Advertisement

ಸ್ಥಳೀಯ ಅಕ್ಕಿ ವಿತರಣೆಗೆ ಭತ್ತದ ಬಿತ್ತನೆ ಹೆಚ್ಚಬೇಕು

01:21 AM Jan 22, 2022 | Team Udayavani |

ಉಡುಪಿ: ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಭತ್ತದ ಬಿತ್ತನೆ ಪ್ರಮಾಣ ಹೆಚ್ಚಾಗಿದ್ದರೂ ಇಳುವರಿ ನಿರೀಕ್ಷಿತ ಮಟ್ಟದಲ್ಲಿ ಏರಿಕೆಯಾಗಿಲ್ಲ. ಮುಂದಿನ ವರ್ಷದಿಂದ ಸ್ಥಳೀಯ ಅಕ್ಕಿ ವಿತರಣೆಗೆ ಬಿತ್ತನೆ ಹಾಗೂ ಇಳುವರಿ ಎರಡೂ ಹೆಚ್ಚಬೇಕಿದೆ.

Advertisement

ಹಿಂಗಾರು ಮತ್ತು ಮುಂಗಾರಿನಲ್ಲಿ ಪ್ರತೀ ವರ್ಷ ಸರಾಸರಿ 39 ಸಾವಿರಕ್ಕೂ ಅಧಿಕ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗುತ್ತದೆ. ಪ್ರತೀ ಹೆಕ್ಟೇರ್‌ಗೆ ಸರಾಸರಿ 41-42 ಕ್ವಿಂಟಾಲ್‌ ಇಳುವರಿ ಬರುತ್ತದೆ. ಭತ್ತವನ್ನು ಅಕ್ಕಿಯಾಗಿಸುವಾಗ ಸರಿಸುಮಾರು ಅರ್ಧದಷ್ಟು ಕಡಿಮೆಯಾಗುತ್ತದೆ. ಅಂದರೆ ಪ್ರತೀ ಹೆಕ್ಟೇರ್‌ಗೆ 26ರಿಂದ 28 ಕ್ವಿಂಟಾಲ್‌ ಅಕ್ಕಿ ಸಿಗುತ್ತಿದೆ.

2018-19ರಲ್ಲಿ ಸುಮಾರು 39 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ, 2019-20ರಲ್ಲಿ 39,500 ಹೆಕ್ಟೇರ್‌, 2020-21ರಲ್ಲಿ 40 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಇಳುವರಿ ಕ್ರಮವಾಗಿ ಪ್ರತೀ ಹೆಕ್ಟೇರ್‌ಗೆ 41 ಕ್ವಿಂಟಾಲ್‌, ತಲಾ 42 ಕ್ವಿಂಟಾಲ್‌ ದಾಖಲಾಗಿದೆ. ಅಕ್ಕಿಯ ಇಳುವರಿಯಲ್ಲಿ ಕ್ರಮವಾಗಿ ಪ್ರತೀ ಹೆಕ್ಟೇರ್‌ಗೆ 27 ಕ್ವಿಂಟಾಲ್‌, ತಲಾ 28 ಕ್ವಿಂಟಾಲ್‌ ಅಕ್ಕಿ ಲಭ್ಯವಾಗಿದೆ.

ಹಡಿಲು ಭೂಮಿ
ಕೃಷಿಯಿಂದ ಬಿತ್ತನೆ ಹೆಚ್ಚಳ
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಕೇದಾರೋತ್ಥಾನ ಟ್ರಸ್ಟ್‌ ನಡೆಸಿದ ಹಡಿಲು ಭೂಮಿ ಕೃಷಿ ಆಂದೋಲನದಿಂದ ಸುಮಾರು 4,400 ಎಕ್ರೆ ಪ್ರದೇಶದಲ್ಲಿ ಭತ್ತದ ನಾಟಿ ಮಾಡಲಾಗಿತ್ತು. ಇದರಿಂದ ಪ್ರೇರಣೆಗೊಂಡ ಗದ್ದೆಗಳ ಮಾಲಕರು ಸುಮಾರು 600 ಎಕ್ರೆ ಪ್ರದೇಶದಲ್ಲಿ ಸಾಗುವಳಿ ಮಾಡಿದ್ದರು. ಇದರ ಫ‌ಲವಾಗಿ ಸುಮಾರು 10 ಸಾವಿರ ಟನ್‌ ಕುಚ್ಚಲಕ್ಕಿಯ ಉತ್ಪಾದನೆಯೂ ಆಗಿದೆ. ಇದೊಂದು ದೊಡ್ಡ ಅಭಿಯಾನದಂತೆ ನಡೆದಿದ್ದು, ಜಿಲ್ಲೆಯ ಭತ್ತದ ಇಳುವರಿ 2020-21ರಲ್ಲಿ ಹೆಚ್ಚಾಗಲು ಕಾರಣ.

