ಗಂಗಾವತಿ: ಭತ್ತದ ಬೆಲೆ ಕುಸಿತದಿಂದ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಬೆಳೆದ ಭತ್ತದ ಬೆಳೆ ಇದೀಗ ಕಟಾವಿಗೆ ಬಂದಿದ್ದು, ರೈತರು ಬೆಳೆದ ಬೆಳೆಗೆ ಬೆಲೆ ಇಲ್ಲದ ಮಧ್ಯವರ್ತಿಗಳು ಅಡ್ಡಾದಿಡ್ಡಿ ಕೇಳುವ ಮೂಲಕ ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡುತ್ತಿದ್ದಾರೆ.
ಕಳೆದ ನಾಲ್ಕೈದು ವರ್ಷಗಳಿಂದ ಒಂದೇ ಬೆಳೆ ಆಗಿರುವ ಕಾರಣ ರೈತರು ಭತ್ತ ನಾಟಿ ಮಾಡಿ ಉತ್ತಮ ಬೆಲೆ ನಿರೀಕ್ಷೆಯಿಂದ ಭತ್ತ ಕಟಾವು ಮಾಡುತ್ತಿದ್ದು, ಬೆಲೆ ಕುಸಿತದಿಂದ ಭತ್ತವನ್ನು ಕೇಳುವವರೇ ಇಲ್ಲದಂತಾಗಿದೆ. ರೈತರೆ ವ್ಯಾಪಾರಿಗಳಿಗೆ ದುಂಬಾಲು ಬಿದ್ದು, ಖರೀದಿಸುವಂತೆ ಮನವಿ ಮಾಡಿದರೆ ಅಡ್ಡಾದಿಡ್ಡಿಗೆ ಭತ್ತ ಖರೀದಿ ಮಾಡಲಾಗುತ್ತಿದೆ. ಭತ್ತದ ಬೆಳೆ ಬೆಳೆಯಲು ಸಾಲ ಮಾಡಿದ ರೈತರು ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ.
ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರ ಭೂಮಿಗೆ ನೀರಿನ ಕೊರತೆಯ ಮಧ್ಯೆ ಕೊಪ್ಪಳ, ಗಂಗಾವತಿ, ಸಿಂಧನೂರು, ಹೊಸಪೇಟೆ, ಸಿರಗುಪ್ಪಾ ಮತ್ತು ಬಳ್ಳಾರಿ ತಾಲೂಕಿನಲ್ಲಿ ಸುಮಾರು 1.50 ಎಕರೆ ಪ್ರದೇಶದಲ್ಲಿ ಭತ್ತವನ್ನು ಬೆಳೆಯಲಾಗಿದೆ. ಇದೀಗ ಭತ್ತದ ಕಟಾವು ಕಾರ್ಯ ನಡೆದಿದ್ದು ಅನ್ಯ ರಾಜ್ಯಗಳಿಂದ ಭತ್ತವನ್ನು ಖರೀದಿ ಮಾಡುತ್ತಿರುವುದರಿಂದ ಸ್ಥಳೀಯ ಭತ್ತವನ್ನು ಖರೀದಿ ಮಾಡುವವರೇ ಇಲ್ಲದಾಗಿದೆ.
