Advertisement

ಹಡಿಲು ಗದ್ದೆಗಳಲ್ಲಿ ಭತ್ತದ ಕೃಷಿ ಅಭಿಯಾನ

01:50 AM Jun 20, 2020 | Sriram |

ಮಹಾನಗರ: ದಕ್ಷಿಣ ಕನ್ನಡ ಜಿಲ್ಲಾ ಕೃಷಿ ಇಲಾಖೆಯು ಹಡಿಲು ಗದ್ದೆಗಳಲ್ಲಿ ಭತ್ತದ ಕೃಷಿ ಅಭಿಯಾನವನ್ನು ಆರಂಭಿಸಿದ್ದು, ಆಸಕ್ತ ರೈತರ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಈ ಸಾಲಿನಲ್ಲಿ 1,000 ಎಕ್ರೆ ಹಡಿಲು ಗದ್ದೆಗಳಲ್ಲಿ ಭತ್ತದ ಕೃಷಿಯ ಗುರಿ ಇರಿಸಿಕೊಂಡಿದೆ.

Advertisement

ಈಗಾಗಲೇ 100 ಎಕರೆ ಹಡಿಲು ಗದ್ದೆಗಳಲ್ಲಿ ಭತ್ತ ಬೆಳೆಯುವಂತೆ ರೈತರನ್ನು ಪ್ರೇರೇಪಿಸುವಲ್ಲಿ ಇಲಾಖೆ ಯಶಸ್ವಿ ಯಾಗಿದೆ. ಜಿಲ್ಲಾ ಕೃಷಿ ಜಂಟಿ ನಿರ್ದೇಶಕರು ಹಾಗೂ ಸಹಾಯಕ ಕೃಷಿ ನಿರ್ದೇಶಕರು ಜಿಲ್ಲೆಯ ವಿವಿಧೆಡೆ ಸಂಚರಿಸಿ ಹಡಿಲು ಗದ್ದೆಗಳನ್ನು ಗುರುತಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಸೂರಿಂಜೆ, ಮೂಲ್ಕಿ, ಅತಿಕಾರಿಬೆಟ್ಟು ಮೊದಲಾದೆಡೆ ಈಗಾಗಲೇ ಹಡಿಲು ಗದ್ದೆಗಳನ್ನು ಗುರುತಿಸಿ ಮತ್ತೆ ಭತ್ತ ಬೆಳೆಯುವಂತೆ ರೈತರನ್ನು ಹುರಿದುಂಬಿಸಿದ್ದು, ಉತ್ತಮ ಸ್ಪಂದನೆ ಲಭ್ಯವಾಗಿದೆ ಎಂದು ಕೃಷಿ ಅಧಿಕಾರಿಗಳು ಹೇಳಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಭತ್ತದ ಕೃಷಿ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ. ಆರು ವರ್ಷಗಳ ಹಿಂದೆ ಜಿಲ್ಲೆಯಲ್ಲಿ 34,000 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗುತ್ತಿದ್ದರೆ 2020ನೇ°ಮುಂಗಾರು ಹಂಗಾಮಿನಲ್ಲಿ 10,260 ಹೆಕ್ಟೇರ್‌ಗೆ ಕುಸಿದಿದೆ.

ವಿವಿಧ ಕಾರಣಗಳಿಂದಾಗಿ ರೈತರು ಭತ್ತದ ಬೆಳೆಯಿಂದ ವಿಮುಖರಾಗುತ್ತಿದ್ದು ಗದ್ದೆಗಳನ್ನು ಹಡಿಲು ಬಿಡುವಪ್ರಮಾಣ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಭತ್ತದ ಬೆಳೆಯತ್ತ ರೈತರನ್ನು ಮತ್ತೆ ಆಕರ್ಷಿಸಲು ಕೃಷಿ ಇಲಾಖೆ ಕಾರ್ಯೋನ್ಮುಖವಾಗಿದೆ. ಬೇರೆ ಊರುಗಳಲ್ಲಿ ಉದ್ಯೋಗದಲ್ಲಿದ್ದ ಮಂದಿ ಕೊರೊನಾದಿಂದಾಗಿ ಊರಿಗೆ ಮರಳುತ್ತಿದ್ದು ಕೃಷಿಯತ್ತ ಆಸಕ್ತಿ ತೋರ್ಪಡಿಸುತ್ತಿರುವುದು ಈ ಅಭಿಯಾನಕ್ಕೆ ಪೂರಕವಾಗಿದೆ.

