Advertisement

ಖರೀದಿ ಕೇಂದ್ರವಿಲ್ಲದೇ ಭತ್ತಕ್ಕೆ ಬೆಲೆಯಿಲ್ಲ

08:51 PM Jan 29, 2020 | Team Udayavani |

ಕೊಳ್ಳೇಗಾಲ: ತಾಲೂಕಿನಲ್ಲಿ ರೈತರು ಲಾಭ ಗಳಿಸುವ ಉತ್ಸಾಹದಿಂದ ಭತ್ತವನ್ನು ಬೆಳೆದಿದ್ದಾರೆ. ಆದರೆ, ಬೆಳೆದ ಬೆಳೆಗೆ ಸೂಕ್ತ ಭತ್ತ ಖರೀದಿ ಕೇಂದ್ರವಿಲ್ಲದೇ ಲಾಭ ಪಡೆಯಬೇಕಾದವರು ಬೆಳೆದ ಭತ್ತವನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿ, ಲಾಭ ವಿಲ್ಲದೇ ಕೈ ಚೆಲ್ಲಿ ಕುಳಿತಿದ್ದಾರೆ.

Advertisement

ತಾಲೂಕಿನ ಸುಮಾರು 12.630 ಹೆಕ್ಟೇರ್‌ ಪ್ರದೇಶವಿದ್ದು, ಅದರಲ್ಲಿ 70500 ಹೆಕ್ಟೇರ್‌ ಭತ್ತ, 2570 ಹೆಕ್ಟೇರ್‌ ಪ್ರದೇಶದಲ್ಲಿ ಮುಸುಕಿನ ಜೋಳ, 7500ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು, 750 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ, 20 ಹೆಕ್ಟೇರ್‌ ಪ್ರದೇಶದಲ್ಲಿ ಹುರುಳಿ ಬೆಳೆಯನ್ನು ನಾಟಿ ಮಾಡಿರುವ ಬಗ್ಗೆ ಕೃಷಿ ಇಲಾಖೆಯಲ್ಲಿ ನೋಂದಣಿಯಾಗಿದೆ.

ರೈತರಲ್ಲಿ ಆತಂಕ: ತಾಲೂಕು ಕೇಂದ್ರದಲ್ಲಿ ಭತ್ತ ಕೇಂದ್ರ ತೆರೆಯುವಂತೆ ರೈತ ಮುಖಂಡರು ರೈತಸಂಘ ಪ್ರತಿ ವರ್ಷ ಭತ್ತ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿ, ಅಧಿಕಾರಿಗಳನ್ನು ಎಚ್ಚರಿಸಿ ಕೇಂದ್ರ ತೆರೆಯುವಂತೆ ಮಾಡುತ್ತಿದ್ದರು. ಆದರೆ, ಈ ವರ್ಷ ಮೈ ಮರೆತ ರೈತರಿಂದಾಗಿ ಇದುವರೆಗೂ ಖರೀದಿ ಕೇಂದ್ರವೇ ತೆರೆದಿಲ್ಲದಿರುವುದು ರೈತರಲ್ಲಿ ಆತಂಕ ಉಂಟುಮಾಡುವಂತಾಗಿದೆ.

ವ್ಯವಸಾಯಕ್ಕಾಗಿ ಸಾಲ: ರೈತರು ತಮ್ಮ ಬಳಿ ಇರುವ ಜಮೀನುಗಳಲ್ಲಿ ವಿವಿಧ ರೀತಿಯ ಬೆಳೆಗಳನ್ನು ಬೆಳೆದು ಮಾರುಕಟ್ಟೆಗೆ ನೀಡುವ ಮೂಲಕ ಅನ್ನದಾತನಾಗಿದ್ದಾನೆ. ತಾನು ಬೆಳೆಗಳನ್ನು ಬೆಳೆಯಲು ಜಮೀನಿನ ನೋಂದಣಿ ದಾಖಲಾತಿ ಮತ್ತು ಪಹಣಿಯನ್ನು ಬ್ಯಾಂಕ್‌ನಲ್ಲಿ ಇಟ್ಟು ಸಾಲ ಪಡೆದಿದ್ದಾನೆ. ಬೆಳೆಯಿಂದ ಬಂದ ಲಾಭದಿಂದ ಸಾಲವನ್ನು ತೀರಿಸುವ ಪ್ರಯತ್ನದಲ್ಲಿ ವಿಫ‌ಲರಾಗಿ ಆತ್ಮಹತ್ಯೆಯ ಆದಿ ತುಳಿಯುವಂತಾಗಿದೆ.