ಈಗಾಗಲೇ ಕೇಂದ್ರ ಸರಕಾರ ರೈತರ ಬೆಳೆಯ ಇಳುವರಿಗೆ ಹೋಲಿಸಿ ಶೇ.50ರಷ್ಟು (100 ಕೆಜಿ ಭತ್ತಕ್ಕೆ 1750.ರೂ ) ಬೆಂಬಲ ಬೆಲೆ ಘೋಷಣೆ ಮಾಡಿದೆ. ಕೇಂದ್ರ ಸರಕಾರ ರೈತರ ಆದಾಯ ದುಪ್ಪಟ್ಟು ಮಾಡುವ ಭರವಸೆ ನೀಡಿ ಕಾನೂನು ಮಾಡದೇ ಬರೀ ಭರವಸೆ ನೀಡುವ ಮೂಲಕ ರೈತರನ್ನು ನಿರ್ಲಕ್ಷಿಸಿದೆ ಎಂಬ ಆರೋಪ ವ್ಯಾಪಕವಾಗಿದೆ. ರೈತರು ಬೆಳೆದ ಬೆಳೆಯ ಬೆಲೆ ಕುಸಿದ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರ ನೆರವಿಗೆ ಬಂದು ರೈತರ ಖರೀದಿ ಕೇಂದ್ರಗಳನ್ನು ಆರಂಭಿಸಿ ರೈತರ ಪೈರುಗಳನ್ನು ಖರೀದಿ ಮಾಡುವ ಮೂಲಕ ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಗೆ ದಾರಿಯಾಗುತ್ತದೆ. ಈಗಾಗಲೇ ಭತ್ತ ಕಟಾವು ಕಾರ್ಯ ನಡೆದು 20 ದಿನಗಳು ಕಳೆದರೂ ಬೆಲೆ ಪ್ರತಿದಿನ ಕಡಿಮೆಯಾಗುತ್ತಿದೆ. ಪ್ರಸ್ತುತ 75 ಕೆಜಿ ಭತ್ತಕ್ಕೆ 1250 ರೂ. ನಿಗದಿಯಾಗಿದೆ.
ಆರಂಭವಾಗದ ಖರೀದಿ ಕೇಂದ್ರ: ಭತ್ತದ ಬೆಲೆ ಕುಸಿತದಿಂದಾಗಿ ರೈತರು ಸಂಕಷ್ಟದಲ್ಲಿದ್ದರೂ ಸರಕಾರ ಇದುವರೆಗೂ ಭತ್ತ ಖರೀದಿ ಕೇಂದ್ರ ಆರಂಭಿಸಿಲ್ಲ. ರೈತರು ಮತ್ತು ಜನಪ್ರತಿನಿಧಿಗಳು ಭತ್ತ ಖರೀದಿ ಕೇಂದ್ರ ಆರಂಭಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಭತ್ತದ ಬೆಲೆ ಕುಸಿತದಿಂದ ರೈತರು ಸಂಕಷ್ಟದಲ್ಲಿದ್ದು, ಇವರ ನೆರವಿಗೆ ಜಿಲ್ಲಾಡಳಿತ ಇನ್ನೂ ಬಂದಿಲ್ಲ. ನಾಲ್ಕೈದು ವರ್ಷಗಳಿಂದ ಅಚ್ಚುಕಟ್ಟು ಪ್ರದೇಶದಲ್ಲಿ ಒಂದೇ ಬೆಳೆ ಇರುವ ಕಾರಣ ರೈತರು ಸಾಲದ ಸುಳಿಯಲ್ಲಿದ್ದಾರೆ. ಈ ವರ್ಷವೂ ಬೇಸಿಗೆ ಬೆಳೆಗೆ ನೀರಿನ ಕೊರತೆಯುಂಟಾಗುವ ಸಂಭವವಿದ್ದು, ಭತ್ತದ ಬೆಲೆ ಕುಸಿತ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜಿಲ್ಲಾಡಳಿತ ಕೂಡಲೇ ರೈತರ ನೆರವಿಗೆ ಬಂದು ಖರೀದಿ ಕೇಂದ್ರ ಆರಂಭಿಸದಿದ್ದರೆ ರೈತರ ಪರಿಸ್ಥಿತಿ ಗಂಭೀರವಾಗಲಿದೆ.
ಭತ್ತದ ಖರೀದಿ ಕೇಂದ್ರಗಳನ್ನು ಆರಂಭಿಸುವ ಕುರಿತು ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಸರಕಾರ ಯಾವುದೇ ನಿರ್ದೇಶನ ನೀಡಿಲ್ಲ. ಇನ್ನೊಮ್ಮೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಖರೀದಿ ಕೇಂದ್ರ ಆರಂಭಿಸುವ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ.
ಪ್ರಭಾಕರ ಅಂಗಡಿ,
ಸಹಾಯಕ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ.
ಕೆ.ನಿಂಗಜ್ಜ