Advertisement

ವಿಶ್ವಕರ್ಮ ಸಮುದಾಯ ಪ.ಪಂಗಡಕ್ಕೆ ಸೇರ್ಪಡೆಗೆ ಬೀದರ್- ಬೆಂಗಳೂರು ಪಾದಯಾತ್ರೆ: ನಂಜುಂಡಿ

12:55 PM Aug 28, 2022 | Suhan S |

ವಿಜಯಪುರ: ವಿಶ್ವಕರ್ಮ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಆಗ್ರಹಿಸಿ ಬೀದರ್ ನಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ ಎಂದು ಮೇಲ್ಮನೆ ಶಾಸಕ ಕೆ.ಪಿ.ನಂಜುಂಡಿ ಹೇಳಿದರು.

Advertisement

ಭಾನುವಾರ ನಗರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವ ಕುರಿತು ನಡೆಯುವ ಹೋರಾಟ ಸರ್ಕಾರದ ವಿರುದ್ಧ ಅಲ್ಲ ಎಂದು ಸ್ಪಷ್ಟಪಡಿಸಿದ ಅವರು,  ಸಮುದಾಯದ ಸಂಘಟನೆ ಬಳಿಕ 2023 ರಲ್ಲಿ ಬೀದರ್ ನಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸುವುದಾಗಿ ವಿವರಿಸಿದರು.

ನಮ್ಮ ಸಮುದಾಯ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಿಂದುಳಿದಿದೆ. ಬಹುತೇಕ ಅನಕ್ಷರಸ್ಥ ಸಮುದಾಯ ಕೌಶಲ್ಯಯುಕ್ತ ಕೆಲಸ ಮಾಡಿಕೊಂಡಿದ್ದು, ಸಂವಿಧಾನ, ಸರ್ಕಾರದ ಸೌಲಭ್ಯ ಪಡೆಯುವಲ್ಲಿ ವಿಫಲವಾಗಿದೆ ಎಂದರು.

ಹೊಗಳಿಗೆ, ಗೌರವ ಮಾತ್ರ ಸಿಗುತ್ತಿದ್ದು, ಇದೇ ನಮ್ಮನ್ನು ಮೂಢರನ್ನಾಗಿ ಮಾಡಿದೆ. ನಮ್ಮನ್ನು ನಾವು ಉನ್ನತ ಜಾತಿಯರು ಎಂದು ಅಹಂಕಾರದಿಂದ ಮೆರೆಯುತ್ತಿರುವ ಕಾರಣ ವಿಶ್ವಕರ್ಮ ಸಮುದಾಯ ತೀರಾ ಹಿಂದುಳಿಯಲು ಪ್ರಮುಖ ಕಾರಣ ಎಂದು ವಿವರಿಸಿದರು.

ರಾಜಕೀಯ ಶಕ್ತಿ ಪಡೆಯದ ಹೊರತು ವಿಶ್ವಕರ್ಮ ಸಮುದಾಯ ಅಭಿವೃದ್ಧಿ ಅಸಾಧ್ಯ. ಇದಕ್ಕಾಗಿ ಕಳೆದ ಎರಡುವರೆ ದಶಕದಿಂದ ಸಮುದಾಯದ ಸಂಘಟನೆ ಆರಂಭಿಸಿದ್ದೇನೆ ಎಂದರು.

