ಸ್ಯಾಂಡಲ್ ವುಡ್ ನ ಗಂಡುಗಲಿ ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್ ಅವರು ನಾಯಕ ನಟನಾಗಿ ಎಂಟ್ರಿ ಪಡೆದುಕೊಳ್ಳುತ್ತಿರುವ ಬಹುನಿರೀಕ್ಷಿತ ಚಿತ್ರ ‘ಪಡ್ಡೆ ಹುಲಿ’ ಈಗಾಗಲೇ ತನ್ನ ಹಾಡುಗಳಿಂದ ಕನ್ನಡ ಚಿತ್ರ ರಸಿಕರ ಮನದಲ್ಲಿ ಕತೂಹಲವನ್ನು ಹುಟ್ಟಿಸಿದೆ. ಮೊನ್ನೆ ತಾನೆ ಚಿತ್ರದುರ್ಗ ಕೋಟೆಯ ಮೇಲೆ ಚಿತ್ರಿಸಲಾಗಿದ್ದ ವಿಶಿಷ್ಟ ಹಾಡನ್ನು ಮತ್ತು ಪ್ರೇಮಿಗಳ ದಿನಕ್ಕೊಂದು ಹಾಡನ್ನು ಬಿಡುಗಡೆಗೊಳಸಿದ್ದ ಚಿತ್ರತಂಡವು ಇದೀಗ ಇನ್ನೊಂದು ಸ್ಪೆಷಲ್ ಸಾಂಗ್ ಅನ್ನು ಚಿತ್ರಪ್ರಮಿಗಳಿಗೋಸ್ಕರ ಬಿಡುಗಡೆಗೊಳಿಸಿದೆ.
ಕನ್ನಡದ ಖ್ಯಾತ ಸಾಹಿತಿ ಬಿ.ಆರ್. ಲಕ್ಷ್ಮಣ್ ರಾವ್ ಅವರು ಬರೆದಿರುವ ಈ ಫೀಲಿಂಗ್ ಸಾಂಗ್ ಬಿ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನದಲ್ಲಿ ವಿಭಿನ್ನವಾಗಿ ಮೂಡಿಬಂದಿದೆ. ಸಿದ್ಧಾರ್ಥ್ ಮಹಾದೇವನ್ ಅವರು ಈ ಹಾಡನ್ನು ಹಾಡಿದ್ದು ಇದರಲ್ಲಿ ಬರುವ ರ್ಯಾಪ್ ಅನ್ನು ಗುಬ್ಬಿ ಅವರು ಹಾಡಿದ್ದಾರೆ. ಈ ಹಾಡಿನಲ್ಲಿ ಬರುವ
‘ಒಲವೆಂಬ ಹಣತೆ ಎದೆಯಲ್ಲಿ ಬೆಳಗಿ ಬೆಳಕಾದೆ ಬಾಳಿಗೆ ; ಇಂದೇಕೆ ಹೀಗೆ ಬೆಳಕನ್ನು ತೊರೆದು ನೀನೇಕೆ ಸರಿದೆ ನೆರಳಿಗೆ. ಇನ್ನಾವ ಬಂಧ ತೊಡರಿದೆ ನಿನ್ನ ಕಾಲಿಗೆ’ ಎಂಬ ಸಾಲಂತೂ ಅಪ್ಪಟ ಕನ್ನಡತನದಿಂದ ಕೂಡಿದ್ದು ಲಕ್ಷ್ಮಣ್ ರಾವ್ ಅವರ ಸಾಹಿತ್ಯ ಪ್ರತಿಭೆಯ ಹಿರಿಮೆಯನ್ನು ನಮಗೆ ಪರಿಚಯಿಸುವಂತಿದೆ.
‘ತೇಜಸ್ವಿನಿ ಎಂಟರ್ ಪ್ರೈಸಸ್’ನಡಿಯಲ್ಲಿ ‘ಪಡ್ಡೆ ಹುಲಿ’ ಚಿತ್ರವು ತಯಾರಾಗುತ್ತಿದ್ದು ಎಂ. ರಮೇಶ್ ಮತ್ತು ರೆಡ್ಡಿ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಗುರು ದೇಶಪಾಂಡೆ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.