Advertisement

Congress ರಾಜ್ಯ ಸರ್ಕಾರ ವಿರುದ್ಧ ಬಿಜೆಪಿಯಿಂದ ಪಾದಯಾತ್ರೆ?

12:22 AM Jul 09, 2024 | Team Udayavani |

ಬೆಂಗಳೂರು: ಮುಡಾ ಹಗರಣವನ್ನು ಕಾಂಗ್ರೆಸ್‌ ವಿರುದ್ಧ ರಾಜಕೀಯ ಪ್ರತ್ಯಸ್ತ್ರವಾಗಿ ಬಳಸಿಕೊಳ್ಳಲು ಬಿಜೆಪಿ ರಾಜ್ಯ ಘಟಕ ತೀರ್ಮಾನಿಸಿದ್ದು ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರಿಂದ ಮೈಸೂರಿಗೆ ಪಾದಯಾತ್ರೆ ನಡೆಸುವ ಬಗ್ಗೆ ಚಿಂತನೆ ನಡೆಸಿದೆ. ಸದನದ ಒಳಗೆ ಹಾಗೂ ಹೊರಗೆ ಈ ವಿಚಾರದಲ್ಲಿ ಮೈತ್ರಿ ಪಕ್ಷ ಭಾರೀ ಹಂಗಾಮ ಸೃಷ್ಟಿಸುವುದಕ್ಕೆ ಸಿದ್ಧತೆ ನಡೆಸಿದೆ.

Advertisement

ಸಿದ್ದರಾಮಯ್ಯ ವಿರುದ್ಧ ಬಿಜೆಪಿಗೆ ಸಿಕ್ಕಿರುವ ಅತಿದೊಡ್ಡ ಬ್ರಹ್ಮಾಸ್ತ್ರ ಇದಾಗಿದ್ದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಹೈಕಮಾಂಡ್‌ನಿಂದಲೂ ಸೂಚನೆ ಲಭಿಸಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಲ್ಲ ದಾಖಲೆಗಳನ್ನು ಬಿಜೆಪಿ ನಾಯಕರು ತರಿಸಿಕೊಂಡಿದ್ದಾರೆ. ಕಾನೂನು ಸಲಹೆಯನ್ನೂ ಪಡೆಯಲಾಗುತ್ತಿದೆ. ಈ ವಿಚಾರವನ್ನು ಅಧಿವೇಶನದಲ್ಲಿ ಮಂಡಿಸುವಾಗ ಸಾಕಷ್ಟು ಸಿದ್ಧತೆ ಬೇಕಿದ್ದು, ಸಂಸದೀಯ ನೆಲೆಯಲ್ಲಿ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕುವುದಕ್ಕೆ ಬಿಜೆಪಿ ತಾಲೀಮು ಪ್ರಾರಂಭಿಸಿದೆ ಎನ್ನಲಾಗಿದೆ.

ಮುಡಾ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸುವುದಕ್ಕೆ ಕಾಂಗ್ರೆಸ್‌ ಅವಕಾಶ ನೀಡುವುದಿಲ್ಲ. ಕೊಟ್ಟರೂ ಅದು ಗದ್ದಲದಲ್ಲಿ ಕೊನೆಯಾಗುತ್ತದೆ ಎಂಬ ಅಭಿಪ್ರಾಯ ಬಿಜೆಪಿ ಹಿರಿಯ ನಾಯಕರಿಂದ ವ್ಯಕ್ತವಾಗಿದೆ. ಹೀಗಾಗಿ ಈ ವಿಚಾರದ ಬಗ್ಗೆ ಮೊದಲ ದಿನವೇ ನಿಲುವಳಿ ಸೂಚನೆ ಮಂಡಿಸಲು ಬಿಜೆಪಿ ನಿರ್ಧರಿಸಿದೆ. ಆದರೆ ಹಗರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಇದೆ ಎಂಬುದನ್ನು ಕರಾರುವಕ್ಕಾಗಿ ದಾಖಲೆ ಸಮೇತ ಮಂಡಿಸುವ ವಿಚಾರದಲ್ಲಿ ಬಿಜೆಪಿಗೆ “ವಾಕ³ಟು’ಗಳ ಕೊರತೆ ಕಾಡುವ ಸಾಧ್ಯತೆ ಇದೆ. ಹೀಗಾಗಿ ಸದನದೊಳಗೆ ಅಹೋರಾತ್ರಿ ಧರಣಿ ನಡೆಸಲು ಬಿಜೆಪಿ ಚಿಂತನೆ ನಡೆಸಿದೆ.

ನಾಳೆ ಬಿಜೆಪಿ ನಾಯಕರ ಸಭೆ:
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ನೇತೃತ್ವದಲ್ಲಿ ಬುಧವಾರ ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಸಭೆ ನಡೆಯಲಿದ್ದು ಉಪನಾಯಕ ಅರವಿಂದ ಬೆಲ್ಲದ್‌, ಮಾಜಿ ಸಚಿವರಾದ ಎಸ್‌.ಸುರೇಶ್‌ ಕುಮಾರ್‌, ಆರಗ ಜ್ಞಾನೇಂದ್ರ, ವಿ.ಸುನೀಲ್‌ ಕುಮಾರ್‌, ಡಾ. ಸಿ.ಎನ್‌.ಅಶ್ವತ್ಥನಾರಾಯಣ, ಸಿ.ಟಿ.ರವಿ, ಎನ್‌.ರವಿಕುಮಾರ್‌, ಪ್ರಧಾನ ಕಾರ್ಯದರ್ಶಿಗಳಾದ ನಂದೀಶ್‌ ರೆಡ್ಡಿ, ಪಿ.ರಾಜೀವ್‌, ಪ್ರೀತಂ ಗೌಡ, ಎನ್‌.ರವಿಕುಮಾರ್‌, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಿರಿಯ ನಾಯಕರು ಭಾಗವಹಿಸಲಿದ್ದಾರೆ.

ಅಧಿವೇಶನದ ಬೆನ್ನಲ್ಲೇ ಈ ವಿಚಾರವನ್ನು ಮುಂದಿಟ್ಟುಕೊಂಡು ಬೃಹತ್‌ ಹೋರಾಟ ನಡೆಸುವ ಪ್ರಸ್ತಾಪ ವ್ಯಕ್ತವಾಗಿದ್ದು ಬೆಂಗಳೂರಿನಿಂದ ಮೈಸೂರಿನ ಮುಡಾ ಕಚೇರಿಯವರೆಗೆ ಪಾದಯಾತ್ರೆ ನಡೆಸುವುದರ ಸಾಧ್ಯಾಸಾಧ್ಯತೆಗಳ ಬಗ್ಗೆ ಈ ಸಭೆಯಲ್ಲಿ ನಿರ್ಣಯವಾಗಲಿದೆ. ಹೀಗಾಗಿ ಈ ಹೋರಾಟ ವಿಜಯೇಂದ್ರ ಹಾಗೂ ಅಶೋಕ್‌ ಇಬ್ಬರಿಗೂ ಮಹತ್ವದ್ದಾಗಿ ಪರಿಣಮಿಸಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next