Advertisement

ಭತ್ತ ಬೆಳೆಗಾರರಲ್ಲಿ ಭರವಸೆ ಮೂಡಿಸಬಲ್ಲ ಖರೀದಿ ಕೇಂದ್ರ

09:24 AM Oct 30, 2018 | |

ಉಡುಪಿ: ಮಳೆ ಕೈಕೊಟ್ಟು ಸಂಕಷ್ಟಕ್ಕೀಡಾದ ಜಿಲ್ಲೆಯ ಭತ್ತ ಬೇಸಾಯಗಾರರು ಈಗ ಅಳಿದುಳಿದ ಬೆಳೆಗಾದರೂ ಉತ್ತಮ ಬೆಲೆ ದೊರೆಯಬಹುದು, ಭತ್ತ ಖರೀದಿ ಕೇಂದ್ರ ಆರಂಭವಾದರೆ ಇದಕ್ಕೆ ಪೂರಕವಾಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಖರೀದಿ ಕೇಂದ್ರದಿಂದ ಬೆಲೆ ಸ್ಥಿರವಾಗಬಹುದು ಎಂಬ ಲೆಕ್ಕಾಚಾರ ಅವರದು.

Advertisement

ಜಿಲ್ಲೆಯಲ್ಲಿ 2011-12ರಲ್ಲಿ ಭತ್ತ ಖರೀದಿ ಕೇಂದ್ರ ಆರಂಭವಾಗಿತ್ತು. ಆಗ ಕೇಂದ್ರದ ಜತೆಗೆ ರಾಜ್ಯ ಸರಕಾರವೂ ಬೆಂಬಲ ಬೆಲೆ ಘೋಷಿಸಿತ್ತು. ಬೇಸಾಯಗಾರರು ಉತ್ಸಾಹಗೊಂಡು ಖರೀದಿ ಕೇಂದ್ರಗಳ ಮೂಲಕವೂ ಭತ್ತ ಮಾರಾಟ ಮಾಡಿದ್ದರು. ಸುಮಾರು 20,000 ಕ್ವಿಂಟಾಲ್‌ ಸಂಗ್ರಹವಾಗಿತ್ತು. ಬಳಿಕ ಬೆಂಬಲ ಬೆಲೆ ಹೊರಮಾರುಕಟ್ಟೆ ಬೆಲೆಗಿಂತ ಕಡಿಮೆ ಇದ್ದ ಕಾರಣ ರೈತರಿಂದ ಪ್ರತಿಕ್ರಿಯೆ ಬಂದಿರಲಿಲ್ಲ.

ಬೆಂಬಲ ಬೆಲೆ ಹೆಚ್ಚಳ
ಕೇಂದ್ರದಿಂದ 2018-19ನೇ ಸಾಲಿನ ಮುಂಗಾರು ಹಂಗಾಮಿನ ಸಾಮಾನ್ಯ ಭತ್ತಕ್ಕೆ ಕ್ವಿಂಟಾಲ್‌ಗೆ 1,750 ರೂ. ಹಾಗೂ ಗ್ರೇಡ್‌ -ಎ ಭತ್ತಕ್ಕೆ 1,770ರೂ. ಬೆಂಬಲ ಬೆಲೆ ನಿಗದಿಯಾಗಿದೆ. ಹೊರ ಮಾರುಕಟ್ಟೆಯಲ್ಲಿ ದರ 1,600-1,650 ರೂ. ಇರುವುದರಿಂದ ರೈತರು ಖರೀದಿ ಕೇಂದ್ರಗಳತ್ತ ಆಸಕ್ತಿ ತೋರುವ ಸಾಧ್ಯತೆ ಇದೆ. ರಾಜ್ಯ ಸರಕಾರವೂ ಬೆಂಬಲ ಬೆಲೆ ಘೋಷಿಸಬಹುದೆಂಬ ನಿರೀಕ್ಷೆ ರೈತರದ್ದು.

ಬೆಲೆ ಕುಸಿತಕ್ಕೆ ತಡೆ
ಖರೀದಿ ಕೇಂದ್ರ ಆರಂಭವಾದರೆ ಖಾಸಗಿ ಖರೀದಿದಾರರೂ ದರ ಕಡಿಮೆ ಮಾಡುವುದಿಲ್ಲ. ಒಂದು ವೇಳೆ ಖರೀದಿ ಕೇಂದ್ರ ಆರಂಭಿಸಿ ಅಲ್ಲಿಗೆ ರೈತರು ಬಾರದೇ ಇದ್ದರೂ ಮುಚ್ಚಬಾರದು; ರೈತರು ಭತ್ತ ತರಲಾರರು ಎಂಬ ನೆಪವೊಡ್ಡಿ ಆರಂಭಿಸದೆಯೂ ಇರಬಾರದು ಎನ್ನುತ್ತಾರೆ ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ.
ಹೆಚ್ಚಾಗಿ ಎಂಒ4 ಭತ್ತದಿಂದ ಕೆಂಪಕ್ಕಿ ಮಾಡಲಾಗುತ್ತದೆ. ಇದು ಕರಾವಳಿಯಲ್ಲಿ ಕುಚ್ಚಿಲಕ್ಕಿಯಾಗಿ ಬಳಕೆಯಾಗುತ್ತದೆ. ಹಾಗಾಗಿ ಮಿಲ್ಲಿನವರು ಎಷ್ಟು ಎಂಒ4 ಇದ್ದರೂ ಉತ್ತಮ ಬೆಲೆ ನೀಡಿ ಖರೀದಿಸುತ್ತಿದ್ದಾರೆ. ಆದರೆ ಎಲ್ಲೆಡೆ ಕಟಾವು ಆರಂಭಗೊಂಡಾಗ ಸೂಕ್ತ ಬೆಲೆ ದೊರೆಯುವುದಿಲ್ಲ ಎಂಬುದು ಈ ಭಾಗದ ಕೃಷಿಕರ ದೂರು.

