ದಾವಣಗೆರೆ: ರಾಜ್ಯ ಸರ್ಕಾರ ಈ ಬಾರಿ ಭತ್ತ ಖರೀದಿಸಲು ತೆರೆಯಲಿರುವ ಕೇಂದ್ರ ಕೇವಲ ರೈತರ ಕಣ್ಣೊರೆಸುವ ತಂತ್ರ ಎಂದು ಬಿಜೆಪಿ ಮುಖಂಡ ಬಿ.ಎಂ. ಸತೀಶ್ ದೂರಿದ್ದಾರೆ. ಶನಿವಾರ, ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಂದ ಈ ಬಾರಿ ಭತ್ತ ಖರೀದಿಸಲು ಸರ್ಕಾರ ಅನೇಕ ಷರತ್ತು ವಿಧಿಸಿದೆ. ಆ ಷರತ್ತಿನ ಪ್ರಕಾರ ರೈತರು ಭತ್ತ ಮಾರಾಟ ಮಾಡಲು ಸಾಧ್ಯವೇ ಇಲ್ಲ. ಭತ್ತ ಮಾರಾಟಕ್ಕೆ ತರದಿದ್ದಲ್ಲಿ ರೈತರ ಮೇಲೆಯೇ ಗೂಬೆ ಕೂರಿಸುವ ಉದ್ದೇಶದಿಂದ ಸರ್ಕಾರ ಷರತ್ತಿನ ತಂತ್ರ ಹೆಣೆದಿದೆ ಎಂದರು.
ಕಳೆದ 2 ವರ್ಷದಲ್ಲಿ ಭದ್ರಾ ಜಲಾಶಯ ಭರ್ತಿಯಾಗದ ಕಾರಣ ರೈತರು ಪರ್ಯಾಯ ಬೆಳೆ ಬೆಳೆದರು. ಈ ಬಾರಿ ಜಲಾಶಯ ತುಂಬಿದ್ದರಿಂದ ರೈತರು ಸಾಲ ಮಾಡಿ ಭತ್ತ ಬೆಳೆದಿದ್ದಾರೆ. ಜಿಲ್ಲೆಯಲ್ಲಿ ಒಂದೂವರೆ ಲಕ್ಷ ಎಕರೆಯಲ್ಲಿ ಭತ್ತ ಬೆಳೆಯಲಾಗಿದೆ. ಬೇಕೋ ಬೇಡವೋ ಎಂಬಂತೆ ರಾಜ್ಯ ಸರ್ಕಾರ ಖರೀದಿ ಕೇಂದ್ರ ತೆರೆಯಲು ಉದ್ದೇಶಿಸಿದೆ. ಸರ್ಕಾರ ನಾನಾ ಷರತ್ತು ವಿಧಿಸಿರುವುದರಿಂದ ರೈತರು ಬೆಂಬಲ ಬೆಲೆ ಯೋಜನೆಯಡಿ ಭತ್ತ ಮಾರಾಟಕ್ಕೆ ಬರದಂತಾಗಲಿದೆ ಎಂದು ಅವರು ಆರೋಪಿಸಿದರು.
ರಾಜ್ಯ ಸರ್ಕಾರದ ಆದೇಶನ್ವಯ ಸಣ್ಣ ಮತ್ತು ಅತಿಸಣ್ಣ ರೈತರಿಂದ ಮಾತ್ರ, ಅದೂ ಸಹ ಓರ್ವ ರೈತನಿಂದ 40 ಕ್ವಿಂಟಾಲ್ ಭತ್ತ ಖರೀದಿಸುವುದಾಗಿ ಹೇಳಿದೆ. ಇದಕ್ಕಾಗಿ ಪಹಣಿಯಲ್ಲಿ ಬೆಳೆ ಕಾಲಂನಲ್ಲಿ ಭತ್ತ ಎಂದು ನಮೂದಾಗಿರಬೇಕಿದೆ. ಬೆಳೆ ಕಾಲಂನಲ್ಲಿ ಭತ್ತ ಎಂದು ನಮೂದಾಗಿರುವ ಪಹಣಿ, ಸಾಗುವಳಿ ಪತ್ರ, ಸಣ್ಣ, ಅತಿಸಣ್ಣ ರೈತನೆಂಬ ದೃಢೀಕರಣ ಪತ್ರದೊಂದಿಗೆ ಡಿ.5ರಿಂದ 15ರ ಒಳಗೆ ನೋಂದಾಯಿಸಿಕೊಂಡ ರೈತನ ಮೊಬೈಲ್ ಫೋನ್ ಗೆ ಜಿಲ್ಲಾಡಳಿತದಿಂದ ಎಸ್‌ಎಂಎಸ್ ಬರಲಿದೆ. ಆ ನಂತರ ಜಿಲ್ಲಾಡಳಿತ ಸೂಚಿಸುವ ರೈಸ್‌ಮಿಲ್‌ಗೆ ಸ್ಯಾಂಪಲ್ ಭತ್ತ ಕೊಂಡೊಯ್ದು ತೋರಿಸಬೇಕು.
