ದಾವಣಗೆರೆ: ಹಾಲುಮತ ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲು ಒತ್ತಾಯಿಸಿ ಕಾಗಿನೆಲೆಯಿಂದ ಬೆಂಗಳೂರುವರೆಗೆ ಹಮ್ಮಿಕೊಳ್ಳುವ ಬೃಹತ್ ಪಾದಯಾತ್ರೆ ಜನವರಿ 17ರಂದು ದಾವಣಗೆರೆ ನಗರ ತಲುಪಲಿದೆ ಎಂದು ಕಾಗಿನೆಲೆ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ತಿಳಿಸಿದರು.
ನಗರದ ದೇವರಾಜ ಅರಸುಬಡಾವಣೆಯಲ್ಲಿನ ಶ್ರೀ ಬೀರೇಶ್ವರಭವನದಲ್ಲಿ ನಡೆದ ಪೂರ್ವಭಾವಿಸಭೆಯಲ್ಲಿ ಶ್ರೀಗಳು ಜಾಥಾ ಕುರಿತು ವಿವರಣೆ ನೀಡಿದರು. ಪಾದಯಾತ್ರೆ ಜ. 17ರಂದು ನಗರಕ್ಕೆ ಬಂದಾಗ ಬೃಹತ್ ಸಮಾವೇಶ ನಡೆಸಿ ಪಾದಯಾತ್ರೆಯ ಉದ್ದೇಶದ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುವುದು ಎಂದರು.
ಕಾಗಿನೆಲೆಯಿಂದ ಬೆಂಗಳೂರಿನವರೆಗೆ ಹಮ್ಮಿಕೊಂಡಿರುವ ಈ ಚಾರಿತ್ರಿಕ ಜನಾಂದೋಲನ ಪಾದಯಾತ್ರೆಗೆ ಜ. 15ರಂದು ಕಾಗಿನೆಲೆಯಲ್ಲಿ ಚಾಲನೆ ನೀಡಲಾಗುವುದು. ಪಾದಯಾತ್ರೆ ಜ. 17ರಂದು ದಾವಣಗೆರೆ ತಲುಪಲಿದ್ದು, ಮರುದಿನ ಬೆಂಗಳೂರಿನತ್ತ ಪ್ರಯಾಣ ಮುಂದುವರಿಸಲಿದೆ. ಪಾದಯಾತ್ರೆಯನ್ನು ರಾಷ್ಟ್ರೀಯ ಹೆದ್ದಾರಿಗುಂಟ ನಡೆಸಬೇಕೋ, ಹಳ್ಳಿ ಮಾರ್ಗದ ಮೂಲಕ ನಡೆಸಬೇಕೋ ಎಂಬುದನ್ನು ಇನ್ನೊಮ್ಮೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಪಾದಯಾತ್ರೆಯ ಅಂತಿಮ ದಿನ ಫೆ. 7ರಂದು ಬೆಂಗಳೂರಿನಲ್ಲಿ10 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಸಮಾಜ ಬಾಂಧವರನ್ನು ಒಗ್ಗೂಡಿಸುವ ಮೂಲಕ ಸರ್ಕಾರಕ್ಕೆ ಹಾಲುಮತ ಕುರುಬ ಸಮಾಜವನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ಒತ್ತಡ ಹೇರಲಾಗುವುದು. ಬೆಂಗಳೂರಿನ ಸಮಾವೇಶದಲ್ಲಿ ರಾಜ್ಯದ ಎಲ್ಲ ಭಾಗಗಳಿಂದ ಸಮಾಜ ಬಾಂಧವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿಪಂ ಸದಸ್ಯ ಜಿ.ಸಿ. ನಿಂಗಪ್ಪ, ಜಿಲ್ಲಾ ಕುರುಬ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕುಂಬಳೂರು ವಿರೂಪಾಕ್ಷಪ್ಪ, ಸಮಾಜದ ಪ್ರಮುಖರಾದ ಬಿ.ಎಂ. ಸತೀಶ್, ಪರಶುರಾಮಪ್ಪ, ಎಸ್.ಎಸ್. ಗಿರೀಶ್, ಅಡಾಣಿ ಸಿದ್ದಪ್ಪ, ಅಣ್ಣೇಶ್ ಐರಣಿ, ಎಚ್.ಜಿ. ಸಂಗಪ್ಪ ಇತರರು ಸಭೆಯಲ್ಲಿ ಭಾಗವಹಿಸಿದ್ದರು.