ಬಿತ್ತನೆ, ಇಳುವರಿ ಹೆಚ್ಚಬೇಕು
ಕೇಂದ್ರ ಸರಕಾರ ಸ್ಥಳೀಯ ಭತ್ತ ಖರೀದಿ ಹಾಗೂ ಪಡಿತರ ವ್ಯವಸ್ಥೆ ಯಲ್ಲಿ ಸ್ಥಳೀಯ ಕುಚ್ಚಲಕ್ಕಿ ವಿತರಣೆಗೆ ಅನುಮತಿ ನೀಡಿದೆ. ಉಡುಪಿ ಜಿಲ್ಲೆಗೆ ಸುಮಾರು 42 ಸಾವಿರ ಕ್ವಿಂಟಾಲ್‌ ಅಕ್ಕಿ ತಿಂಗಳಿಗೆ ಬೇಕಾಗುತ್ತದೆ. ಹೀಗಾಗಿ ಜಿಲ್ಲೆಯಲ್ಲಿ ಭತ್ತದ ಬಿತ್ತನೆಯೂ ಹೆಚ್ಚಾಗಬೇಕು. ಇಳುವರಿಯೂ
ಹೆಚ್ಚಾಗಬೇಕು.

Advertisement

ಗದ್ದೆಗೆ ಉಪ್ಪುನೀರು
ಬೈಂದೂರು,ಕುಂದಾಪುರ, ಕಾಪು ತಾಲೂಕುಗಳಲ್ಲಿ ಗದ್ದೆಗೆ ಉಪ್ಪು ನೀರು ಹರಿಯುವುದರಿಂದ ಭತ್ತದ ಇಳುವರಿ ಕಡಿಮೆಯಾಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿಯೂ ಜಿಲ್ಲಾಡಳಿತ, ಕೃಷಿ ಇಲಾಖೆ ವಿಶೇಷ ಕ್ರಮ ಕೈಗೊಳ್ಳಬೇಕು. ಈಗಾಗಲೇ ಇರುವ ಕಿಂಡಿ ಅಣೆಕಟ್ಟುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಮೂಲಕ ಉಪ್ಪು ನೀರು ಹರಿಯುವುದನ್ನು ತಪ್ಪಿಸಬಹುದು ಎಂಬುದು ರೈತರ ಅಭಿಪ್ರಾಯ.

ಜಿಲ್ಲೆಯಲ್ಲಿ ಭತ್ತದ ಬಿತ್ತನೆ ಹಾಗೂ ಇಳುವರಿಯಲ್ಲಿ ಹೆಚ್ಚೇನೂ ವ್ಯತ್ಯಾಸವಾಗುತ್ತಿಲ್ಲ. ಇಳುವರಿ ಹೆಚ್ಚಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಮತ್ತು ರೈತರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ.
– ಕೆಂಪೇಗೌಡ,
ಉಪನಿರ್ದೇಶಕ, ಕೃಷಿ ಇಲಾಖೆ

ಭತ್ತ ಖರೀದಿ ಕೇಂದ್ರದಲ್ಲಿ ಓರ್ವ ರೈತ ನೋಂದಣಿ!
ಉಡುಪಿ: ಕೇಂದ್ರ ಸರಕಾರ ಸ್ಥಳೀಯ ಭತ್ತ ಖರೀದಿ ಹಾಗೂ ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ ವಿತರಣೆಗೆ ಅವಕಾಶ ನೀಡಿರುವುದರಿಂದ ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರದಲ್ಲಿ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಈವರೆಗೆ ಉಡುಪಿ ತಾಲೂಕಿನ ಓರ್ವ ರೈತ ಮಾತ್ರ ನೋಂದಾಯಿಸಿಕೊಂಡಿದ್ದಾರೆ.

ಸಾಮಾನ್ಯ ಭತ್ತಕ್ಕೆ 1,940 ರೂ. ಹಾಗೂ ಗ್ರೇಡ್‌ -ಎ ಭತ್ತಕ್ಕೆ 1,960 ರೂ. ಬೆಂಬಲ ಬೆಲೆ ನಿಗದಿ ಮಾಡಲಾಗಿದೆ. ಬೇರೆ ಜಿಲ್ಲೆಗಳಲ್ಲಿ ಖರೀದಿ ಪ್ರಕ್ರಿಯೆ ಈಗಾಗಲೇ ಆರಂಭವಾದರೆ ಉಡುಪಿಯಲ್ಲಿನ್ನೂ ಆಗಿಲ್ಲ. ಕಾರಣ ರೈತರು ನೋಂದಾಯಿಸಿಕೊಳ್ಳದೇ ಇರುವುದು.

ಕುಂದಾಪುರದ ಮೂವರು ರೈತರು ನೋಂದಾಯಿಸಿಕೊಳ್ಳುವುದಾಗಿ ದೂರವಾಣಿ ಮೂಲಕ ಖರೀದಿ ಕೇಂದ್ರಕ್ಕೆ ತಿಳಿಸಿದ್ದಾರೆ. ಬಹುತೇಕ ರೈತರು ಈಗಾಗಲೇ ಭತ್ತವನ್ನು ಮಾರಾಟ ಮಾಡಿರುವುದರಿಂದ ಖರೀದಿ ಕೇಂದ್ರಕ್ಕೆ ನೀಡಲು ಅವರಲ್ಲಿ ಭತ್ತ ಇಲ್ಲದೇ ಇರಬಹುದು. ಫೆಬ್ರವರಿ ಅಂತ್ಯದವರೆಗೂ ನೋಂದಣಿಗೆ ಅವಕಾಶ ಇದ್ದು, ಎಷ್ಟು ರೈತರು ನೋಂದಾಯಿಸಿಕೊಳ್ಳುತ್ತಾರೆ ಎಂಬುದರ ಆಧಾರದಲ್ಲಿ ಭತ್ತ ಖರೀದಿ ಆರಂಭವಾಗುತ್ತದೆ ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕಿ ಅನುರಾಧಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next