Advertisement

ಜಾತಿವಾರು ಜನಗಣತಿ ನಡೆಸುವ ಕುರಿತು ಸದನದಲ್ಲೇ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಿದ್ದೇನೆ. ಆದರೆ ಸದನದಲ್ಲಿ ಸ್ಪಂದನೆ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹಾವನೂರು ಆಯೋಗ ಕುಲ ಶಾಸ್ತ್ರ ಅಧ್ಯಯನ ಮಾಡದೇ 41 ಪಂಗಡಗಳಿರುವ ವಿಶ್ವಕರ್ಮ ಸಮುದಾಯವನ್ನು ಶೇ.15 ರಷ್ಟು ಮಾತ್ರ ಮೀಸಲಿರುವ ಹಾಗೂ 102 ಜಾತಿಗಳಿರುವ ಹಿಂದುಳಿದ 2ಎ ಪ್ರವರ್ಗಕ್ಕೆ ಸೇರಿಸಲಾಯಿತು. ಇದರಿಂದಾಗಿ ಬಲಿಷ್ಠ ಸಮುದಾಯಗಳು ಮೀಸಲು ಸೌಲಭ್ಯದ ಪ್ರಧಾನ ಲಾಭ ಪಡೆಯುತ್ತಿವೆ. ಹೀಗಾಗಿ ಒಳ ಮೀಸಲಾತಿ ಎಂಬುದೂ ಗಗನ ಕುಸುಮ ಎಂದರು.

ಇದನ್ನೂ ಓದಿ: ಕೊಟ್ಟಿಗೆಹಾರ: ಅಡ್ಡ ಬಂದ ಕಾಡು ಹಂದಿಯನ್ನು ತಪ್ಪಿಸಲು ಹೋಗಿ ಆಟೋ ಪಲ್ಟಿ; ಮೂವರಿಗೆ ಗಾಯ 

ದೇಶದ ಹಲವು ರಾಜ್ಯಗಳ ಪರಿಶಿಷ್ಟ ಜಾತಿ, ಪಂಗಡದಲ್ಲೂ ಇದ್ದೇವೆ. ಎಲ್ಲೆಡೆಯೂ ಪರಿಶಿಷ್ಟ ಸಮುದಾಯದ ವ್ಯಾಪ್ತಿಗೆ ಸೇರದ ಕಾರಣ ಸರ್ಕಾರದ ಮೀಸಲು ಸೌಲಭ್ಯ ಪಡೆಯುವಲ್ಲಿ ವಿಫಲವಾಗಿದೆ ಎಂದರು.

ರಾಜ್ಯದಲ್ಲಿ ಪ್ರತಿ ಗ್ರಾಮದಲ್ಲೂ ನಮ್ಮ ಸಮುದಾಯದ ಜನ ಇದ್ದು, 40 ಲಕ್ಷ ಜನಸಂಖ್ಯೆ ಹೊಂದಿದೆ. ಪ್ರತಿ ಹಳ್ಳಿಯಲ್ಲೂ ಇರುವ ನಮ್ಮ ಸಮಾಜ ವರ್ಷದ ಅನ್ನದ ಆಧಾರದಲ್ಲಿ ಕುಲಕಸಬು ನಂಬಿ ಜೀವಿಸುತ್ತಿವೆ. ಮತ್ತೊಂದೆಡೆ ಪ್ರಸ್ತುತ ಸಂದರ್ಭದಲ್ಲಿ ಕುಲಕುಸಬು ಮಾಡಲಾಗದೇ, ಮೀಸಲಾತಿಯಿಂದ ಸಾಮಾಜಿಕ ನ್ಯಾಯವೂ ಸಿಗದೇ ಅನ್ಯಾಯಕ್ಕೀಡಾಗಿದೆ ಎಂದು ವಿವರಿಸಿದರು.

745 ಹೋಬಳಿ ಸಂಚರಿಸಿ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಆಗ್ರಹಕ್ಕಾಗಿ ಸಮುದಾಯದ ಸಮಾವೇಶದ ಮೂಲಕ ಸಂಘಟನೆ ನಡೆಸಲಾಗುತ್ತಿದೆ ಎಂದರು.

ವಿಶ್ವಕರ್ಮ ಸಮಯದ ಪ್ರಮೋದ ಬಡಿಗೇರ, ಎಂ.ಕೆ.ಪತ್ತಾರ, ಬಾಳು ಗಿರಿಗಾಂವಕರ, ಸಂತೋಷ ವಿಶ್ವಕರ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next