ಬೆಂಗಳೂರು: ಬಿಜೆಪಿ ರಾಜ್ಯ ನಾಯಕತ್ವದ ವಿರುದ್ಧ ಬಹಿರಂಗ ಸಮರ ಸಾರಿದ್ದಲ್ಲದೆ, ಕಾಂಗ್ರೆಸ್ ಸರಕಾರ ಭಾಗಿಯಾಗಿದೆ ಎಂದು ಆರೋಪಿಸಲಾಗಿರುವ “ವಾಲ್ಮೀಕಿ ನಿಗಮ ಹಗರಣ’ವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುವ ಸಲುವಾಗಿ ಬಳ್ಳಾರಿ ಪಾದಯಾತ್ರೆ ಘೋಷಿಸಿದ್ದ ಪಕ್ಷದ ಒಂದು ಗುಂಪು ಈಗ ಮೌನಕ್ಕೆ ಜಾರಿದೆ. ಉತ್ತರ ಕರ್ನಾಟಕದ ಪ್ರಭಾವಿ ನಾಯಕರಾದ ರಮೇಶ್ ಜಾರಕಿಹೊಳಿ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಇತ್ತೀಚೆಗೆ ಬೆಂಗಳೂರು ಹಾಗೂ ಬಳಿಕ ಬೆಳಗಾವಿಯಲ್ಲಿ ಸಭೆ ಸೇರಿದ್ದ “ಪಕ್ಷ ನಿಷ್ಠ’ ನಾಯಕರ ಗುಂಪು ತನ್ನ ಮುಂದಿನ ಹೆಜ್ಜೆ ಬಗ್ಗೆ ಮುಗುಂ ಆಗಿದೆ. ಮುಖ್ಯಮಂತ್ರಿಗಳ ವಿಚಾರಣೆಗೆ ರಾಜ್ಯಪಾಲರು ಅನುಮತಿ ನೀಡಿರುವ ಈ ಸಂದರ್ಭದಲ್ಲಿ ನಿಮ್ಮ ಗುಂಪಿನ ನಡೆ ಏನು ಎಂಬ ಪ್ರಶ್ನೆಗೆ, “ಸದ್ಯ ಏನನ್ನೂ ಕೇಳಬೇಡಿ. ಇನ್ನು 8-10 ದಿನ ಮಾತನಾಡುವುದಿಲ್ಲ’ ಎಂದು ಸ್ವತಃ ಜಾರಕಿಹೊಳಿ ಅವರೇ “ಉದಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ. ಹೀಗಾಗಿ ಈ ಗುಂಪಿನ ಮುಂದಿನ ನಡೆ ಕುತೂಹಲಕ್ಕೆ ಕಾರಣವಾಗಿದೆ.
ಬಂಡಾಯ ಅಲ್ಲ, ನಿಷ್ಠರು
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ನಡೆದ “ಮೈಸೂರು ಚಲೋ’ ಪಾದಯಾತ್ರೆಗೆ ಗೈರಾಗಿದ್ದ ಜಾರಕಿಹೊಳಿ ಹಾಗೂ ಯತ್ನಾಳ್, ವಾಲ್ಮೀಕಿ ನಿಗಮ ಹಗರಣ ಸಂಬಂಧ “ಬಳ್ಳಾರಿ ಚಲೋ’ ಮಾಡುವುದಾಗಿ ಘೋಷಿಸಿದ್ದರು. ಇದ ಕ್ಕಾಗಿ ಪಕ್ಷದ ವರಿಷ್ಠರ ಅನುಮತಿ ಪಡೆಯುವುದಾಗಿಯೂ ಹೇಳಿದ್ದರು. ಅಲ್ಲದೆ ವಿಜಯೇಂದ್ರ ಅವರ ನಾಯಕತ್ವವನ್ನು ತಾವು ಒಪ್ಪುವುದಿಲ್ಲ ಎಂದು ಬಹಿರಂಗವಾಗಿ ಸಾರಿದ್ದರು. ಹಾಗೆಂದು ತಾವು ಬಂಡಾಯ ನಾಯಕರಲ್ಲ, ನಮ್ಮದು “ಬಿಜೆಪಿ ನಿಷ್ಠ ಗುಂಪು’ ಎಂದೂ ಹೇಳಿಕೊಂಡಿದ್ದರು.