ಭತ್ತ ಖರೀದಿ: ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿರುವ ಭತ್ತವನ್ನು ಈಗಾಗಲೇ ಎಲ್ಲೆಡೆ ಕಟಾವಿನಲ್ಲೇ ಮಗ್ನರಾಗಿದ್ದಾರೆ. ಬೆಳೆದಿರುವ ಭತ್ತವನ್ನು ಖರೀದಿ ಕೇಂದ್ರಗಳಿಗೆ ಸಾಗಿಸುವ ಪ್ರಯತ್ನ ಮಾಡಿದರೂ ಸಹ ಇದುವರೆಗೂ ಖರೀದಿ ಕೇಂದ್ರ ತೆರೆದಿಲ್ಲ. ಇದರಿಂದ ರೈತರು ತಮ್ಮ ಫ‌ಸಲನ್ನು ಖಾಸಗಿ ವ್ಯಕ್ತಿಗಳಿಗೆ ಲಾಭವಿಲ್ಲದೆ, ನಷ್ಟಕ್ಕೆ ಮಾರಾಟ ಮಾಡಿ ಬಂದಷ್ಟು ಹಣವನ್ನು ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಹಲವು ರೈತರು ಭತ್ತಕ್ಕೆ ಬೆಲೆ ನಿಗದಿಯಾದ ಬಳಿಕ ಮಾರಾಟ ಮಾಡಲು ಮನೆ ಮತ್ತು ಇನ್ನಿತರ ಗೋಡಾನುಗಳಲ್ಲಿ ದಾಸ್ತಾನು ಮಾಡಿದ್ದಾರೆ. ಇದುವರೆಗೂ ಜಿಲ್ಲಾಡಳಿತ ತಾಲೂಕು ಕೇಂದ್ರದಲ್ಲಿ ಭತ್ತ ಖರೀದಿ ಕೇಂದ್ರವನ್ನು ತೆರೆಯದೇ ಕೈಚೆಲ್ಲಿರುವುದರಿಂದ ರೈತರು ಬಂದಷ್ಟು ಬೆಲೆಗೆ ಭತ್ತವನ್ನು ಮಾರಾಟ ಮಾಡುತ್ತಿದ್ದಾರೆ.

ಅಧಿಕಾರಿಗಳಿಗೆ ಶಾಪ: ಭತ್ತದ ಮಿಲ್‌ನ ಖಾಸಗಿ ವ್ಯಾಪಾರಿಗಳು ರೈತರ ಬಳಿಯೇ ತೆರಳಿ ಒಕ್ಕಣೆಯ ಸ್ಥಳದಲ್ಲಿ ಭತ್ತವನ್ನು ಖರೀದಿ ಮಾಡುವುದರಿಂದ ದಾಸ್ತಾನುಗಳ ಸಾಗಾಣಿಕೆ ಕೆಲಸ ತಪ್ಪಿತ್ತಲ್ಲ ಎಂದು ಖಾಸಗಿ ವ್ಯಕ್ತಿಗಳು ಕೇಳಿದಷ್ಟು ಬೆಲೆಗೆ ಭತ್ತವನ್ನು ಮಾರಾಟ ಮಾಡಿ, ಭತ್ತ ಖರೀದಿ ಕೇಂದ್ರ ತೆರೆಯದ ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದಾರೆ. ಈಗಾಲಾದರೂ ಜಿಲ್ಲಾಡಳಿತ ಮತ್ತು ಚುನಾಯಿತ ಪ್ರತಿನಿಧಿಗಳು ಭತ್ತ ಖರೀದಿ ಕೇಂದ್ರವನ್ನು ತೆರೆದು, ರೈತರ ಬಳಿ ಇರುವ ಅಲ್ಪಸ್ವಲ್ಪ ಭತ್ತವನ್ನು ಖರೀದಿ ಮಾಡಬೇಕು. ಈ ಮೂಲಕ ಸೂಕ್ತ ಬೆಲೆ ನೀಡುವರೆ ಎಂದು ರೈತರು ಪ್ರಶ್ನಿಸುತ್ತಿದ್ದಾರೆ.

ಪ್ರತಿವರ್ಷ ಭತ್ತದ ಬೆಳೆ ಮುಗಿದ ಮೇಲೆ ಭತ್ತ ಖರೀದಿ ಕೇಂದ್ರವನ್ನು ಅಧಿಕಾರಿಗಳು ತೆರೆಯಲಾರಂಭಿಸುತ್ತಾರೆ. ಅಧಿಕಾರಿಗಳು ರೈತನ ಕಷ್ಟಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಆದರೆ, ಚುನಾಯಿತ ಪ್ರತಿನಿಧಿಗಳು ಭತ್ತ ಖರೀದಿ ಕೇಂದ್ರ ತೆರೆಯುವಂತೆ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ. ಆದರೆ, ಅವರು ಸಹ ತಟಸ್ಥವಾಗುವುದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
-ಶೈಲೇಂದ್ರ, ಜಿಲ್ಲಾ ರೈತ ಸಂಘ ಕಾರ್ಯಾಧ್ಯಕ್ಷ

ರೈತರು ಭತ್ತ ಬಿತ್ತನೆಯ ವೇಳೆ ಕೃಷಿ ಇಲಾಖೆಯಲ್ಲಿ ಖರೀದಿ ಮಾಡುವಂತೆ ಹೆಸರು ನೋಂದಾಯಿಸಿಕೊಳ್ಳಬೇಕು. ಯಾರು ನೋಂದಾಯಿಸುತ್ತಾರೊ ಅವರ ಭತ್ತವನ್ನು ಕೃಷಿ ಇಲಾಖೆಯ ಅಧಿಕಾರಿಗಳು, ಭತ್ತದ ಗುಣಮಟ್ಟದ ಆಧಾರದ ಮೇಲೆ ರೈಸ್‌ಮಿಲ್‌ಗಳಿಗೆ ಖರೀದಿಸಲು ಸೂಚನೆ ನೀಡುತ್ತಾರೆ. ಈ ಹೊಸ ಪದ್ಧತಿಯನ್ನು ರೈತರು ಅನುಸರಿಸಿ, ಭತ್ತ ಮಾರಾಟ ಮಾಡಬೇಕು.
-ಬಿ.ಬಿ.ಕಾವೇರಿ, ಜಿಲ್ಲಾಧಿಕಾರಿ

* ಡಿ.ನಟರಾಜು

Advertisement

Udayavani is now on Telegram. Click here to join our channel and stay updated with the latest news.

Next