Advertisement

Ranaji Trophy: ಪಂಜಾಬ್‌ ಮೊತ್ತವನ್ನು ಮೀರಿದ ಪಡಿಕ್ಕಲ್‌

10:58 PM Jan 06, 2024 | Team Udayavani |

ಹುಬ್ಬಳ್ಳಿ: ಪಂಜಾಬ್‌ ವಿರುದ್ಧದ ರಣಜಿ ಸೀಸನ್‌ ಆರಂಭಿಕ ಪಂದ್ಯ ದಲ್ಲಿ ಕರ್ನಾಟಕ ಭಾರೀ ಮೇಲುಗೈ ಸಾಧಿಸಿದೆ. ದ್ವಿತೀಯ ದಿನದಾಟದ ಅಂತ್ಯಕ್ಕೆ 6ಕ್ಕೆ 461 ಪೇರಿಸಿರುವ ರಾಜ್ಯ ತಂಡ, 309 ರನ್‌ ಮುನ್ನಡೆಯಲ್ಲಿದೆ. ಇದಕ್ಕೆ ಕಾರಣವಾದವರು ಶತಕವೀರ ರಾದ ದೇವದತ್ತ ಪಡಿಕ್ಕಲ್‌ ಮತ್ತು ಮನೀಷ್‌ ಪಾಂಡೆ.

Advertisement

80 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದು ಕೊಂಡಿದ್ದ ಎಡಗೈ ಬ್ಯಾಟರ್‌ ಪಡಿಕ್ಕಲ್‌ ಶನಿವಾರವೂ ಇದೇ ಲಯದಲ್ಲಿ ಸಾಗಿ ದ್ವಿಶತಕದ ಸಾಧ್ಯತೆಯೊಂದನ್ನು ಮೂಡಿಸಿದರು. ಆದರೆ ಏಳೇ ರನ್ನಿನಿಂದ ಈ ಗುರಿ ಮುಟ್ಟಲು ವಿಫ‌ಲರಾದರು. ಪಡಿಕ್ಕಲ್‌ ಗಳಿಕೆ 216 ಎಸೆತಗಳಿಂದ 193 ರನ್‌. ಈ ಅಮೋಘ ಬ್ಯಾಟಿಂಗ್‌ ವೇಳೆ 24 ಬೌಂಡರಿ ಹಾಗೂ 4 ಸಿಕ್ಸರ್‌ ಸಿಡಿಸಿದರು. ಅಂತಿಮವಾಗಿ ಪಂಜಾಬ್‌ ಮೊತ್ತವನ್ನು ಪಡಿಕ್ಕಲ್‌ ಒಬ್ಬರೇ ಮೀರಿ ನಿಂತ ಹೀರೋ ಎನಿಸಿದರು. ಪಂಜಾಬ್‌ ಪ್ರಥಮ ಇನ್ನಿಂಗ್ಸ್‌ನಲ್ಲಿ 152ಕ್ಕೆ ಆಲೌಟ್‌ ಆಗಿತ್ತು.

ಮತ್ತೋರ್ವ ಅನುಭವಿ ಬ್ಯಾಟರ್‌ ಮನೀಷ್‌ ಪಾಂಡೆ 118 ರನ್‌ ಬಾರಿಸಿದರು. 165 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 13 ಬೌಂಡರಿ ಹಾಗೂ 3 ಸಿಕ್ಸರ್‌ ಒಳಗೊಂಡಿತ್ತು. ಪಡಿಕ್ಕಲ್‌-ಪಾಂಡೆ 4ನೇ ವಿಕೆಟಿಗೆ 234 ರನ್‌ ರಾಶಿ ಹಾಕಿದರು.

ವಿಕೆಟ್‌ ಕೀಪರ್‌ ಎಸ್‌. ಶರತ್‌ ಕೂಡ ಪಂಜಾಬ್‌ ಬೌಲರ್‌ಗಳಿಗೆ ಸವಾಲಾಗಿ ಪರಿಣಮಿಸಿದರು. ಶರತ್‌ 55 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದು ಕೊಂಡಿದ್ದಾರೆ. ಇದಕ್ಕಾಗಿ ಅವರು 158 ಎಸೆತ ತೆಗೆದುಕೊಂಡರು. ಹೊಡೆದದ್ದು 5 ಬೌಂಡರಿ. ಇವರೊಂದಿಗೆ 15 ರನ್‌ ಗಳಿಸಿರುವ ವಿಜಯ್‌ಕುಮಾರ್‌ ವೈಶಾಖ್‌ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ಶುಭಾಂಗ್‌ ಹೆಗ್ಡೆ 77 ಎಸೆತ ನಿಭಾಯಿಸಿ 27 ರನ್‌ ಹೊಡೆದರು (2 ಬೌಂಡರಿ).

