Advertisement
ರೋಟಿ, ಕಪಡಾ ಔರ್ ಮಕಾನ್… ಮನುಷ್ಯನ ಮೂಲಭೂತ ಅಗತ್ಯಗಳು. ಆದರೆ, ಹೆಣ್ಣುಮಕ್ಕಳ ವಿಷಯದಲ್ಲಿ ಇನ್ನೂ ಒಂದನ್ನು ಸೇರಿಸಲೇಬೇಕು. ಅದು ಸ್ಯಾನಿಟರಿ ಪ್ಯಾಡ್. ಮೊದಲ ಮೂರು ಸಂಗತಿಗಳಷ್ಟೇ ಇದೂ ಮುಖ್ಯ. ಆದರೆ, ನಮ್ಮಲ್ಲಿ ಕೋಟ್ಯಂತರ ಮಹಿಳೆಯರಿಗೆ ಪ್ಯಾಡ್‌ನ ಅಗತ್ಯದ, ಮಹತ್ವದ ಅರಿವಿಲ್ಲ. ಮುಟ್ಟಿನ ದಿನಗಳಲ್ಲಿ ಬಟ್ಟೆ ಬಳಸುವುದರಿಂದ ಆಗುವ ಅಪಾಯದ ಅರಿವೂ ಇಲ್ಲ. ಇವೆಲ್ಲದರ ಅರಿವಿದ್ದವರು ಈ ಬಗ್ಗೆ ಮುಕ್ತವಾಗಿ ಮಾತನಾಡುವುದೂ ಇಲ್ಲ. ಆದರೆ, ಇಲ್ಲಿರುವ ಈ ಇಬ್ಬರು ಮಹಿಳೆಯರು ಮುಟ್ಟಿನ ಮುಜುಗರವನ್ನು ಮೆಟ್ಟಿ ನಿಂತು, ಸಮಾಜದ ಬಡ ಮಹಿಳೆಯರಿಗೆ ಪ್ಯಾಡ್‌ನ ಮಹತ್ವದ ಬಗ್ಗೆ ಅರಿವು ಮೂಡಿಸಿ, ಸ್ಯಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿ ಹಂಚುವ ಕಾಯಕದಲ್ಲಿದ್ದಾರೆ.
Related Articles
Advertisement
ಸ್ಲಂನಲ್ಲಿ ಸ್ವಾಸ್ಥ್ಯ: ತಯಾರಿಸಿದ ಪ್ಯಾಡ್‌ಗಳನ್ನು ಹಂಚುವ ಮುನ್ನ ಇಡೀ ತಾಲೂಕಿನಲ್ಲಿ ಸರ್ವೇ ಕೈಗೊಳ್ಳಲಾಯ್ತು. ಅದರಿಂದ ಗೊತ್ತಾಗಿದ್ದೇನೆಂದರೆ, ಮಹಿಳೆಯರು ಪರ್ಸನಲ್ ಹೈಜಿನ್ ಬಗ್ಗೆ ಗಮನ ಹರಿಸುತ್ತಿಲ್ಲ ಹಾಗೂ ಪ್ಯಾಡ್ ಧರಿಸಲು ಎಷ್ಟೋ ಜನರ ಬಳಿ ಒಳ ಉಡುಪುಗಳೇ ಇಲ್ಲವೆಂದು. ಆಗ, ಸ್ವತ್ಛತೆಯ ಬಗ್ಗೆ ಅರಿವು ಮೂಡಿಸಲು ಕಾಲೇಜು ಹುಡುಗ- ಹುಡುಗಿಯರನ್ನು ಸೇರಿಸಿ ಬೀದಿ ನಾಟಕ ಮಾಡಿಸಿದರು.
