Advertisement

ಪಾದರಾಯನಪುರ, ಬಾಪೂಜಿನಗರ ಸೀಲ್‌ಡೌನ್‌

12:15 PM Apr 11, 2020 | Suhan S |

ಬೆಂಗಳೂರು: ಕೋವಿಡ್ 19 ವ್ಯಾಪಿಸುವುದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ನಿರ್ದಿಷ್ಟ ಪ್ರದೇಶವನ್ನು ಸೀಲ್‌ಡೌನ್‌ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾದರಾಯನಪುರ ಹಾಗೂ ಬಾಪೂಜಿನಗರ ವಾರ್ಡ್‌ಗಳನ್ನು ಶುಕ್ರವಾರ ಸೀಲ್‌ಡೌನ್‌ ಮಾಡಲಾಗಿದೆ.

Advertisement

ಈ ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಮಾತನಾಡಿ, ಈ ವಾರ್ಡ್‌ಗಳಲ್ಲಿ ಒಟ್ಟು ಏಳು ಹೊಸ ಕೋವಿಡ್ 19  ಸೋಂಕು ಪ್ರಕರಣಗಳು ಪತ್ತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ “ಸೀಲ್‌ಡೌನ್‌’ನಂತಹ ಕಠಿಣ ನಿರ್ಧಾರಕ್ಕೆ ಸರ್ಕಾರ ಮುಂದಾಗಿದೆ. ಸೋಂಕು ದೃಢಪಟ್ಟವರಲ್ಲಿ ಐವರು ದೆಹಲಿಯ ನಿಜಾಮುದ್ದೀನ್‌ನ ತಬ್ಲೀಘಿ  ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಇಬ್ಬರಿಗೂ ಕೊರೊನಾ ಸೋಂಕು ತಗುಲಿದೆ. ಹೀಗಾಗಿ, ಪರಿಸ್ಥಿತಿಯ ಗಂಭೀರತೆ ಅರಿತುಕೊಂಡು ಎರಡು ವಾರ್ಡ್‌ಗಳನ್ನು ಸೀಲ್‌ ಡೌನ್‌ ಮಾಡಲಾಗಿದೆ ಎಂದರು.

ಸದ್ಯ ಸೀಲ್‌ಡೌನ್‌ ಮಾಡಿರುವ ವಾರ್ಡ್‌ಗಳಲ್ಲಿನ ರಸ್ತೆಗಳು ಕಿರಿದಾಗಿದ್ದು, ಜನ ಸಂಖ್ಯೆಯೂ ಹೆಚ್ಚಾಗಿದೆ. ಅಲ್ಲದೆ, ಇಲ್ಲಿನ ಮನೆಗಳ ಮಧ್ಯೆ ಅಂತರ ಅತ್ಯಂತ ಕಡಿಮೆ ಇದೆ. ಈ ಎಲ್ಲ ಕಾರಣಗಳಿಂದ ಸೋಂಕು ಸಮುದಾಯಕ್ಕೆ ಹಬ್ಬದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಸೀಲ್‌ಡೌನ್‌ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸಂಪೂರ್ಣ ವಾರ್ಡ್‌ ಆರೋಗ್ಯ ಪರೀಕ್ಷೆ: ಪಾದರಾಯನಪುರ ಹಾಗೂ ಬಾಪೂಜಿನಗರಗಳಲ್ಲಿ ಮೊದಲ ಹಂತದಲ್ಲಿ ಪ್ರಾಥಮಿಕವಾಗಿ ವಾರ್ಡ್‌ಗಳ ಪ್ರತಿಯೊಂದು ಮನೆಗೆ ಭೇಟಿ ನೀಡಿ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಸಲಾಗುವುದು. ಆರೋಗ್ಯ ತಪಾಸಣೆ ಮತ್ತು ಸಮೀಕ್ಷೆಗೆ 60 ತಂಡಗಳನ್ನು ನಿಯೋಜಿಸಲಾಗಿದ್ದು, ವೈದ್ಯಕೀಯ ಸಿಬ್ಬಂದಿ, ಸ್ಥಳೀಯ ಮುಖಂಡರು ಹಾಗೂ ಪೊಲೀಸ್‌ ಸಿಬ್ಬಂದಿ ಇರಲಿದ್ದಾರೆ. ಕೋವಿಡ್ 19  ಸೋಂಕಿನ ಲಕ್ಷಣ ಕಂಡು ಬಂದವರನ್ನು ಹೆಚ್ಚಿನ ಚಿಕಿತ್ಸೆ ಆಸ್ಪತ್ರೆಗೆ ದಾಖಲಿಸಲಾಗುವುದು ಎರಡನೇ ಹಂತದಲ್ಲಿ ರ್ಯಾಪಿಡ್‌ ಪದ್ಧತಿಯಲ್ಲಿ ಸೋಂಕಿನ ಪರೀಕ್ಷೆ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಬಾಪೂಜಿನಗರ ವಾರ್ಡ್‌-134 ಹಾಗೂ ಪಾದರಾಯನಪುರ ವಾರ್ಡ್‌- 135 ಮಾತ್ರ ಸೀಲ್‌ ಡೌನ್‌ ಮಾಡಲಾಗಿದೆ.  ಸದ್ಯಕ್ಕೆ ಬೇರೆ ಯಾವುದೇ ವಾರ್ಡ್‌ ಸೀಲ್‌ಡೌನ್‌ ಮಾಡುವ ತೀರ್ಮಾನ ಮಾಡಿಲ್ಲ. ನಗರದ ಇತರೆ ಪ್ರದೇಶ ಸಾರ್ವಜನಿಕರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ.

