ಬೆಂಗಳೂರು: ಪಾದರಾಯನಪುರದಲ್ಲಿ ಸಾಮುದಾಯಿಕ ಕೋವಿಡ್ 19 ಸೋಂಕು ಪರೀಕ್ಷೆ ಮುಂದುವರಿದಿದ್ದು, ಗುರುವಾರ 115ಜನರಿಗೆ ಸೋಂಕು ಪರೀಕ್ಷೆ ಮಾಡಲಾಗಿದೆ. ಮಂಗಳವಾರ 86 ಜನರಿಗೆ ಹಾಗೂ ಬುಧವಾರ 39 ಮಂದಿಗೆ ಪರೀಕ್ಷೆ ಮಾಡಲಾಗಿದ್ದು, ಇವರ ವರದಿ ಇನ್ನಷ್ಟೇ ಅಧಿಕೃತವಾಗಿ ಬರಬೇಕಿದೆ. ಈ ವರೆಗೆ ಯಾರಲ್ಲೂ ಸೋಂಕು ದೃಢಪಟ್ಟಿಲ್ಲ. ಮೇ 14ರಿಂದ ಈ ಭಾಗದಲ್ಲಿ ಸಾಮುದಾಯಿಕ ಸೋಂಕು ಪರೀಕ್ಷೆ ಪ್ರಾರಂಭಿಸಲಾಗಿತ್ತು. ಇಲ್ಲಿಯವರೆಗೆ ಒಟ್ಟು 430ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪಶ್ಚಿಮ ವಲಯದ ಆರೋಗ್ಯಾಧಿಕಾರಿ ಡಾ. ಮನೋರಂಜನ್ ಹೆಗ್ಡೆ ಮಾಹಿತಿ ನೀಡಿದ್ದಾರೆ.
ಜಗಜೀವನರಾಂ ವಾರ್ಡ್: ಜಗಜೀವನರಾಂ ವಾರ್ಡ್‌ನಲ್ಲಿ ಕಳೆದ 21ದಿನಗಳಿಂದ ಯಾವುದೇ ಸೋಂಕು ಪ್ರಕರಣಗಳು ದಾಖಲಾಗದ ಹಿನ್ನೆಲೆಯಲ್ಲಿ ಕಂಟೈನ್ಮೆಂಟ್ ಮುಕ್ತ ಮಾಡಲಾಗಿತ್ತು. ಈಗ ಜಗಜೀವನರಾಂ ವಾರ್ಡ್‌ನಲ್ಲಿನ ವ್ಯಕ್ತಿಯಲ್ಲಿ (ರೋಗಿ ಸಂಖ್ಯೆ -1,397) ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಈ ವಾರ್ಡ್ ಮತ್ತೆ ಕಂಟೈನ್ಮೆಂಟ್ ಝೊàನ್ ವ್ಯಾಪ್ತಿಗೆ ಸೇರ್ಪಡೆಯಾಗಿದೆ. ಹೀಗಾಗಿ, ಕಂಟೈನ್ಮೆಂಟ್ ವಾರ್ಡ್‌ಗಳಲ್ಲಿ ತೆಗೆದುಕೊಳ್ಳುವ ಮುಂಜಾಗ್ರತಾ ಕ್ರಮ ಹಾಗೂ ಆರೋಗ್ಯ ತಪಾಸಣೆ ಪ್ರಾರಂಭಿಸಲಾಗಿದೆ ಎಂದು ಬಿಬಿಎಂಪಿಯ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಊರು ಸೇರಲು ವಲಸಿಗರ ತವಕ: ನಗರ ಜಿಪಂ ರಾಜಾನುಕುಂಟೆ ಪ್ರದೇಶದಲ್ಲಿ ಉತ್ತರ ಭಾರತದ ಸುಮಾರು 200ಕ್ಕೂ ಅಧಿಕ ಮಂದಿ ವಲಸಿಗರು ತವರಿಗೆ ಮರಳಲು ರೈಲಿಗಾಗಿ ಕಾಯುತ್ತಿದ್ದಾರೆ. ಇತ್ತೀಚೆಗೆ ಇಲ್ಲಿನ ಕೆಲವು ಮಂದಿ ಬಿಹಾರದ ವಲಸೆ ಕಾರ್ಮಿಕರು ರೈಲಿನಲ್ಲಿ ತವರಿಗೆ ತೆರಳಿದ್ದರು. ಈಗ ಪಶ್ಚಿಮ ಬಂಗಾಳ, ಜಾರ್ಖಂಡ್, ಛತ್ತೀಸಗಡ್ ಸೇರಿದಂತೆ ಉತ್ತರ ಭಾರತದ ಸುಮಾರು ಎರಡು ನೂರಕ್ಕೂ ಅಧಿಕ ವಲಸಿಗರಿದ್ದರು ತಮ್ಮ ಊರುಗಳಿಗೆ ತೆರಳಲು ಸಿದರಾಗಿದ್ದು,
