ಕಾಸರಗೋಡು: ರಾಜ್ಯದಲ್ಲಿ ಎದುರಾಗುತ್ತಿರುವ ಹವಾಮಾನ ವ್ಯತ್ಯಾಸ ದಿಂದಾಗಿ ಭತ್ತ ಉತ್ಪಾದನೆ ಬಗೆಗಿನ ನಿರೀಕ್ಷೆಗಳು ಬುಡಮೇಲಾಗುತ್ತಿವೆ. ಅಕಾಲಿಕ ಮಳೆಯಿಂದಾಗಿ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಭತ್ತ ಕೃಷಿಗೆ ಹಾನಿ ಯಾಗಿದೆ. ಕೃಷಿ ಇಲಾಖೆಯ ಸೆ. 16ರ ವರೆಗಿನ ಅಂಕಿಅಂಶದಂತೆ ಕೇರಳದಲ್ಲಿ 4 ಕೋಟಿ ರೂ.ಯಷ್ಟು ಭತ್ತ ಕೃಷಿ ನಾಶವಾಗಿದೆ.
ಪ್ರಥಮ ಬೆಳೆ ಕೊಯ್ಲು ದಿನಗಳಾಗಿರುವ ಈ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಭಾರೀ ಮಳೆ ಸುರಿಯುತ್ತಿರುವುದರಿಂದಾಗಿ ಗದ್ದೆಯಲ್ಲಿ ಮಳೆ ನೀರು ನಿಂತಿರುವುದರಿಂದ ಕೊಯ್ಲು ಅಸಾಧ್ಯವಾಗಿದೆ. ರಾಜ್ಯದಲ್ಲಿ 947 ಹೆಕ್ಟೇರ್ ಪ್ರದೇಶದಲ್ಲಿ ಭತ್ತಕೃಷಿ ಹಾನಿಗೀಡಾಗಿದೆ. ಈ ಮೂಲಕ 3,79,07,425 ರೂಪಾಯಿ ನಷ್ಟ ಸಂಭವಿಸಿದೆ ಎಂದು ಕೃಷಿ ಇಲಾಖೆಯ ಅಂಕಿಅಂಶದಲ್ಲಿ ಸೂಚಿಸಿದೆ.
ಕಾಲಕ್ಕೆ ತಕ್ಕಂತೆ ಮಳೆ ಬಾರದೆ ಈ ಬಾರಿ ಭತ್ತ ನಾಟಿ ವಿಳಂಬವಾಗಿತ್ತು. ಕೆಲವೆಡೆ ಕೆಲವು ದಿನಗಳಷ್ಟೇ ಮಳೆ ಸುರಿದಿತ್ತು. ಇದರಿಂದಾಗಿ ನಾಟಿ ಮಾಡಿದ ಭತ್ತದ ಗಿಡಗಳು ಒಣಗಿ ಹೋಗಿದ್ದವು. ಆರಂಭದಲ್ಲಿ ಸುಮಾರು 24 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಮಾಡಿದ ಭತ್ತದ ಗಿಡಗಳು ಸಂಪೂರ್ಣವಾಗಿ ನಾಶವಾಗಿದ್ದವು. ಈ ಮೂಲಕ ಲಕ್ಷಾಂತರ ರೂಪಾಯಿಗಳ ನಾಶ ನಷ್ಟ ಸಂಭಿಸಿತ್ತು.
ಮುಂದಿನ ತಿಂಗಳು ಅಂದರೆ ಅಕ್ಟೋ ಬರ್ 1ರಿಂದ ರಾಜ್ಯದಲ್ಲಿ ಭತ್ತ ಸಂಗ್ರಹ ನಡೆಯಲಿರುವಂತೆ ಭಾರೀ ಮಳೆ ಯಾಗುತ್ತಿದೆ. ಇದರಿಂದಾಗಿ ನಿರೀಕ್ಷಿತ ಮಟ್ಟ ದಲ್ಲಿ ಭತ್ತ ಸಂಗ್ರಹ ಅಸಾಧ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಭತ್ತದ ಗಿಡಗಳು ಹೂಬಿಟ್ಟು ಸುಮಾರು 25ರಿಂದ 30 ದಿನಗಳಲ್ಲಿ ಕೊಯ್ಲು ಸಾಧ್ಯವಾಗುತ್ತದೆ. ಅಂತಹ ಸಂದರ್ಭದಲ್ಲೇ ಭಾರೀ ಮಳೆಯಾಗುತ್ತಿರುವುದರಿಂದ ಬೆಳೆದು ನಿಂತ ಭತ್ತ ಉದುರತೊಡಗಿದೆ. ಕೆಲವೆಡೆ ಉದುರಿದ ಭತ್ತ ಮೊಳಕೆಯೊಡೆಯುತ್ತಿದೆ. ಇದರಿಂದಾಗಿ ಭತ್ತ ಬೆಳೆದ ಕೃಷಿಕ ತಲೆಮೇಲೆ ಕೈಯಿಟ್ಟು ಕುಳಿತುಕೊಳ್ಳಬೇಕಾದಂತಹ ಪರಿಸ್ಥಿತಿ ಕೆಲವೆಡೆ ಎದುರಾಗಿದೆ. ಅಕಾಲಿಕ ಮಳೆಯ ಪರಿಣಾಮವಾಗಿ ಗದ್ದೆಗಳಲ್ಲಿ ಮಳೆ ನೀರು ನಿಂತು ಬೆಳೆದ ಭತ್ತ ಉದುರುತ್ತಿದೆಯಲ್ಲದೆ ಕೆಲವೆಡೆ ಭತ್ತದ ಗಿಡಗಳಿಗೆ ರೋಗವೂ ಹರಡುತ್ತಿದೆ. ಈ ಮೂಲಕ ಭತ್ತದ ಗಿಡಗಳು ಅಡ್ಡಕ್ಕೆ ಬೀಳಲಾರಂಭಿಸಿವೆ. ಅಕಾಲಿಕ ಮಳೆಯ ದುಷ್ಪರಿಣಾಮದಿಂದಾಗಿ ಭತ್ತ ಫಸಲು ಕಡಿಮೆಯಾಗಿದ್ದು, ಇದರಿಂದಾಗಿ ಈ ವರ್ಷ ಭತ್ತ ಸಂಗ್ರಹ ನಿರೀಕ್ಷೆಯಂತೆ ಯಶಸ್ವಿಯಾಗದು ಮತ್ತು ನಿರೀಕ್ಷೆಯಂತೆ ಸಂಗ್ರಹ ಸಾಧ್ಯವಾಗದು ಎನ್ನುವ ಹಂತಕ್ಕೆ ತಲುಪಿದೆ.
