ಕೆಲವು ಕಥೆಗಳು ಯಾವತ್ತಿದ್ದರೂ ಹಳೆಯದಾಗಲ್ಲ, ಅದನ್ನು ಹೇಗೆ ಬೇಕಾದರೂ ತೋರಿಸಬಹುದು. ಅದರಲ್ಲೊಂದು ಹರೆಯದ ಪ್ರೇಮಕಥೆ, ಲವ್ ಸ್ಟೋರಿಗಳು. ಕನ್ನಡ ಚಿತ್ರರಂಗದಲ್ಲಿ ಹದಿಹರೆಯದ ಲವ್ ಸ್ಟೋರಿಗಳು ಸಾಕಷ್ಟು ಬಂದಿವೆ. ಅನೇಕ ಚಿತ್ರಗಳು ಹೊಸಬರ ಮನಸ್ಸು ಗೆದ್ದಿವೆ. ಈ ಸಾಲಿಗೆ ಈಗ ಹೊಸ ಸೇರ್ಪಡೆ “ಪದವಿ ಪೂರ್ವ’.
ವರ್ಷಾಂತ್ಯದಲ್ಲಿ ತೆರೆಕಂಡ ಈ ಚಿತ್ರ ಈಗ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಪಕ್ಕಾ ಯೂತ್‌ಫುಲ್ ಕಥೆ ಹೊಂದಿರುವ ಕಾಲೇಜು ಹಿನ್ನೆಲೆಯಲ್ಲಿ ನಡೆಯುವ “ಪದವಿ ಪೂರ್ವ’ ಹೊಸಬರ ಚಿತ್ರವಾದರೂ ಒಂದೊಳ್ಳೆ ಮನರಂಜನೆಯ ಚಿತ್ರವಾಗಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
“ಪದವಿ ಪೂರ್ವ’ ಚಿತ್ರದಲ್ಲಿ ನಾಯಕರಾಗಿ ನಟಿಸುವ ಮೂಲಕ ಪೃಥ್ವಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಭವಿಷ್ಯದ ಭರವಸೆಯ ನಟರಾಗಿ ಹೊರಹೊಮ್ಮಿರುವ ಪೃಥ್ವಿಗೆ ಈಗ ಕನ್ನಡ ಚಿತ್ರರಂಗದಿಂದ ಸಾಕಷ್ಟು ಅವಕಾಶಗಳು ಹುಡುಕಿಬರುತ್ತಿವೆ.
ಯೋಗರಾಜ್ ಸಿನಿಮಾಸ್ ಹಾಗೂ ರವಿ ಶಾಮನೂರ್ ಫಿಲಂಸ್ ಜಂಟಿಯಾಗಿ “ಪದವಿ ಪೂರ್ವ’ ಚಿತ್ರವನ್ನು ನಿರ್ಮಿಸಿದೆ. ಸಿನಿಮಾಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಯಿಂದ ಚಿತ್ರತಂಡ ಖುಷಿಯಾಗಿದ್ದು, ಇತ್ತೀಚೆಗೆ ಮಾಧ್ಯಮದ ಮುಂದೆ ಬಂದು ಆ ಖುಷಿಯನ್ನು ಹಂಚಿಕೊಂಡಿತು. ನಿರ್ದೇಶಕ ಹರಿಪ್ರಸಾದ್ ಜಯಣ್ಣ, ನಿರ್ಮಾಪಕರಾದ ಯೋಗರಾಜ್ ಭಟ್, ರವಿ ಶ್ಯಾಮನೂರ್, ನಾಯಕ ಪೃಥ್ವಿ, ನಾಯಕಿ ಅಂಜಲಿ ಸೇರಿದಂತೆ ಇಡೀ ಚಿತ್ರತಂಡ ಹಾಜರಿತ್ತು.
ಹೊಸಬರ ಸಿನಿಮಾವಾದರೂ ಮೆಚ್ಚುಗೆ ಸಿಗುತ್ತಿದೆ. ಅನೇಕರು ಈ ಸಿನಿಮಾ ನೋಡಿ ತಮ್ಮ ಕಾಲೇಜು, ಸ್ನೇಹಿತರ ಬಗ್ಗೆ ನೆನಪಸಿಕೊಂಡಿದ್ದಾರೆ ಎನ್ನುವುದು ಚಿತ್ರತಂಡದ ಮಾತು. ಅಂದಹಾಗೆ, ಪೃಥ್ವಿ ಅವರ ಹೊಸ ಸಿನಿಮಾವನ್ನು ಯೋಗರಾಜ್ ಭಟ್ ಅವರು ನಿರ್ದೇಶಿಸಲಿದ್ದಾರಂತೆ.
“ಚಿಕ್ಕಂದಿನಲ್ಲೇ ನನಗೆ ಸಿನಿಮಾ ನಟನಾಗಬೇಕೆಂಬ ಆಸೆ. ಒಂದು ಸಿನಿಮಾದಲ್ಲಾದರೂ ಕಾಣಿಸಕೊಂಡರೆ ಸಾಕು ಎಂಬ ಕನಸು ನನ್ನದಾಗಿತ್ತು. ಅನೇಕ ಸಿನಿಮಾಗಳಿಗೆ ಆಡಿಷನ್ ಕೊಟ್ಟಿದ್ದೆ. ಆದರೆ, ನಾನು ಹೈಟ್ ಇದ್ದೇನೆಂಬ ಕಾರಣಕ್ಕೆ ರಿಜೆಕ್ಟ್ ಆಗಿದ್ದೆ. ಹಾಗಂತ ನನ್ನ ಪ್ರಯತ್ನ ನಿಲ್ಲಿಸಲಿಲ್ಲ. ಡ್ಯಾನ್ಸ್, ಫೈಟ್ ಎಲ್ಲವನ್ನು ಕಲಿತಿದ್ದೇನೆ. ಈಗ ಸಿನಿಮಾದಲ್ಲಿ ಅವಕಾಶ ಸಿಕ್ಕಿ, ಚಿತ್ರವೂ ಬಿಡುಗಡೆಯಾಗಿದೆ. ಯೋಗರಾಜ್ ಭಟ್ ಅವರ ಜೊತೆಗೆ ಒಂದು ಫೋಟೋ ತೆಗೆಸಿಕೊಂಡರೆ ಸಾಕು ಎಂದು ಆಸೆಪಟ್ಟವನಿಗೆ ಈಗ ಅವರ ಬ್ಯಾನರ್‌ನಲ್ಲೇ ನಟಿಸುವ ಅವಕಾಶ ಸಿಕ್ಕಿದೆ.”ಪದವಿ ಪೂರ್ವ’ ಚಿತ್ರದ ಕಥೆ ಇವತ್ತಿನ ಟ್ರೆಂಡ್‌ಗೆ ಬೇಕಾದಂತೆ ಇರುವುದರಿಂದ ಜನರಿಗೆ ಚಿತ್ರ ಇಷ್ಟವಾಗಿದೆ ಎಂಬುದು ಪೃಥ್ವಿ ಮಾತು.