ರಾಘವೇಂದ್ರ ಭಟ್
ಹಳೆ ಮೈಸೂರು ಭಾಗದಲ್ಲಿ ಮತರಾಜಕಾರಣದ ಗರ್ಭಾಂಕುರಕ್ಕೆ ಕಾರಣವಾಗಬಹುದೆಂಬ ಭಾರಿ ನಿರೀಕ್ಷೆಯೊಂದಿಗೆ ಆರಂಭಗೊಂಡಿದ್ದ ಕಾಂಗ್ರೆಸ್‌ನ “ಮೇಕೆದಾಟು ಪಾದಯಾತ್ರೆ’’ ವಿವಾದದೊಂದಿಗೆ ಆರಂಭಗೊಂಡು ವಿವಾದದೊಂದಿಗೇ ತಾತ್ಕಾಲಿಕವಾಗಿ ಅಂತ್ಯಗೊಂಡಿದೆ. ಹಾಗೆ ನೋಡಿದರೆ ರಾಜ್ಯದ ಮೂರು ಪ್ರಧಾನ ರಾಜಕೀಯ ಪಕ್ಷಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪಾಲ್ಗೊಂಡ ಇತ್ತೀಚಿಗಿನ ರಾಜಕೀಯ ವಿದ್ಯಮಾನ ಯಾವುದಾದರೂ ಇದ್ದರೆ ಅದು ಮೇಕೆದಾಟು. ಆದರೆ ಯಾವುದೇ ಫಲಶೃತಿಯನ್ನೂ ನೀಡದೇ ಈ ಯಾತ್ರೆ ಈಗ ಅಂತ್ಯಗೊಂಡಿದೆ.
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಪಾದಯಾತ್ರೆ ಎಂಬುದು ಅಧಿಕಾರ ಗಳಿಕೆಯ ಜೈತ್ರಯಾತ್ರೆಯೇ ಆಗಿದೆ. ರಾಮಕೃಷ್ಣ ಹೆಗಡೆ, ಎಚ್.ಡಿ.ದೇವೇಗೌಡ, ಎಸ್.ಎಂ.ಕೃಷ್ಣ, ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ, ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಮುಖ್ಯಮಂತ್ರಿ ಗಾಧಿಯ ಕನಸು ಕಂಡವರೆಲ್ಲ ಇಡಿ ರಾಜ್ಯವನ್ನು ಬೆರಗುಗೊಳಿಸುವ ರೀತಿಯಲ್ಲಿ ರಥಯಾತ್ರೆಯನ್ನೋ, ಪಾದಯಾತ್ರೆಯನ್ನು ನಡೆಸಿಯೇ ಯಶಸ್ವಿಯಾದವರು. ಅದರಲ್ಲೂ ಎಸ್.ಎಂ.ಕೃಷ್ಣ ಅವರ ಪಾಂಚಜನ್ಯ, ಯಡಿಯೂರಪ್ಪ ಅವರ ಪರಿವರ್ತನಾ ರಥಯಾತ್ರೆ ಮತಬ್ಯಾಂಕ್ ಕ್ರೋಢೀಕರಣದಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಇನ್ನು ಸಿದ್ದರಾಮಯ್ಯ ಹಾಗೂ ಡಾ.ಜಿ.ಪರಮೇಶ್ವರ ಜಂಟಿಯಾಗಿ ನಡೆಸಿದ್ದ ಪಾದಯಾತ್ರೆ 2013ರಲ್ಲಿ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆಯನ್ನು ಗಟ್ಟಿಗೊಳಿಸಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿತ್ತು. ಬಹುಶಃ ಈ ಎಲ್ಲ ಯಾತ್ರೆಗಳಿಂದಲೇ ಪ್ರೇರಣೆಗೊಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮನ್ನು ಅಧಿಕಾರದ ಕೇಂದ್ರದಲ್ಲಿ ಪ್ರತಿಷ್ಠಾಪನೆ ಮಾಡಿಕೊಳ್ಳುವುದಕ್ಕಾಗಿಯೇ ಈ ಪಾದಯಾತ್ರೆ ಆಯೋಜಿಸಿದ್ದರೆಂಬುದರಲ್ಲಿ ಅನುಮಾನವೇ ಇಲ್ಲ.