ಕೃಷಿ ಇಲಾಖೆಯ ಅಂಕಿ ಅಂಶದಂತೆ ಈ ವರ್ಷದ ಪ್ರಥಮ ಬೆಳೆಯಲ್ಲಿ ಶೇ.20 ರಷ್ಟು ಭತ್ತ ಉತ್ಪಾದನೆ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ರಾಜ್ಯದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆಯುವ ಆಲಪ್ಪುಳ, ತೃಶ್ಶೂರು, ಪಾಲ್ಗಾಟ್ ಜಿಲ್ಲೆಗಳಲ್ಲಿ ಉತ್ಪಾದಿಸುವ ಭತ್ತದ ಪೈಕಿ ಮೂರನೇ ಒಂದಂಶದಷ್ಟು ಮಾತ್ರವೇ ಈ ಬಾರಿ ಲಭಿಸಲಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ವರ್ಷ ಒಂದು ಲಕ್ಷ ಮೆಟ್ರಿಕ್ ಟನ್ ಭತ್ತ ಸಂಗ್ರಹಿಸಲು ತೀರ್ಮಾನಿಸಲಾಗಿತ್ತು. ಇದಕ್ಕಾಗಿ ಪ್ರಾಥಮಿಕ ಪ್ರಕ್ರಿಯೆ ನಡದಿತ್ತು. ಇದಕ್ಕಾಗಿ 60 ಸಾವಿರ ಭತ್ತ ಕೃಷಿಕರನ್ನು ನೋಂದಾಯಿಸಲಾಗಿತ್ತು. ಆದರೆ ಅಕಾಲಿಕ ಮಳೆಯ ಪರಿಣಾಮವಾಗಿ ನಿರೀಕ್ಷೆಯಂತೆ ಭತ್ತ ಸಂಗ್ರಹ ಸಾಧ್ಯವಾಗದು ಎಂಬುದು ಕೃಷಿ ಇಲಾಖೆ ಅಧಿಕಾರಿಗಳ ಅಂಬೋಣ.
ಇತರ ಕೃಷಿಗೂ ಹಾನಿ
ಅಕಾಲಿಕ ಮಳೆಯ ದುಷ್ಪರಿಣಾಮದಿಂದಾಗಿ ಭತ್ತದಂತೆ ಇತರ ಕೃಷಿಗೂ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ.
ಈ ಬಾರಿ ಬಾಳೆ ಕೃಷಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. ಕಳೆದ ಮೂರು ತಿಂಗಳಲ್ಲಿ 299 ಹೆಕ್ಟೇರ್ ಪ್ರದೇಶದಲ್ಲಿ ಗೊನೆ ಬಿಟ್ಟ ಬಾಳೆ ಹಾಗೂ 239 ಹೆಕ್ಟೇರ್ ಪ್ರದೇಶದಲ್ಲಿ ಗೊನೆ ಬಿಡದ ಬಾಳೆ ಕೃಷಿ ಹಾನಿಗೀಡಾಗಿದೆ. ಈ ಮೂಲಕ 49 ಕೋಟಿ ರೂಪಾಯಿಯಷ್ಟು ನಷ್ಟ ಉಂಟಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಹವಾಮಾನ ವ್ಯತ್ಯಾಸದಿಂದಾಗಿ ಕೇರಳದಲ್ಲಿ ಕೃಷಿ ರೀತಿ ಬದಲಾಗುತ್ತಿದೆ. ಈ ಮೂಲಕ ಕೃಷಿ ಬೆಳೆ ಹಾನಿಯಾಗಿ ಭಾರೀ ಪ್ರಮಾಣದಲ್ಲಿ ನಾಶನಷ್ಟ ಸಂಭವಿಸುತ್ತಿದೆ ಎಂದು ಕೃಷಿ ವಿಶ್ವವಿದ್ಯಾಲಯದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 1995ರ ಬಳಿಕ ಕೇರಳದಲ್ಲಿ ತಾಪಮಾನದಲ್ಲಿ ಹೆಚ್ಚಳ ಉಂಟಾಗತೊಡಗಿತು. ಇದೂ ಕೂಡ ಕೃಷಿ ಬೆಳೆ ನಾಶಕ್ಕೆ ಕಾರಣವಾಗಿದೆ. ಅಲ್ಲದೆ ಬರಗಾಲ ಕೂಡ ಕೇರಳದಲ್ಲಿ ಕೃಷಿ ಮೇಲೆ ದುಷ್ಪರಿಣಾಮ ಬೀರಿದೆ. ವರ್ಷದಿಂದ ವರ್ಷಕ್ಕೆ ಕೇರಳದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಇದರ ದುಷ್ಪರಿಣಾಮ ಕೃಷಿಯ ಮೇಳೆ ಉಂಟಾಗುತ್ತಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.