ಪೌರ ಕಾರ್ಮಿಕರಿಗೂ ನಿರ್ಬಂಧ :  ಪಾದರಾಯನಪುರ ಕಾಲನಿಯಲ್ಲಿ ಹೆಚ್ಚು ಪೌರ ಕಾರ್ಮಿಕರ ಕುಟುಂಬಗಳು ನೆಲೆಸಿವೆ. ಹಾಗಾಗಿ ಸೀಲ್‌ಡೌನ್‌ ವೇಳೆ ಇಲ್ಲಿನ ಪೌರ ಕಾರ್ಮಿಕರು ಕೂಡ ಮನೆಯಿಂದ ಹೊರಬರುವಂತಿಲ್ಲ. ಈ ವಾರ್ಡ್‌ ಗಳಲ್ಲಿ ನೆಲೆಸಿರುವ ಪೌರಕಾರ್ಮಿಕರು ಎಷ್ಟಿದ್ದಾರೆ ಎಂಬುದನ್ನು ಗಮನಿಸಿ, ಅವರ ಬದಲು ಬೇರೆಯವರನ್ನು ನಿಯೋಜಿಸಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಿ. ರಂದೀಪ್‌ ತಿಳಿಸಿದ್ದಾರೆ.

Advertisement

14ದಿನ ನಿತ್ಯ ವ್ಯವಹಾರಕ್ಕೆ ಕತ್ತರಿ :  ಸೀಲ್‌ಡೌನ್‌ ಆಗಿರುವ ಪ್ರದೇಶದಲ್ಲಿ ಸಂಪೂರ್ಣವಾಗಿ ಎಲ್ಲ ಅಂಗಡಿಗಳನ್ನು ಮುಂದಿನ 14 ದಿನ ಸಂಪೂರ್ಣ ಬಂದ್‌ ಮಾಡಲು ನಿರ್ಧರಿಸಲಾಗಿದೆ. ತಳ್ಳುವ ಗಾಡಿ ಮತ್ತು ಆಟೋ ಮೂಲಕ ಅಗತ್ಯ ದಿನಸಿ, ಹಣ್ಣು, ತರಕಾರಿ ಮಾರಾಟಕ್ಕೆ ಅವಕಾಶವಿರಲಿದೆ. ಆಯಾ ವಾರ್ಡ್‌ನ ಎಲ್ಲರೂ ಮನೆ ಸಮೀಪವೇ(ಬಾಗಿಲಿನಲ್ಲಿ) ವಸ್ತುಗಳನ್ನು ಖರೀದಿ ಮಾಡಿಕೊಳ್ಳಬೇಕು. ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಬಿಬಿಎಂಪಿ ಮಾಡಲಿದೆ. ಆದರೆ, ಉಚಿತವಾಗಿ ನೀಡುವುದಿಲ್ಲ ಎಂದು ಬಿಬಿಎಂಪಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮೊದಲ ಹಂತದಲ್ಲಿ 14 ದಿನ ಈ ಎರಡು ವಾರ್ಡ್‌ಗಳನ್ನು ಸೀಲ್‌ಡೌನ್‌ ಮಾಡಲಾಗುವುದು. ಸೀಲ್‌ಡೌನ್‌ ಮಾಡಲಾದ ವಾರ್ಡ್‌ಗಳಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಹೊರತುಪಡಿಸಿ ಮನೆಗಳಿಂದ ಯಾವುದೇ ಕಾರಣಕ್ಕೂ ಹೊರಬರುವಂತಿಲ್ಲ. ಜನರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಮನೆಗೆ ಬಾಗಿಲಿಗೆ ನೀಡುವ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ.  ಬಿ.ಎಚ್‌.ಅನಿಲ್‌ಕುಮಾರ್‌, ಬಿಬಿಎಂಪಿ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next