ವರ್ಷಾಂತ್ಯದಲ್ಲಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಸಾಲಿನಲ್ಲಿ ನಿಲ್ಲುವ ಚಿತ್ರಗಳಲ್ಲಿ “ಪದವಿ ಪೂರ್ವ’ ಕೂಡಾ ಒಂದು. ಹದಿಹರೆಯದವರ ತುಡಿತಗಳ ಸುತ್ತ ಈ ಸಿನಿಮಾ ಮಾಡಲಾಗಿದ್ದು, ಚಿತ್ರ ಡಿ.30ರಂದು ಬಿಡುಗಡೆಯಾಗುತ್ತಿದೆ.
ಈಗ ಚಿತ್ರತಂಡ ಒಂದೊಂದೇ ಹಾಡುಗಳನ್ನು ಬಿಡುಗಡೆ ಮಾಡುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಚಿತ್ರದ “ಯಾಕೆ ಸಿಕ್ಕೆ’ ಹಾಡನ್ನು ನಟ ಸುದೀಪ್ ಅವರು ಬಿಡುಗಡೆ ಮಾಡಿದ್ದರು. ಈಗ ಚಿತ್ರದ “ಬಾರೋ ಪಿಚ್ಚರ್ಗೆ…’ ಎಂಬ ಹಾಡನ್ನು ನಟ ಧ್ರುವ ಸರ್ಜಾ ಬಿಡುಗಡೆ ಮಾಡಿದ್ದಾರೆ.
ಹಾಡು ಬಿಡುಗಡೆ ಬಳಿಕ ಮಾತನಾಡಿದ ಧ್ರುವ ಸರ್ಜಾ, “ಹಾಡು ತುಂಬಾ ಚೆನ್ನಾಗಿದೆ. ಹೊಸಬರ ಸಿನಿಮಾವಾದರೂ ಭರವಸೆ ಮೂಡಿಸಿದ್ದು, ತಂಡಕ್ಕೆ ಒಳ್ಳೆಯದಾಗಲಿ’ ಎಂದರು.
ಬಿಡುಗಡೆಗೆ ಅಣಿಯಾಗಿರುವ “ಪದವಿ ಪೂರ್ವ’ ಚಿತ್ರದಲ್ಲಿ ನಾಯಕರಾಗಿ ನಟಿಸುವ ಮೂಲಕ ಪೃಥ್ವಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಮೊದಲ ಚಿತ್ರ ಬಿಡುಗಡೆಗೂ ಮುನ್ನವೇ ಭವಿಷ್ಯದ ಭರವಸೆ ಮೂಡಿಸಿರುವ ಪೃಥ್ವಿಗೆ ಈಗ ಕನ್ನಡ ಚಿತ್ರರಂಗದಿಂದ ಸಾಕಷ್ಟು ಅವಕಾಶಗಳು ಹುಡುಕಿ ಬರುತ್ತಿವೆ. ಯೋಗರಾಜ್ ಸಿನಿಮಾಸ್ ಹಾಗೂ ರವಿ ಶಾಮನೂರ್ ಫಿಲಂಸ್ ಜಂಟಿಯಾಗಿ “ಪದವಿ ಪೂರ್ವ’ ಚಿತ್ರವನ್ನು ನಿರ್ಮಿಸುತ್ತಿದೆ. ನಿರ್ದೇಶಕ ಹರಿಪ್ರಸಾದ್ ಜಯಣ್ಣ ಪೃಥ್ವಿ ಬಗ್ಗೆ ಖುಷಿಯಾಗಿದ್ದಾರೆ.
“ಪೃಥ್ವಿ ಪ್ಯೂಚರ್ ಫೇಸ್ ಆಫ್ ದಿ ಇಂಡಸ್ಟ್ರಿ ಎನ್ನಬಹುದು. ಆತ ಚಿತ್ರರಂಗದಲ್ಲಿ ತುಂಬಾ ವರ್ಷ ನೆಲೆ ನಿಲ್ಲುತ್ತಾನೆ. ಆತನ ಯೋಚನೆಗಳು ಮೆಚ್ಯುರ್ಡ್ ಆಗಿವೆ. ಜೊತೆಗೆ ಆತನಿಗೆ ನಾಯಕತ್ವ ಗುಣವೂ ಇದೆ. ಈ ಪಾತ್ರ ಕೂಡಾ ಅವನಿಗೆ ಚೆನ್ನಾಗಿ ಹೊಂದುತ್ತದೆ’ಎನ್ನುವುದು ನಿರ್ದೇಶಕ ಹರಿಪ್ರಸಾದ್ ಜಯಣ್ಣ ಮಾತು. ಚಿತ್ರಕ್ಕೆ ಸೆನ್ಸಾರ್ ಆಗಿದ್ದು, ಯು/ಎ ಪ್ರಮಾಣ ಪತ್ರ ಸಿಕ್ಕಿದೆ.