Advertisement

ಏಪ್ರಿಲ್‌ 2ರಿಂದ ಓದು-ಬರಹ ಅಭಿಯಾನ ಆರಂಭ: ಸಚಿವ ಸುರೇಶ್‌ ಕುಮಾರ್‌

04:35 PM Mar 29, 2021 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರ ಪ್ರಾಯೋಜಿತ ಓದು-ಬರಹ (ಪಢನಾ-ಲಿಖನಾ) ಅಭಿಯಾನಕ್ಕೆ ಏಪ್ರಿಲ್‌ 2 ರಂದು ಚಾಲನೆ ನೀಡುವ ಮೂಲಕ ಮೇ-2021ರ ಒಳಗೆ 3.20 ಲಕ್ಷ ಅನಕ್ಷರಸ್ಥರನ್ನು ಸಾಕ್ಷರಸ್ಥರನ್ನಾಗಿ ಮಾಡಲು ಕ್ರಮ ವಹಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಹೇಳಿದ್ದಾರೆ.

Advertisement

ಲೋಕ ಶಿಕ್ಷಣ ನಿರ್ದೇಶನಾಲಯದ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ ಮಾತನಾಡಿದ ಅವರು, ರಾಯಚೂರು, ಯಾದಗಿರಿ, ಕಲಬುರಗಿ, ವಿಜಯಪುರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿನ 24 ತಾಲ್ಲೂಕು, 219 ಗ್ರಾಮ ಪಂಚಾಯಿತಿ ಮತ್ತು 19 ನಗರ/ಪಟ್ಟಣ ಪ್ರದೇಶಗಳಲ್ಲಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದ್ದು, 15 ರಿಂದ 50 ವರ್ಷದ 2.4 ಲಕ್ಷ ಮಹಿಳೆಯರು ಮತ್ತು 80,000 ಪುರುಷ ಅನಕ್ಷರಸ್ಥರಿಗೆ ಅಕ್ಷರ ಕಲಿಸುವ ಗುರಿ ಹೊಂದಲಾಗಿದೆ. ಕಲಿಕೆ ಪೂರ್ಣಗೊಂಡ ನಂತರ ಕಲಿಕಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಿ ಉತ್ತೀರ್ಣರಾದವರಿಗೆ ಇಲಾಖೆಯಿಂದ ಸಾಕ್ಷರತಾ ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದರು.

ಇದನ್ನೂ ಓದಿ:ಕೋವಿಡ್ ಸೋಂಕು ಪ್ರಯೋಗಾಲಯದಿಂದ ಸೋರಿಕೆಯಾಗಿಲ್ಲ: ವಿಶ್ವಸಂಸ್ಥೆ, ಚೀನಾ ವರದಿಯಲ್ಲೇನಿದೆ?

ರಾಜ್ಯದಲ್ಲಿ ಗುರುತಿಸಲಾಗಿರುವ 1.26 ಕೋಟಿ ಅನಕ್ಷರಸ್ಥರ ಪೈಕಿ ಈಗಾಗಲೇ 57 ಲಕ್ಷ ಜನರನ್ನು ಸಾಕ್ಷರರನ್ನಾಗಿ ಮಾಡಲಾಗಿದ್ದು, ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯದಂತೆ ಸಾಕ್ಷರತೆಯ ಪ್ರಮಾಣವನ್ನು ಮುಂದಿನ ದಿನಗಳಲ್ಲಿ ಹೊಸ ಸ್ಥರಕ್ಕೆ ಕೊಂಡೊಯ್ಯಲು ಇಲಾಖೆಯು ಕ್ರಿಯಾ ಯೋಜನೆಯನ್ನು ರೂಪಿಸುತ್ತಿದೆ.  ನವ ಸಾಕ್ಷರರಿಗೆ ಜೀವನೋಪಾಯ ಕೌಶಲ್ಯಗಳನ್ನು ದೊರಕಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಕೂಡಲೇ ಜನರ ಕ್ಷಮೆಯಾಚಿಸಬೇಕು: ಶ್ರೀರಾಮುಲು ವಾಗ್ದಾಳಿ

Advertisement

ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಯೋಗ: ಇತ್ತೀಚೆಗೆ ಗ್ರಾಮ ಪಂಚಾಯಿತಿ ಸದಸ್ಯರಾಗಿ ಚುನಾಯಿತರಾಗಿರುವ ಅನಕ್ಷರಸ್ಥ ಸದಸ್ಯರುಗಳಿಗೆ ಲೋಕ ಶಿಕ್ಷಣ ನಿರ್ದೇಶನಾಲಯದಿಂದ ನಿರಂತರ ಸಾಕ್ಷರತಾ ಕಾರ್ಯಕ್ರಮವನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಸುರೇಶ್‌ ಕುಮಾರ್‌, ಈ ಬಗ್ಗೆ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರೊಂದಿಗೆ ಚರ್ಚಿಸಿ, ಕೂಡಲೇ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು ನಿರ್ದೇಶಿಸಿದರು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆಯು ನಿರ್ವಹಿಸುತ್ತಿರುವ ಗ್ರಾಮೀಣ ಗ್ರಂಥಾಲಯಗಳಲ್ಲಿ ನವಸಾಕ್ಷರರುಗಳ ಕಲಿಕೆಗೆ ಪೂರಕವಾಗಿ ಪ್ರತ್ಯೇಕ ಆಸನಗಳು ಹಾಗೂ ಪುಸ್ತಕ ಸಂಗ್ರಹಣ ಕಪಾಟುಗಳನ್ನು ಪೂರೈಸುವ ವ್ಯವಸ್ಥೆಯಾಗಬೇಕು, ಇದಕ್ಕೆ ಪೂರ್ವಭಾವಿ ಕ್ರಮಗಳಿಗೆ ಕೂಡಲೆ ಚಾಲನೆ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಲೋಕ ಶಿಕ್ಷಣ ಇಲಾಖೆಯ ನಿರ್ದೇಶಕಿ ಶ್ರೀಮತಿ ಸುಶಮ ಗೋಡಬೋಲೆ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next