ಸರ್ಕಾರ ಈಗಾಗಲೇ ಉತ್ತರ ಭಾರತದ ಹಲವು ಪ್ರದೇಶಗಳಿಗೆ ರೈಲು ಓಡಿಸುವ ಬಗ್ಗೆ ಭರವಸೆ ನೀಡಿದೆ ಗ್ರಾಪಂ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ವಲಸಿಗರಿಗೆ ಸರ್ಕಾರಿ ಶಾಲೆಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಪ್ರತಿ ದಿನ ಮಧ್ಯಾಹ್ನ ಮತ್ತು ಸಂಜೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ರೋಟರಿ ಸಂಸ್ಥೆಯ ಜತೆಗೆ ಇನ್ನಿತರ ಸಂಘ-ಸಂಸ್ಥೆಗಳು ಆಹಾರ ವ್ಯವಸ್ಥೆ ಮಾಡಿವೆ ಎಂದು ಪಿಡಿಒ ರಾಜೇಶ್ ತಿಳಿಸಿದರು.
ಜಾಗೃತಿ ಹೊಣೆ ಖಾಸಗಿ ವೈದ್ಯರ ಮೇಲಿದೆ: ಕೋವಿಡ್ 19 ಸಂದರ್ಭದಲ್ಲಿ ಖಾಸಗಿ ವೈದ್ಯರು ತಮ್ಮ ಕ್ಲಿನಿಕ್‌ಗಳನ್ನು ತೆರೆದು ಸಾರ್ವಜನಿಕ ಸೇವೆಗೆ ಮುಂದಾಗಬೇಕೆಂದು ಕಂದಾಯ ಸಚಿವ ಆರ್. ಅಶೋಕ ವೈದ್ಯರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸೋಂಕು ಇರುವ ಹಿನ್ನೆಲೆಯಲ್ಲಿ ಕೆಲವು ವೈದ್ಯರು ಕೂಡಾ ಆತಂಕಗೊಂಡಿದ್ದಾರೆ. ಆದರೆ, ಇಂತಹ ಸಂದರ್ಭದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿ ತಿಳಿವಳಿಕೆ ಹೇಳಬೇಕಾದ ಹೊಣೆ ಖಾಸಗಿ ವೈದ್ಯರ ಮೇಲಿದೆ.
ಹೀಗಾಗಿ ತಮ್ಮ ಕ್ಲಿನಿಕ್‌ಗಳನ್ನು ತೆರೆದು ರೋಗಿಗಳ ಆರೈಕೆಗೆ ಮುಂದಾಗಬೇಕು ಎಂದು ಸೂಚನೆ ನೀಡಿದರು. ಉದ್ಯಾನವನಗಳಲ್ಲಿ ವಾಕಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಉದ್ಯಾನವನಗಳನ್ನು ಒಂದು ಗಂಟೆ ಹೆಚ್ಚಿನ ಅವಧಿಗೆ ತೆರೆಯುವಂತೆ ಸೂಚಿಸಲಾಗಿದೆ. ಇನ್ನು ಮುಂದೆ ಬೆಳಗ್ಗೆ 7ರಿಂದ 10 ಗಂಟೆವರೆಗೆ, ಸಂಜೆ 4ರಿಂದ 7 ಗಂಟೆವರೆಗೂ ಉದ್ಯಾನವನಗಳು ತೆರೆಯುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಈ ಆದೇಶ ಇಂದಿನಿಂದಲೇ ಜಾರಿಗೆ ಬರಲಿದೆ ಎಂದ ಅವರು, ಪಾರ್ಕ್ ಗಳಲ್ಲಿ ಕೇವಲ ವಾಕಿಂಗ್ ಮಾಡಬೇಕು. ಜಾಸ್ತಿ ಹೊತ್ತು ಕೂರುವಂತಿಲ್ಲ ಹಾಗೂ ಮುಕ್ತಪ್ರದೇಶಗಳಲ್ಲಿರುವ ಜಿಮ್ ಉಪಕರಣಗಳನ್ನು ಬಳಸಬಾರದು ಎಂದು ಸೂಚನೆ ನೀಡಿದರು.