ರಾಯಚೂರು: ಖರೀದಿ ಕೇಂದ್ರದ ಮಿತಿ ಮುಗಿದ ಹಿನ್ನೆಲೆಯಲ್ಲಿ ನೋಂದಣಿ ಸ್ಥಗಿತಗೊಳಿಸಿದ್ದು, ಈಗ ಎಪಿಎಂಸಿಯಲ್ಲಿ ಭತ್ತವನ್ನು ಬೇಕಾಬಿಟ್ಟಿ ದರಕ್ಕೆ ಖರೀದಿ ಮಾಡಲಾಗುತ್ತಿದೆ. ಇದರಿಂದ ಭತ್ತ ಬೆಳೆಗಾರರು ಕಂಗೆಡುವಂತಾಗಿದೆ.
ತಾಲೂಕಿನ ರಾಜೊಳ್ಳಿಯ ರೈತ ಭೀಮಯ್ಯ ಎಂಬಾತ ಸೋಮವಾರ ಇಲ್ಲಿನ ಎಪಿಎಂಸಿಯಲ್ಲಿ 80 ಕ್ವಿಂಟಲ್ ಸೋನಾಮಸೂರಿ ಭತ್ತ ತಂದಿದ್ದಾನೆ. ಆದರೆ. ಕೇವಲ 900 ರೂ. ದರ ನಿಗದಿ ಮಾಡಿದ್ದು, ಅರ್ಧದಷ್ಟು ದರ ಕುಸಿತವಾಗಿದೆ. ಖರೀದಿ ಕೇಂದ್ರಗಳಲ್ಲಿ ಕೇಳಿದರೆ ಈಗಾಗಲೇ ನೋಂದಣಿ ಮಾಡಿದ ರೈತರ ಭತ್ತ ಮಾತ್ರ ಖರೀದಿಸುತ್ತಿದ್ದೇವೆ. ಹೊಸದಾಗಿ ನೋಂದಣಿ ಮಾಡಿಕೊಳ್ಳುತ್ತಿಲ್ಲ ಎನ್ನುತ್ತಿರುವುದು ರೈತರನ್ನು ಉಭಯ ಸಂಕಟಕ್ಕೆ ದೂಡಿದೆ.
ಬೇಸಿಗೆ ಬೆಳೆಯನ್ನು ತಡವಾಗಿ ನಾಟಿ ಮಾಡಿದ ರೈತರಿಗೆ ಈಚೆಗೆ ಬೆಳೆ ಕೈಗೆಟುಕಿದೆ. ಅಲ್ಲದೇ, ಲಾಕ್ ಡೌನ್ ಕಾರಣಕ್ಕೆ ರೈತರು ಹೊರಗೆ ಓಡಾಡಲಾಗದೆ ಭತ್ತ ಮಾರಲಾಗಿಲ್ಲ. ಈಗ ಮುಂಗಾರು ಶುರುವಾಗಿದ್ದು, ವರ್ತಕರಿಂದ ಸಾಲ ಪಡೆಯುವ ರೈತರೇ ಹೆಚ್ಚು. ಈ ಅವಕಾಶ ಬಳಸಿಕೊಂಡ ವರ್ತಕರು ಭತ್ತಕ್ಕೆ ತೀರ ಕಡಿಮೆ ದರ ನಿಗದಿ ಮಾಡಿದ್ದಾರೆ. ಈ ಹಿಂದೆ ಮುಕ್ತ ಮಾರುಕಟ್ಟೆಯಲ್ಲಿಯೇ 1600-1700 ರೂ. ದರ ಇದ್ದರೆ, ಖರೀದಿ ಕೇಂದ್ರಗಳಲ್ಲಿ 1830 ರೂ. ದರವಿತ್ತು. ಖರೀದಿ ಕೇಂದ್ರದಲ್ಲಿ ಒಬ್ಬ ರೈತರಿಂದ 40 ಕ್ವಿಂಟಲ್ ಮಾತ್ರ ಖರೀದಿಸಿದ ಕಾರಣ ಸಾಕಷ್ಟು ರೈತರು ಮುಕ್ತ ಮಾರುಕಟ್ಟೆಯಲ್ಲಿ ಭತ್ತ ಮಾರಿದ್ದಾರೆ. ಕಳೆದ ಬಾರಿ ಮಳೆ ಜೋರಾದ ಕಾರಣ ಎರಡನೇ ಬೆಳೆಗೂ ನೀರು ಸಿಕ್ಕಿದ್ದು ಭತ್ತ ಹೆಚ್ಚಾಗಿ ಬೆಳೆದಿದ್ದಾರೆ. ಹೀಗಾಗಿ ಭತ್ತದ ಆವಕ ಹೆಚ್ಚಾಗಿದೆ. ಈಗ ಬಹುತೇಕ ರೈಸ್ ಮಿಲ್‌ಗಳು ತಮ್ಮ ಸಾಮರ್ಥ್ಯಕ್ಕಿಂತ ಅಧಿಕ ಉತ್ಪಾದನೆಯಲ್ಲಿ ತೊಡಗಿವೆ.
ತಡವಾಗಿ ಮಾರುಕಟ್ಟೆಗೆ ಬಂದ ಭತ್ತವನ್ನು ಮಾತ್ರ ಬೇಕಾಬಿಟ್ಟಿ ದರಕ್ಕೆ ಕೇಳುತ್ತಿರುವುದು ರೈತರಿಗೆ ಸಂಕಷ್ಟ ತಂದೊಡ್ಡಿದೆ. ಕನಿಷ್ಠ ಪಕ್ಷ ಬೆಂಬಲ ಬೆಲೆಯಡಿ ಖರೀದಿಗೆ ಇನ್ನಷ್ಟು ದಿನ ಕಾಲಾವಕಾಶ ಕೊಡಬೇಕು ಎನ್ನುವುದು ರೈತರ ಒತ್ತಾಸೆಯಾಗಿದೆ.
ಭತ್ತದ ಬೇಸಿಗೆ ಬೆಳೆ ತಡವಾಗಿ ಕೈಗೆಟುಕಿದ್ದು, ಲಾಕ್‌ಡೌನ್ ಇರುವ ಕಾರಣ ರೈತರು ಮಾರಾಟ ಮಾಡಲಾಗಿಲ್ಲ. ಕೆಲ ರೈತರಿಗೆ ಮಾಹಿತಿ ಇಲ್ಲದೇ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಲ್ಲ. ಆದರೆ, ಈಗ ದರ ಕುಸಿದಿದ್ದು, ರೈತರು ನಷ್ಟಕ್ಕೆ ತುತ್ತಾಗುವ ಭೀತಿ ಇದೆ. ಹೀಗಾಗಿ ಖರೀದಿ ಕೇಂದ್ರಗಳಲ್ಲಿ ನೋಂದಣಿಗೆ ಇನ್ನೂ 15 ದಿನ ಕಾಲಾವಕಾಶ ನೀಡಿ ಸರ್ಕಾರವೇ ಭತ್ತ ಖರೀದಿಸಬೇಕು. –
ಲಕ್ಷ್ಮಣಗೌಡ ಕಡಗಂದೊಡ್ಡಿ, ರೈತ ಸಂಘದ ಮುಖಂಡ