ಆ ಭತ್ತವನ್ನ ಜಿಲ್ಲಾಮಟ್ಟದಲ್ಲಿ ನೇಮಕಗೊಂಡಿರುವ ಅಸ್ಸೇಯರ್ ಪರೀಕ್ಷಿಸಿ, ವರದಿ ನೀಡುವ ನಂತರ ರೈಸ್‌ಮಿಲ್ ಮಾಲಿಕ ಭತ್ತ ಖರೀದಿಸಲು ಸಮ್ಮತಿ ನೀಡಬೇಕು. ನಂತರ ರೈತ ಭತ್ತ ತಂದು ರೈಸ್‌ಮಿಲ್ ಗೆ ಮಾರಾಟ ಮಾಡಬೇಕು. ಭತ್ತ ಖರೀದಿಸಿದ ರೈಸ್ ಮಿಲ್ ಮಾಲೀಕ, ಆನ್‌ಲೈನ್‌ನಲ್ಲಿ ನಮೂದಿಸುವಾಗ ಅಸ್ಸೇಯರ್‌ನಿಂದ ಪಡೆದ ಗುಣಮಟ್ಟದ ವರದಿ ಅಪ್‌ಲೋಡ್ ಮಾಡಬೇಕು. ಖರೀದಿ ವಿವರ ಲಭ್ಯವಾದ 3 ದಿನದೊಳಗೆ ಖರೀದಿಸಿದ ಏಜೆನ್ಸಿಗಳು ರೈತನ ಖಾತೆಗೆ ಹಣ ಪಾವತಿ ಮಾಡಲಿವೆ.
ಮೊದಲೇ ಸಂಕಷ್ಟದಲ್ಲಿರುವ ರೈತ ಭತ್ತ ಮಾರಾಟಕ್ಕೆ ಇಷ್ಟೆಲ್ಲಾ ಸರ್ಕಸ್ ಮಾಡಬೇಕಿದೆ ಎಂದು ಅವರು ಅಳಲು ತೋಡಿಕೊಂಡರು. ರೈಸ್‌ಮಿಲ್‌ಗೆ ತಂದ ಭತ್ತ ಅನ್ ಲೋಡ್ ವೆಚ್ಚ ಯಾರು ಭರಿಸಬೇಕು ಎಂಬುದನ್ನ ಸರ್ಕಾರ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿಲ್ಲ. ಒಟ್ಟಾರೆ ಈ ಬಾರಿ ಖರೀದಿ ಕೇಂದ್ರ ಇಷ್ಟವಿಲ್ಲದೆ ತೆರೆಯಲು ಮುಂದಾದಂತಿದೆ. ಈಗಾಗಲೇ ರಾಜ್ಯ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಇಟ್ಟಿದ್ದ 5,000 ಕೋಟಿ ಆವರ್ತ ನಿಧಿಯನ್ನ ಬಳಸಿಕೊಂಡಿದೆ ಎಂಬುದಾಗಿ ಅಧಿಕಾರಿಗಳು ಹೇಳುತ್ತಾರೆ.
ಹಾಗಾಗಿ ಭತ್ತ ಖರೀದಿಸಲು ವಿಷಯದಲ್ಲಿ ಸರ್ಕಾರ ನಾಟಕ ಆಡುತ್ತಿದೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರ ಕ್ವಿಂಟಾಲ್ ಭತ್ತಕ್ಕೆ ನಿಗದಿಪಡಿಸಿರುವ 1770 ರೂ. ಜತೆಗೆ ರಾಜ್ಯ ಸರ್ಕಾರ 230 ರೂ. ಪ್ರೋತ್ಸಾಹಧನ ಸೇರಿಸಿ ಒಟ್ಟು 2,000 ರೂ. ದರಕ್ಕೆ ಈ ಹಿಂದಿದ್ದ ರೀತಿಯಲ್ಲೇ ಭತ್ತ ಖರೀದಿಸಬೇಕು. ಸಣ್ಣ-ಅತೀ ಸಣ್ಣ ರೈತರೆಂಬ ಬೇಧ ಭಾವ ಮಾಡಬಾರದಲ್ಲದೆ, ತಕ್ಷಣ ಕೇಂದ್ರ ಆರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಎಚ್.ಎನ್.ಶಿವಕುಮಾರ್, ಅಣಐ ಗುಡ್ಡೇಶ್, ರಮೇಶನಾಯ್ಕ, ಎನ್.ರಾಜಶೇಖರ್ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.
ಬಿಜೆಪಿಯಿಂದ ಬರ ಅಧ್ಯಯನ
ಬರಪೀಡಿತ ಪ್ರದೇಶ ವಾಸ್ತವ ಪರಿಸ್ಥಿತಿ ಅಧ್ಯಯನಕ್ಕಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ರಚಿಸಿರುವ ತಂಡಗಳಲ್ಲೊಂದು ಡಿ. 2ರ ರಾತ್ರಿ 8 ಗಂಟೆಗೆ ದಾವಣಗೆರೆಗೆ ಆಗಮಿಸಿ, ವಾಸ್ತವ್ಯ ಹೂಡಲಿದೆ. ಮರುದಿನ ಬೆಳಿಗ್ಗೆ 9-30ರಿಂದ ಜಿಲ್ಲಾ ಪ್ರವಾಸಕೈಗೊಳ್ಳಲಿದೆ. ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ನೇತೃತ್ವದ ಬಸವರಾಜ ಬೊಮ್ಮಾಯಿ, ಆರಗ ಜ್ಞಾನೇಂದ್ರ, ಆಯನೂರು ಮಂಜುನಾಥ್, ಪವಿತ್ರಾ ರಾಮಯ್ಯ ಅವರನ್ನೊಳಗೊಂಡ ತಂಡ ಹರಪನಹಳ್ಳಿ, ಜಗಳೂರು ಹಾಗೂ ಮಾಯಕೊಂಡ ವಿಧಾನ ಸಭಾ ಕ್ಷೇತ್ರಗಳಲ್ಲಿ ರೈತರನ್ನ ಭೇಟಿ ಮಾಡಿ, ಕುಂದು ಕೊರತೆ ಆಲಿಸಲಿದೆ.
ಯಶವಂತರಾವ್ ಜಾಧವ್, ಬಿಜೆಪಿ ಜಿಲ್ಲಾಧ್ಯಕ್ಷ