ಹಾಗಾದರೆ ಮೇಕೆದಾಟು ಪಾದಯಾತ್ರೆ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್‌ನ ಸರ್ವಸಮ್ಮತ ಸೇನಾನಿಯಾಗಿ ರೂಪಿಸಿದೆಯೇ ? ಎಂಬ ಪ್ರಶ್ನೆಗೆ ಅವಧಿಪೂರ್ವ ಪ್ರಸವಗೊಂಡ ಶಿಶುವಿನಂತೆ ಅರ್ಧಕ್ಕೆ ನಿಂತ ಪಾದಯಾತ್ರೆಯಿಂದ ಉತ್ತರವಿಲ್ಲ. ಏಕೆಂದರೆ ಈ ಯಾತ್ರೆಯ ಆರಂಭಕ್ಕೆ ಕಾಂಗ್ರೆಸ್‌ನ ಎಲ್ಲ ನಾಯಕರಿಂದಲೂ ಸಂಪೂರ್ಣ ಸಹಮತ ಇರಲಿಲ್ಲ. ಕಾವೇರಿ ನದಿ ಹಾಯ್ದು ಹೋಗುವ ಅಥವಾ ಕಾವೇರಿ ನೀರಿನ ಸಂಪರ್ಕವನ್ನು ಪಡೆಯುವ ರಾಜಧಾನಿ ಬೆಂಗಳೂರು ಸೇರಿದಂತೆ ಸುಮಾರು 80 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಮ್ಮ ನಾಯಕತ್ವವನ್ನು ಪ್ರತಿಷ್ಠಾಪಿಸಲು ಶಿವಕುಮಾರ್ ಹೊರಟಿರುವುದು ರಹಸ್ಯವಾಗಿ ಉಳಿದಿರಲಿಲ್ಲ. ಇದು ಹಳೆ ಮೈಸೂರು ಭಾಗದ ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರಗಳಾಗಿತ್ತು. ಇಲ್ಲಿ ಶಿವಕುಮಾರ್ ಪ್ರಶ್ನಾತೀತವಾಗಿ ಬೆಳೆಯುವುದು ಕಾಂಗ್ರೆಸ್‌ನ ಆಂತರ್ಯದಲ್ಲಿ ಸಿದ್ದರಾಮಯ್ಯ ಬಣದ ಹುಬ್ಬೇರಿಸಿದರೆ, ಬಾಹ್ಯದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರನ್ನು ಕೆರಳಿಸಿತ್ತು. ಹಾಗೆ ನೋಡಿದರೆ ಆಡಳಿತಾರೂಢ ಬಿಜೆಪಿಗಿಂತಲೂ ಉಗ್ರವಾಗಿ ಕಾಂಗ್ರೆಸ್ ಪಾದಯಾತ್ರೆಯನ್ನು ವಿಮರ್ಷೆಯ ನಿಕಷಕ್ಕೆ ಒಳಪಡಿಸಿದ್ದೇ ಜೆಡಿಎಸ್. ಕಳೆದೊಂದು ವರ್ಷದಿಂದ ತಮ್ಮದೇ ಪಕ್ಷದ ಶಾಸಕರ ವಿಶ್ವಾಸವನ್ನು ಕಳೆದುಕೊಳ್ಳುತ್ತಿರುವ ಕುಮಾರಸ್ವಾಮಿಯವರಿಗೆ ಪರ್ಯಾಯ ನಾಯಕನಾಗಿ ಡಿಕೆಶಿ ಉದ್ಭವಿಸುವುದು ಎಳ್ಳಷ್ಟು ಸಮ್ಮತವಿರಲಿಲ್ಲ. ಹೀಗಾಗಿ 90ರ ದಶಕದಲ್ಲಿ ಶಿವಕುಮಾರ್ ಹಾಗೂ ಕುಮಾರಸ್ವಾಮಿ ಮಧ್ಯೆ ಇದ್ದ ರಾಜಕೀಯ ಮೇಲಾಟವನ್ನು ಈ ಪಾದಯಾತ್ರೆ ನೆನಪಿಸಿತು.