Advertisement

ಅಭಿಯಾನ ಹೇಗಿರುತ್ತದೆ
ಮೊದಲಿಗೆ ಜಿಲ್ಲೆಯ ಹಡೀಲು ಗದ್ದೆಗಳ ಬಗ್ಗೆ ಕೃಷಿ ಸಹಾಯಕರಿಂದ ಮಾಹಿತಿ ಪಡೆದುಕೊಳ್ಳಲಾಗುತ್ತದೆ. ಬಳಿಕ ಕೃಷಿ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕರು ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ರೈತರನ್ನು ಸೇರಿಸಿ ಹಡಿಲು ಬಿದ್ದಿರುವ ಗದ್ದೆಗಳಲ್ಲಿ ಭತ್ತ ಬೆಳೆಯುವಂತೆ ಪ್ರೇರೇಪಿಸುತ್ತಾರೆ. ಈ ಕಾರ್ಯದಲ್ಲಿ ಭತ್ತದ ಕೃಷಿ ಆಸಕ್ತರು ಹಾಗೂ ಪ್ರಗತಿಪರ ರೈತರ ನೆರವನ್ನು ಇಲಾಖೆ ಪಡೆದುಕೊಳ್ಳುತ್ತಿದೆ.

ಸಹಾಯಧನ ಯೋಜನೆಗಳು ಪ್ರಗತಿಯಲ್ಲಿ
ಈಗಾಗಲೇ ಕೆಲವು ಪ್ರಗತಿಪರ ಕೃಷಿಕರು ಇಲಾಖೆಯೊಂದಿಗೆ ಕೈಜೋಡಿಸಿದ್ದಾರೆ. ರೈತರಿಗೆ ಸಹಾಯಧನದಲ್ಲಿ ಬಿತ್ತನೆ ಬೀಜ, ಯಂತ್ರಧಾರೆ ಯೋಜನೆಯಲ್ಲಿ ಉಳುಮೆ ಯಂತ್ರ ಸೌಲಭ್ಯ ಮುಂತಾದ ನೆರವು ಒದಗಿಸಲಾಗುತ್ತದೆ. ಸಹಾಯಧನ ಆಧಾರಿತ ಯೋಜನೆಗಳನ್ನು ಇದಕ್ಕೆ ಜೋಡಿಸುವ ಪ್ರಯತ್ನ ಕೂಡ ಕೃಷಿ ಇಲಾಖೆಯಿಂದ ಜಾರಿಯಲ್ಲಿದೆ.

 ಆರಂಭಿಕ ಯಶಸ್ಸು
ಹಡಿಲು ಗದ್ದೆಗಳಲ್ಲಿ ಭತ್ತದ ಬೆಳೆಯುವಂತೆ ರೈತರನ್ನು ಪ್ರೇರೇಪಿಸುವ ಅಭಿಯಾನ ಆರಂಭವಾಗಿದೆ. ಇದಕ್ಕೆ ಪ್ರಗತಿಪರ ರೈತರ ನೆರವು ಪಡೆದುಕೊಳ್ಳಲಾಗುತ್ತಿದೆ. ನಮ್ಮ ಪ್ರಯತ್ನಕ್ಕೆ ಆರಂಭಿಕ ಯಶಸ್ಸು ದೊರಕಿದ್ದು ಕೆಲವೆಡೆ ಹಡಿಲು ಗದ್ದೆಗಳಲ್ಲಿ ಭತ್ತ ಕೃಷಿ ಪ್ರಕ್ರಿಯೆ ಆರಂಭಗೊಂಡಿದೆ.
 - ಡಾ| ಸೀತಾ,
ಕೃಷಿ ಜಂಟಿ ನಿರ್ದೇಶಕರು, ದ.ಕ. ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next