Advertisement
ಸಾಲಿಗ್ರಾಮ, ಕೆ.ಆರ್.ನಗರ ತಾಲೂಕಿನ ಬಹುತೇಕ ರೈತರು ಹೊಸ ಆದೇಶದಿಂದ ಅಸಮಾಧಾನಗೊಂಡಿ ದ್ದಾರೆ. ಹಿಂದೆ ಸರ್ಕಾರ ಗ್ರಾಮ, ಹೋಬಳಿ ಕೇಂದ್ರಗಳಲ್ಲಿದ್ದ ನೋಂದಾಯಿತ ಅಕ್ಕಿ ಗಿರಣಿಗಳ ಮಾಲಿಕರ ಸಹಕಾರದಿಂದ ಭತ್ತ ಖರೀದಿಸಿ, ಸಂಗ್ರಹಿಸಿಟ್ಟುಕೊಳ್ಳುತ್ತಿತ್ತು. ಆದರೆ, ಈ ಹಿಂದಿನ ನಿಯಮಾವಳಿಗಳನ್ನು ಗಾಳಿಗೆ ತೂರಿ, ಪ್ರಸಕ್ತ ವರ್ಷದಿಂದ ಆಹಾರ ನಿಗಮದಿಂದ ಎಪಿಎಂಸಿ ಗೋದಾಮುಗಳಲ್ಲಿ ನೇರವಾಗಿ ಖರೀದಿಸಿ, ಸಂಗ್ರಹಿಸಿಡುತ್ತಿದೆ.
Related Articles
Advertisement
ಹೆಚ್ಚು ಇಳುವರಿ ನಿರೀಕ್ಷೆ: ಭತ್ತದ ಕಣಜವಾಗಿರುವ ಸಾಲಿಗ್ರಾಮ ತಾಲೂಕಿನಲ್ಲಿ ಈ ಬಾರಿ 14,580 ಹೆಕ್ಟೇರ್, ಕೆ.ಆರ್.ನಗರ ತಾಲೂಕಿನಲ್ಲಿ 11,920 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆದಿದ್ದು, ಅಂದಾಜು 15 ಲಕ್ಷ ಕ್ವಿಂಟಲ್ ಭತ್ತ ಇಳುವರಿ ನಿರೀಕ್ಷೆಯಲ್ಲಿದೆ. ಈ ಹಿಂದೆ ತಮ್ಮ ಗ್ರಾಮಗಳಲ್ಲೇ ಇರುವ ಅಕ್ಕಿ ಗಿರಣಿಗಳಿಗೆ ಕಟಾವು ಮಾಡಿ, ಒಕ್ಕಣೆ ಮಾಡಿದ ತಕ್ಷಣ ಮಾರಾಟ ಮಾಡಿ ರೈತರು ಕೈತೊಳೆದುಕೊಳ್ಳುತ್ತಿದ್ದರು. ಆದರೆ, ನೂತನ ಆದೇಶದಿಂದ ಭತ್ತ ಮಾರಾಟಕ್ಕೆ ವಿಳಂಬವಾದಲ್ಲಿ ದಲ್ಲಾಳಿಗಳು ನೀಡುವ ದರಕ್ಕೆ ಭತ್ತವನ್ನು ಮಾರಾಟ ಮಾಡಿ ನಷ್ಟ ಅನುಭಸುವ ಪರಿಸ್ಥಿತಿ ರೈತರದಾಗಲಿದೆ.
ಒಟ್ಟಾರೆ, ಹೊಸ ಆದೇಶದಿಂದ ರೈತರು ಸಂಕಷ್ಟಕ್ಕೆ ಸಿಲುಕಲಿದ್ದು, ತನ್ನ ಹಳೆಯ ಮಾದರಿಯಲ್ಲಿ ಅಕ್ಕಿ ಗಿರಣಿಗಳಿಗೆ ಭತ್ತ ಖರೀದಿಸುವಂತೆ ಆದೇಶಿಸಬೇಕೆಂಬುದು ರೈತರ ಒತ್ತಾಯವಾಗಿದೆ. ಕಳೆದ 2 ವರ್ಷಗಳಿಂದ ಯಾವುದೇ ಗೊಂದಲಗಳಿಲ್ಲದೇ, ರೈತ ತನ್ನ ಹತ್ತಿರದಲ್ಲಿರುವ ರೈಸ್‌ಮಿಲ್‌ಗೆ ಭತ್ತ ಸಾಗಾಟ ಮಾಡಿ, ಸರ್ಕಾರದಿಂದ ಹಣ ಪಡೆಯುತ್ತಿದ್ದ. ಆದರೆ, ಸರ್ಕಾರ ಅಧಿಕಾರಿಗಳ ಕೈಗೆ ಖರೀದಿಗೆ ಅವಕಾಶ ಕೊಟ್ಟು ನಮ್ಮನ್ನು ಸಂಕಷ್ಟಕ್ಕೆ ದೂಡುತ್ತಿದೆ. ಇದನ್ನು ರದ್ದು ಮಾಡಿ ಈ ಹಿಂದೆ ಇದ್ದ ನಿಯಮದಂತೆ ಭತ್ತ ಖರೀದಿ ಮಾಡಬೇಕು. –ಅಂಕನಹಳ್ಳಿ ತಿಮ್ಮಪ್ಪ, ಜಿಲ್ಲಾಧ್ಯಕ್ಷ, ಕಬ್ಬು ಬೆಳೆಗಾರರ ಸಂಘ
ಸರ್ಕಾರದ ಖರೀದಿ ಕೇಂದ್ರಗಳಲ್ಲಿ ಅಕ್ರಮ ಜಾಸ್ತಿಯಾದ ಕಾರಣವೇ ರೈಸ್‌ಮಿಲ್ ಮಾಲಿಕರಿಗೆ ಖರೀದಿ ಮಾಡಲು ಆದೇಶ ಮಾಡಿತ್ತು. ಆದರೆ, ಮತ್ತೆ ಅಧಿಕಾರಿಗಳಿಗೆ ವಹಿಸಿದರೆ ರೈತರನ್ನು ಶೋಷಿಸುವುದು ಮಾತ್ರವಲ್ಲ, ದಾಸ್ತಾನು, ಸಾಗಾಟ ವೆಚ್ಚ ನಮಗೆ ಬರುತ್ತೆ. ಆದ್ದರಿಂದ ಸರ್ಕಾರ ತನ್ನ ಆದೇಶ ಬದಲಿಸಬೇಕು. –ಸುದರ್ಶನ್, ರೈತ, ಹೊಸೂರು ಗ್ರಾಮ
–ಆನಂದ್ ಹೊಸೂರು