ಕರ್ನಾಟಕ 3ಕ್ಕೆ 142 ರನ್‌ ಗಳಿಸಿದಲ್ಲಿಂದ ಶನಿವಾರದ ಆಟ ಮುಂದುವರಿಸಿತ್ತು. ದ್ವಿತೀಯ ದಿನ ಕೇವಲ 3 ವಿಕೆಟ್‌ ಕಳೆದುಕೊಂಡು 319 ರನ್‌ ಪೇರಿಸಿತು.
ಪಂಜಾಬ್‌ ಬೌಲರ್ ಯಾವುದೇ ರೀತಿಯಲ್ಲಿ ಪರಿಣಾಮ ಬೀರದಾದರು. ಅರ್ಷದೀಪ್‌ ಸಿಂಗ್‌, ಪ್ರೇರಿತ್‌ ದತ್ತ ಮತ್ತು ನಮನ್‌ ಧಿರ್‌ ತಲಾ 2 ವಿಕೆಟ್‌ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್‌: ಪಂಜಾಬ್‌-152. ಕರ್ನಾಟಕ-6 ವಿಕೆಟಿಗೆ 461( ಪಡಿಕ್ಕಲ್‌ 193, ಪಾಂಡೆ 118, ಶರತ್‌ ಬ್ಯಾಟಿಂಗ್‌ 55, ಸಮರ್ಥ್ 38, ಶುಭಾಂಗ್‌ 27, ಧಿರ್‌ 46ಕ್ಕೆ 2, ಅರ್ಷದೀಪ್‌ 71ಕ್ಕೆ 2, ದತ್ತ 84ಕ್ಕೆ 2).

Advertisement

ಬಿಹಾರ ಕುಸಿತ
ಪಾಟ್ನಾ: ಮೋಹಿತ್‌ ಅವಸ್ಥಿ ಮತ್ತು ಶಿವಂ ದುಬೆ ಅವರ ಬೌಲಿಂಗ್‌ ಆಕ್ರಮಣಕ್ಕೆ ಸಿಲುಕಿದ ಆತಿಥೇಯ ಬಿಹಾರ ತೀವ್ರ ಬ್ಯಾಟಿಂಗ್‌ ಕುಸಿತಕ್ಕೆ ಸಿಲುಕಿದೆ. ಮುಂಬಯಿಯ 251ಕ್ಕೆ ಉತ್ತರವಾಗಿ 6 ವಿಕೆಟಿಗೆ 89 ರನ್‌ ಗಳಿಸಿ ಪರದಾಡುತ್ತಿದೆ.

ಮುಂಬಯಿ 9ಕ್ಕೆ 235 ರನ್‌ ಮಾಡಿದಲ್ಲಿಂದ ದಿನದಾಟ ಮುಂದುವರಿಸಿತ್ತು. ಬಿಹಾರ ಮೊದಲ ಓವರ್‌ನಿಂದಲೇ ವಿಕೆಟ್‌ ಕಳೆದುಕೊಳ್ಳತೊಡಗಿತು. ಮೋಹಿತ್‌ ಅವಸ್ಥಿ 22ಕ್ಕೆ 4 ಹಾಗೂ ಶಿವಂ ದುಬೆ 13ಕ್ಕೆ 2 ವಿಕೆಟ್‌ ಉಡಾಯಿಸಿದರು.

26 ರನ್‌ ಮಾಡಿರುವ ಆಕಾಶ್‌ ರಾಜ್‌ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಬಿಹಾರ ಸರದಿಯಲ್ಲಿ ಇವರದೇ ಗರಿಷ್ಠ ಗಳಿಕೆ.

ಎರಡು ತಂಡಗಳು
ಈ ಪಂದ್ಯದ ವೇಳೆ ಬಿಹಾರದ ಎರಡು ತಂಡಗಳು ಆಡಲು ಬಂದದ್ದು ಭಾರೀ ಗೊಂದಲ ಹಾಗೂ ವಿವಾದಕ್ಕೆ ಕಾರಣವಾಯಿತು. ಬಿಹಾರ ಕ್ರಿಕೆಟ್‌ ಮಂಡಳಿಯ ಅಧ್ಯಕ್ಷ ರಾಕೇಶ್‌ ತಿವಾರಿ ಅವರಿಂದ ಮಾನ್ಯತೆ ಪಡೆದ ತಂಡಕ್ಕೇ ಆಡುವ ಅನುಮತಿ ಲಭಿಸಿತು. ಉಚ್ಛಾಟಿತ ಬಿಸಿಎ ಕಾರ್ಯದರ್ಶಿ ಅಮಿತ್‌ ಕುಮಾರ್‌ ಅವರದು ಇನ್ನೊಂದು ತಂಡವಾಗಿತ್ತು.

ಪೂಜಾರ ಅಜೇಯ ಶತಕ

ರಾಜ್‌ಕೋಟ್‌: ಕಳಪೆ ಫಾರ್ಮ್ನಿಂದಾಗಿ ಟೆಸ್ಟ್‌ ತಂಡದಿಂದ ಕೈಬಿಡಲ್ಪಟ್ಟ ಚೇತೇಶ್ವರ್‌ ಪೂಜಾರ ಪ್ರಸಕ್ತ ರಣಜಜಿ ಋತುವಿನ ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ್ದಾರೆ. ಜಾರ್ಖಂಡ್‌ ವಿರುದ್ಧದ ಎಲೈಟ್‌ “ಎ’ ವಿಭಾಗದ ಪಂದ್ಯದ 2ನೇ ದಿನದಾಟದಲ್ಲಿ ಪೂಜಾರ 157 ರನ್‌ ಬಾರಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಇವರ ಬ್ಯಾಟಿಂಗ್‌ ಸಾಹಸದಿಂದ ಸೌರಾಷ್ಟ್ರ 4 ವಿಕೆಟಿಗೆ 406 ರನ್‌ ಪೇರಿಸಿದೆ. ಜಾರ್ಖಂಡ್‌ 142ಕ್ಕೆ ಸರ್ವಪತನ ಕಂಡಿತ್ತು. 4ನೇ ಕ್ರಮಾಂಕದಲ್ಲಿ ಆಡಲಿಳಿದ ಪೂಜಾರ 239 ಎಸೆತ ಎದುರಿಸಿದ್ದು, 19 ಬೌಂಡರಿ ಹೊಡೆದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next