ಹಾಗೆ ನೋಡಿದರೆ ಈ ಪಾದಯಾತ್ರೆಯಿಂದ ಬಿಜೆಪಿಗೆ ಯಾವುದೇ ರಾಜಕೀಯ ನಷ್ಟವಿರಲಿಲ್ಲ. ಹೀಗಾಗಿ ಆರಂಭದಿಂದಲೂ ಈ ಬಗ್ಗೆ ಬಿಜೆಪಿ ಶೀತಲ ಪ್ರತಿಕ್ರಿಯೆಯನ್ನು ನೀಡುತ್ತಲೇ ಇತ್ತು. ರಾಜಧಾನಿ ಬೆಂಗಳೂರಿಗೆ ಮೇಕೆದಾಟು ಯೋಜನೆಯ ಫಲ ಶೂನ್ಯ ಎಂದು ಆರಂಭದಿಂದಲೂ ಪ್ರತಿಪಾದಿಸುತ್ತಲೇ ಬಂದಿದ್ದ ಬಿಜೆಪಿಗೆ ಬೆಂಗಳೂರಿನ 24 ಕ್ಷೇತ್ರದ ಫಲಿತಾಂಶವನ್ನು ಡಿ.ಕೆ.ಶಿವಕುಮಾರ್ ಬದಲಿಸಿ ಬಿಡುತ್ತಾರೆಂಬ ಭ್ರಮೆ ಇರಲಿಲ್ಲ. ಇನ್ನುಳಿದಂತೆ, ರಾಮನಗರ, ಮಂಡ್ಯ, ಹಾಸನ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಮೈಸೂರು ಸೇರಿದಂತೆ ಒಕ್ಕಲಿಗರ ಪ್ರಾಬಲ್ಯದ ಪ್ರದೇಶದಲ್ಲಿ ಬಿಜೆಪಿ ಕಳೆದುಕೊಳ್ಳುವುದು ಏನೇನೂ ಇರಲಿಲ್ಲ. ಹೀಗಾಗಿ ಹೈಕೋರ್ಟ್ ಛಾಟಿ ಬೀಸುವವರೆಗೂ ಮೇಕೆದಾಟು ಪಾದಯಾತ್ರೆ ವಿಚಾರದಲ್ಲಿ ಬಿಜೆಪಿ “ಓತಿಕ್ಯಾತಕ್ಕೆ ಬೇಲಿಯಗೂಟ ಸಾಕ್ಷಿ’’ ಎಂಬಂತೆ ವರ್ತಿಸಿಬಿಟ್ಟಿತು.
ಅಂತಿಮವಾಗಿ ಕೋವಿಡ್ ಮಾರ್ಗಸೂಚಿ ಪಾಲನೆಗಾಗಿ ಮೇಕೆದಾಟು ಪಾದಯಾತ್ರೆ ಸದ್ಯಕ್ಕೇನೋ ಸ್ಥಗಿತಗೊಂಡಿದೆ. ಆದರೆ ಒಕ್ಕಲಿಗ ಸಮುದಾಯದ ಪ್ರಶ್ನಾತೀತ ನಾಯಕನಾಗಿ ಸ್ಥಾಪಿಸಿಕೊಳ್ಳಬೇಕೆಂಬ ಶಿವಕುಮಾರ್ ಕನಸು ರಾಜಕೀಯವಾಗಿ ಅರ್ಧಕ್ಕೆ ನಿಂತಂತಾಗಿದೆ. ಅವರ ತವರು ಜಿಲ್ಲೆ ರಾಮನಗರದಲ್ಲಿ ಮಾತ್ರ ಯಾತ್ರೆ ಸಾಗಿದ್ದರಿಂದ ನಾಯಕತ್ವದ ವ್ಯಾಪ್ತಿ ವಿಸ್ತರಣೆಯ ಕನಸು ಕನಸಾಗಿಯೇ ಉಳಿದಿದೆ. ಆದರೆ ಈ ಅವಧಿಯಲ್ಲಿ ಶಿವಕುಮಾರ್ ಸೃಷ್ಟಿಸಿದ ಅಬ್ಬರದಿಂದ ಎಚ್ಚೆತ್ತುಕೊಂಡಿರುವುದು ಜೆಡಿಎಸ್. ದಿನದಿಂದ ದಿನಕ್ಕೆ ಶಕ್ತಿ ಕಳೆದುಕೊಳ್ಳುತ್ತಿದ್ದ ಜಾತ್ಯತೀತ ಜನತಾ ದಳದ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಈಗ ಮತ್ತೆ ಎದ್ದು ನಿಂತಿದ್ದಾರೆ. ಮೇ ತಿಂಗಳ ಆರಂಭದಲ್ಲೇ ದೇವೇಗೌಡರು ಮತ್ತೆ ಹಳೆ ಮೈಸೂರು ಭಾಗದ ರಾಜಕೀಯ ಅಖಾಡದಲ್ಲಿ ತಮ್ಮ “ಪಗಡೆ ದಾಳ’’ ಉರುಳಿಸುವುದಕ್ಕೆ ಸಿದ್ದರಾಗಿದ್ದಾರೆ. ಪಾದಯಾತ್ರೆ ಸಂದರ್ಭದಲ್ಲಿ ಅಪ್ಪಿತಪ್ಪಿಯೂ ಒಂದಕ್ಷರ ಮಾತನಾಡದ ದೇವೇಗೌಡರು ಆ ನಂತರ ಸುಮ್ಮನೆ ಕುಳಿತುಕೊಳ್ಳುವ ಜಾಯಮಾನದವರಲ್ಲ ಎಂಬ ಸತ್ಯ ಖುದ್ದು ಶಿವಕುಮಾರ್ ಅವರಿಗೂ ತಿಳಿದಿದೆ. ಹೀಗಾಗಿ ಪಾದಯಾತ್ರೆಯ “ಕಂಪನೋತ್ತರ ಪರಿಣಾಮ’’ ಇನ್ನು ಆರಂಭವಾಗಬೇಕಿದೆ.