ಷರತ್ತುಗಳು
ಕೇಂದ್ರಗಳಲ್ಲಿ ಖರೀದಿಸುವ ಭತ್ತದಲ್ಲಿ ತೇವಾಂಶ ಶೇ.17ಕ್ಕಿಂತ ಕಡಿಮೆ ಇರಬೇಕು. ಕಡಿಮೆ ಗುಣಮಟ್ಟದ ಕಲಬೆರಕೆ ಧಾನ್ಯಗಳು ಶೇ. 6ಕ್ಕಿಂತ ಕಡಿಮೆ ಇರಬೇಕು. ಹಾನಿಯಾದ, ಮೊಳಕೆಯೊಡೆದ, ಬಣ್ಣಗುಂದಿದ ಕೀಟಬಾಧಿತ ಧಾನ್ಯ ಶೇ. 4ಕ್ಕಿಂತ ಕಡಿಮೆ ಇರಬೇಕು ಎಂಬಿತ್ಯಾದಿ ಷರತ್ತು ಇವೆ. ಕರಾವಳಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಯಾಂತ್ರಿಕ ಕಟಾವು ಹೆಚ್ಚುತ್ತಿರುವುದರಿಂದ ಮತ್ತು ಮನೆಯಲ್ಲಿ ದಾಸ್ತಾನಿಟ್ಟು ಒಣಗಿಸುವ ಪರಿಪಾಠ ಕಡಿಮೆ ಯಾಗುತ್ತಿರುವುದರಿಂದ ಕೊಯ್ಲು ಮುಗಿದ ತತ್‌ಕ್ಷಣವೇ ಮಾರುಕಟ್ಟೆಗೆ / ಮಿಲ್‌ಗ‌ಳಿಗೆ ಸಾಗಾಟ ಮಾಡಲಾಗುತ್ತಿದೆ. ಇದು ಬೆಲೆ ಕುಸಿತಕ್ಕೂ ಕಾರಣವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಭತ್ತದ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಖರೀದಿ ಕೇಂದ್ರಗಳು “ಬೆಂಬಲ’ವಾಗಿ ನಿಲ್ಲುವ ಸಾಧ್ಯತೆ ಹೆಚ್ಚು. 

Advertisement

3 ಎಪಿಎಂಸಿಗಳಲ್ಲೂ ಕೇಂದ್ರ
ಜಿಲ್ಲೆಯ 3 ತಾಲೂಕು ಕೇಂದ್ರಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಂಸ್ಥೆಯ (ಎಪಿಎಂಸಿ) ಪ್ರಾಂಗಣಗಳಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಲು ಅನುಮತಿ ಕೋರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ. ಅನುಮೋದನೆ ದೊರೆತ ಕೂಡಲೇ ಖರೀದಿ ಆರಂಭವಾಗಲಿದೆ.
ಕೆಂಪೇಗೌಡ, ಜಂಟಿ ಕೃಷಿ ನಿರ್ದೇಶಕರು, ಉಡುಪಿ ಜಿಲ್ಲೆ

ಮಾರಾಟಕ್ಕೆ ಆತುರ ಬೇಡ
ಖರೀದಿ ಕೇಂದ್ರಗಳು ಭತ್ತದ ಬೆಲೆ ಕುಸಿತ ತಡೆಯಲಿವೆ. ಬೆಳೆಗಾರರು ಮಾರಾಟಕ್ಕೆ ಆತುರ ತೋರದೆ ಕ್ರಮಬದ್ಧವಾಗಿ ಒಣಗಿಸಿ ದಾಸ್ತಾನು ಇರಿಸಿಕೊಂಡು ಉತ್ತಮ ಬೆಲೆಗೆ ಮಾರುವುದನ್ನು ರೂಢಿಸಿಕೊಳ್ಳಬೇಕು.
ಕುದಿ ಶ್ರೀನಿವಾಸ ಭಟ್‌, ಪ್ರಗತಿಪರ ಕೃಷಿಕ

Advertisement

Udayavani is now on Telegram. Click here to join our channel and stay updated with the latest news.

Next