ವಿದ್ಯಾರ್ಥಿನಿಯರು ಕಾಲೊನಿಯ ಮನೆ ಮನೆಗೆ ಹೋಗಿ ಪ್ಯಾಡ್‌ನ ಅಗತ್ಯ ಹಾಗೂ ಅದನ್ನು ಧರಿಸುವ ಬಗ್ಗೆ, ಬಳಸಿದ ನಂತರ ಹೇಗೆ ಎಸೆಯಬೇಕು ಎಂಬುದರ ಬಗ್ಗೆ ಮಾಹಿತಿ ಕೊಟ್ಟರು. ಮೆಡಿಕಲ್ ಕ್ಯಾಂಪ್‌ಗ್ಳನ್ನು ನಡೆಸಿ, ಕೊಳಕು ಬಟ್ಟೆ ಧರಿಸಿದರೆ ಏನೇನು ತೊಂದರೆಯಾಗುತ್ತದೆ ಎಂದೂ ವಿವರಿಸಿದರು. ನಂತರ ಪ್ಯಾಡ್‌ಗಳ ಜೊತೆಗೆ ಮೂರು ತಿಂಗಳಿಗೊಮ್ಮೆ 3 ಒಳ ಉಡುಪುಗಳನ್ನೂ ವಿತರಿಸಲು ನಿರ್ಧರಿಸಿದರು. ಮೊದಲು ಹುಡುಗಿಯರನ್ನು ಮನೆಮನೆಗೆ ಕಳುಹಿಸಿ, ಮಹಿಳೆಯರ ಅಳತೆ ತೆಗೆದುಕೊಂಡು, ಬೆಂಗಳೂರು ಹಾಗೂ ಕೊಯಮತ್ತೂರಿನಿಂದ ಒಳ ಉಡುಪುಗಳನ್ನು ತರಿಸಿ ಹಂಚಿದರು.
ಪ್ರತಿ ತಿಂಗಳೂ 10 ಸ್ಯಾನಿಟರಿ ಪ್ಯಾಡ್ ಹಾಗೂ 3 ಒಳ ಉಡುಪುಗಳ ಕಿಟ್ ಹಂಚುವ ಈ ಕಾರ್ಯ ಕಳೆದ ನಾಲ್ಕು ವರ್ಷಗಳಿಂದ ನಡೆದಿದೆ. ಆ ಕಿಟ್‌ಗೆ “ಸ್ವಾಸ್ಥ್ಯ’ ಎಂಬ ಹೆಸರನ್ನು ನೀಡಿದ್ದಾರೆ. ಒಂದು ಕಿಟ್‌ಗೆ 120 ರೂ. ಖರ್ಚು ಬೀಳುತ್ತದೆ. ಪ್ರಮೀಳಾ ಅವರು ಈಗ ಪ್ಯಾಡ್ ತಯಾರಿಕಾ ತರಬೇತಿ ನೀಡುತ್ತಿದ್ದಾರೆ. ಬೆಂಗಳೂರಿನಲ್ಲಿ ಮಹಿಳೆಯರಿಗೆ ತರಬೇತಿ ನೀಡಿರುವುದಲ್ಲದೆ, ಕೋಲಾರದ ಸ್ಲಂಗಳಲ್ಲಿ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವ ಬೀದಿನಾಟಕ ಕೂಡ ಆಡಿಸಿದ್ದಾರೆ. ಯಾರೇ ಆಸಕ್ತರು ಬಂದರೂ ತಾವು ತರಬೇತಿ ನೀಡುವುದಾಗಿ ಹೇಳುತ್ತಾರೆ.