ಮೇಕೆದಾಟು ಪಾದಯಾತ್ರೆ ವೈಜ್ಞಾನಿಕ ದೃಷ್ಟಿಯಿಂದ ಕಾರ್ಯಸಾಧುವಾದುದ್ದೇ ಅಲ್ಲ. ಶರಾವತಿ ಹಾಗೂ ಅಘನಾಶಿನಿಯನ್ನು ತಿರುಗಿಸಿ ಬೆಂಗಳೂರಿನ ಕುಡಿಯುವ ನೀರಿನ ಆದ್ಯತೆ ಪೂರೈಸಬಹುದು ಎಂದು ಹಿಂದಿನ ಸರಕಾರಗಳು ಪ್ರತಿಪಾದಿಸಿದಷ್ಟೇ ಅತಾರ್ಕಿಕವಾದ ಯೋಜನೆ ಇದಾಗಿದೆ. ಮೇಕೆದಾಟು ಯೋಜನೆಗೆ ಸದ್ಯಕ್ಕೆ ಅಡ್ಡಿಯಾಗಿರುವುದು ಕರ್ನಾಟಕದ ರಾಜಕೀಯ ಇಚ್ಛಾಶಕ್ತಿಯ ಕೊರತೆ ಅಲ್ಲ. ಅದಕ್ಕೆ ಅಡ್ಡಿಯಾಗಿರುವುದು ಹಸಿರುಪೀಠದಲ್ಲಿ ವಿಚಾರಣಾ ಹಂತದಲ್ಲಿರುವ ಪರಿಸರ ಸಂಬಂಧಿ ಅರ್ಜಿ. ಅಪಾರ ಪ್ರಮಾಣದಲ್ಲಿ ನೈಸರ್ಗಿಕ ಅರಣ್ಯದ ಹನನಕ್ಕೆ ಕಾರಣವಾಗುವ ಈ ಯೋಜನೆಯಿಂದ ಪರಿಸರ ಅಸಮತೋಲನವಾಗುವುದರ ಜತೆಗೆ ಆನೆ ಕಾರಿಡಾರ್ ವ್ಯಾಪ್ತಿಯ 700 ಹೆಕ್ಟೇರ್‌ಗೂ ಅಧಿಕ ಅರಣ್ಯ ನಾಶವಾಗುತ್ತದೆ. ಈಗಾಗಲೇ ವನ್ಯಜೀವಿ-ಮಾನವ ಸಂಘರ್ಷದಿಂದ ತತ್ತರಿಸಿರುವ ಚಾಮರಾಜನಗರ, ಮೈಸೂರು, ಹಾಸನ, ರಾಮನಗರದ ಕೆಲ ಭಾಗಗಳ ಮೇಲೆ ಇದರಿಂದ ವ್ಯತಿರಿಕ್ತ ಪರಿಣಾಮವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಜತೆಗೆ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣದ ಕುರಿತಾಗಿ ಕಾಂಗ್ರೆಸ್ ನಡೆಸಿದ ಈ ಪಾದಯಾತ್ರೆ ಕರ್ನಾಟಕವನ್ನು ಹಠಮಾರಿ ರಾಜ್ಯ ಎಂದು ಬಿಂಬಿಸುವ ಅಪಾಯವೇ ಹೆಚ್ಚಿದೆ. ಒಟ್ಟಿನಲ್ಲಿ ವಿವಾದದೊಂದಿಗೆ ಆರಂಭವಾಗಿ ವಿವಾದದಲ್ಲೇ ಅಂತ್ಯಗೊಂಡ ಮೇಕೆದಾಟು ಪಾದಯಾತ್ರೆ ಶಿವಕುಮಾರ್ ಸೇರಿದಂತೆ ಯಾರ ಸಂಕಲ್ಪಿತ ಉದ್ದೇಶವನ್ನೂ ಈಡೇರಿಸಿಲ್ಲ. ಸಾಗರದ ಅಕಾಲಿಕ ಅಬ್ಬರದಂತೆ ಒಂದಿಷ್ಟು ಸಮಯ ಆತಂಕ ಸೃಷ್ಟಿಸಿದ್ದಷ್ಟೇ ಈ ಯಾತ್ರೆಯ ಫಲ ಎನ್ನಬಹುದು.