು, ಜೀವನವನ್ನು ತೇದದ್ದು ನೀರಿಗಾಗಿ, ಪ್ರಥಮ ಸುರಂಗ 25 ಮೀ. ಉದ್ದವಾಗಿತ್ತು. ಆದರೆ, ನೀರು ಸಿಗಲಿಲ್ಲ. ಅದಕ್ಕಾಗಿ ಮತ್ತೂಂದು ಸುರಂಗ ನಿರ್ಮಾಣಕ್ಕೆ ಮುಂದಾದರು. ಸ್ವಲ್ಪ ಮೇಲ್ಭಾಗದಲ್ಲಿ ಸುರಂಗ ನಿರ್ಮಾಣವಾಯಿತು. 130 ಮೀಟರ್ ಉದ್ದದ ಸುರಂಗದಲ್ಲಿ ನೀರು ಬಂತು. ಭಗೀರಥನ ಪ್ರಯತ್ನ ಫಲಿಸಿತು. 2004ರಲ್ಲಿ ವಾರಣಾಶಿ ವರ್ಷದ ಕೃಷಿಕ ಪ್ರಶಸ್ತಿ, 2008-09ರಲ್ಲಿ ರಾಜ್ಯ ಕೃಷಿ ಪಂಡಿತ ಪ್ರಶಸ್ತಿ ಅವರಿಗೆ ಲಭಿಸಿರುವ ಪ್ರಶಸ್ತಿಗಳಲ್ಲಿ ಗಮನಾರ್ಹವಾದವು. ಶ್ರೀ ಪಡ್ರೆಯವರು ಬರೆದ “ಗುಡ್ಡದ ಮೇಲಿನ ಏಕವ್ಯಕ್ತಿ ಸೈನ್ಯ’ ಎಂಬ ಶೀರ್ಷಿಕೆಯ ಕೃತಿಯನ್ನು ಧಾರವಾಡ ಕೃಷಿ ಮಾಧ್ಯಮ ಕೇಂದ್ರ ಪ್ರಕಾಶಿಸಿದೆ.