ಇದರ ಕಾವೇರುತ್ತಿದ್ದಂತೆ ಬಿಜೆಪಿಯ ವರಿಷ್ಠರು ಕರ್ನಾಟಕ ದತ್ತ ಕಣ್ಣು ಹಾಯಿಸಿದ್ದರು. ಇದಕ್ಕೆ ಪೂರಕವೋ ಎಂಬಂತೆ ಪಕ್ಷದ ರಾಷ್ಟ್ರೀಯ ಸಂಘಟನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕಳೆದ ವಾರ ಬೆಂಗಳೂರಿಗೆ ಭೇಟಿ ನೀಡಿದ್ದರು. ಸಂಘದ ಮಧ್ಯಸ್ಥಿಕೆಯಲ್ಲಿ ರಾಜ್ಯ ನಾಯಕತ್ವ ಹಾಗೂ ಇನ್ನೊಂದು ಬಣದ ಮುಖಂಡರ ಜತೆ ಸಮಾಲೋಚನೆ ನಡೆಸಿ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನವೂ ನಡೆದಿತ್ತು.
ಇದರ ಬೆನ್ನಲ್ಲೇ ದಿಲ್ಲಿಗೆ ಬರುವಂತೆ ವರಿಷ್ಠರಿಂದ ಬುಲಾವ್ ಬಂದಿತ್ತು. ಎಲ್ಲವೂ ಅಂದುಕೊಂಡಂತೆ ನಡೆದ್ದರೆ ಜಾರಕಿಹೊಳಿ-ಯತ್ನಾಳ್ ಗುಂಪು ಸೋಮವಾರ ದಿಲ್ಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಬೇಕಿತ್ತು. ಆದರೆ ಸಿಎಂ ವಿರುದ್ಧ ರಾಜ್ಯಪಾಲರು ಅಭಿಯೋಜನೆಗೆ ಅನುಮತಿ ನೀಡಿರುವುದರಿಂದ ರಾಜ್ಯ ರಾಜಕಾರಣ ಮತ್ತೊಂದು ಮಗ್ಗಲಿಗೆ ಹೊರಳಿದ್ದು, ಈ ಸಂದರ್ಭದಲ್ಲಿ ರಾಜ್ಯ ನಾಯಕತ್ವ ಅಥವಾ ಬಳ್ಳಾರಿ ಪಾದಯಾತ್ರೆಯಂತಹ ವಿಷಯಗಳ ಚರ್ಚೆ ಮಾಡುವ ಬಗ್ಗೆ ವರಿಷ್ಠರೂ ಆಸಕ್ತಿ ತೋರಿದಂತಿಲ್ಲ. ಭಿನ್ನರ ಗುಂಪೂ ಸುಮ್ಮನಾಗಿದೆ ಎನ್ನಲಾಗಿದೆ.
ಪ್ರಸ್ತುತ ಸನ್ನಿವೇಶದಲ್ಲಿ ವರಿಷ್ಠರ ಭೇಟಿ ಸರಿಯೇ ಎಂಬ ಆಲೋಚನೆ ಆರಂಭವಾಗಿದ್ದು, ಮುಂದೆ ಯಾವ ಹೆಜ್ಜೆ ಇರಿಸಬೇಕೆಂದು ಗೊಂದಲಕ್ಕೆ ಬಿದ್ದಿರುವ ಭಿನ್ನಪಡೆಯ ಓರ್ವ ಸದಸ್ಯರು, ಸೋಮವಾರ ಸಭೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಮತ್ತೋರ್ವ ಶಾಸಕ, ಸದ್ಯಕ್ಕೆ ಈ ವಿಚಾರ ನಮ್ಮ ಮುಂದಿಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ಚಿಂತನೆ ನಡೆಸುತ್ತೇವೆ ಎಂದಷ್ಟೇ ಹೇಳಿದ್ದಾರೆ.