ಬೆಳ್ತಂಗಡಿ: ಕೋವಿಡ್ 19 ವೈರಸ್ ತಡೆ ಗಟ್ಟುವಲ್ಲಿ ಕೇಂದ್ರ ಸರಕಾರದ ಸೂಚನೆಯಂತೆ ರಾಜ್ಯ ಸರಕಾರ ಸಂಪೂರ್ಣ ಮುನ್ನೆಚ್ಚರಿಕೆ ವಹಿಸಿದೆ. ಈ ನಡುವೆ ಪಾದರಾಯನಪುರ ಪ್ರಕರಣ ಮರುಕಳಿಸದಂತೆ ಕಾನೂನನ್ನು ಬಿಗಿಗೊಳಿಸಲಾಗಿದೆ. ಉಲ್ಲಂಘಿಸಿದವರಿಗೆ ಶಿಕ್ಷೆ ವಿಧಿಸಲು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ಉಜಿರೆಯಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದರು.
ಶಾಸಕ ಜಮೀರ್ ಅಹಮ್ಮದ್ ಅವರನ್ನು ಕ್ವಾರೆಂಟೈನ್‌ಗೆ ಒಳಪಡಿಸಲಾಗುವುದೇ ಎಂಬ ಪ್ರಶ್ನೆಗೆ ಇದನ್ನು ಈಗಾಗಲೇ ಆರೋಗ್ಯ ಸಚಿವರು ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ತಬ್ಲಿಘಿ ಜಮಾಅತ್‌ನಲ್ಲಿ ಭಾಗವಹಿಸಿದವರನ್ನು ಸಂಪೂರ್ಣ ವಾಗಿ ಕ್ವಾರೆಂಟೈನ್‌ಗೆ ಒಳಪಡಿಸಲಾಗಿದೆ ಎಂದರು.
ಎ. 27ರ ಬಳಿಕ ಸಡಿಲಿಕೆ ನಿರ್ಧಾರ
ಲಾಕ್‌ಡೌನ್ ಸಡಿಲಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಕೇಂದ್ರದ ಮಾರ್ಗಸೂಚಿ ಅನುಸರಿಸುತ್ತಿದೆ. ಮೇ 3ರ ವರೆಗೆ ಈಗಾಗಲೇ ಲಾಕ್‌ಡೌನ್ ಇದ್ದು, ಮತ್ತೆ ಎ. 27ರಂದು ಪ್ರಧಾನಿಯವರು ರಾಜ್ಯದ ಮುಖ್ಯಮಂತ್ರಿ ಹಾಗೂ ಸಚಿವರೊಂದಿಗೆ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಚರ್ಚಿಸಲಿದ್ದಾರೆ. ಬಳಿಕ ಸರಕಾರ ಕೆಲವೊಂದು ತೀರ್ಮಾನಗಳನ್ನು ಕೈಗೊಳ್ಳಲಿದೆ ಎಂದರು.