ಗಂಡಸರಿಲ್ಲದಾಗ ಬನ್ನಿ: ಬೀದಿ ನಾಟಕದ ನಂತರ, ಸ್ಲಂನ ಮಹಿಳೆಯರಲ್ಲಿ, ನಿಮಗೆ ಏನಾದರೂ ಆರೋಗ್ಯ ಸಮಸ್ಯೆಗಳಿದ್ದರೆ ತಿಳಿಸಿ ಎಂದು ಕೇಳಲಾಯಿತು. ಆದರೆ, ಯಾರೂ ಮಾತನಾಡಲಿಲ್ಲ. ಕೆಲವರು ಮಾತ್ರ, “ಮೇಡಂ ಮಧ್ಯಾಹ್ನ ಗಂಡಸರು ಇಲ್ಲದಿರುವ ಟೈಮಲ್ಲಿ ಬನ್ನಿ’ ಅಂದರಂತೆ. ನಂತರ ಅವರಲ್ಲಿ ವಿಚಾರಿಸಿದಾಗ ಹೆಚ್ಚಿನವರಿಗೆ ಬಿಳಿ ಸೆರಗು, ಅಲರ್ಜಿ, ತುರಿಕೆಯಂಥ ಸಮಸ್ಯೆಗಳಿದ್ದವು. ಮುಟ್ಟಿನ ದಿನಗಳಲ್ಲಿ ಅವರು ಹಳೆ ಬಟ್ಟೆಗಳನ್ನು, ಹುಕ್, ಬಟನ್ ಇರುವ ಬಟ್ಟೆಗಳನ್ನು ಬಳಸುತ್ತಿದ್ದರು ಮತ್ತು ಆ ಬಟ್ಟೆಗಳನ್ನು ಕತ್ತಲೆ ಕೋಣೆಯ ಮೂಲೆಯಲ್ಲಿ ಒಣಗಲು ಹಾಕುತ್ತಿದ್ದರು. ಬಿಸಿಲಿಗೆ ಹಾಕಲೂ ಸಂಕೋಚ ಪಡುತ್ತಿದ್ದರು. ಮುಟ್ಟಿನ ದಿನಗಳಲ್ಲಿ ಬಟ್ಟೆಯನ್ನೂ ಬಳಸದವರು ಇದ್ದಾರೆ ಎಂಬುದು ಸರ್ವೇಯಲ್ಲಿ ತಿಳಿದು ಬಂತು.
ಪ್ಯಾಡ್ ತಯಾರಿಕೆ ಹೇಗೆ?: ಹಳೇ ಬಟ್ಟೆಗಳನ್ನು ಬಿಸಿನೀರು ಹಾಗೂ ಸಫ್ì ಹಾಕಿ ಒಗೆಯಲಾಗುತ್ತದೆ. ನಂತರ ಡೆಟಾಲ್ ಹಾಕಿ ಸ್ಟೆರಿಲೈಝ್ ಮಾಡಿ, ಮತ್ತೆ ಒಗೆದು, ಅದಕ್ಕೆ ಇಸ್ತ್ರಿ ಹಾಕಿ, 8*9 ಇಂಚುಗಳಾಗಿ ಕತ್ತರಿಸಿ, ಮೆಡಿಕಲ್ ಕಾಟನ್‌ನಿಂದ ಕವರ್ ಮಾಡಿ, ಹೊರಗಡೆ ಸ್ಟೆರಿಲೈಸ್ ಮಾಡಿದ ಹೊಸ ಕಾಟನ್ ಬಟ್ಟೆಗಳನ್ನಿಟ್ಟು ಹೊಲಿಗೆ ಹಾಕಿ ಪ್ಯಾಡ್ ತಯಾರಿಸಲಾಗುತ್ತದೆ. “ಸ್ವಾಸ್ಥ್ಯ’ ಎಂಬ ಹೆಸರಿನ ಈ ಪ್ಯಾಡ್‌ಗಳು ರಾಸಾಯನಿಕಮುಕ್ತವಾಗಿದ್ದು ಬಳಸಲು ಯೋಗ್ಯವಾಗಿವೆ.
ಬಟ್ಟೆ ಒಗೆಯುವುದರಿಂದ ಹಿಡಿದು, ಹೊಲಿಗೆ ಹಾಕುವವರೆಗಿನ ಎಲ್ಲ ಕೆಲಸವನ್ನೂ ಸ್ವ ಇಚ್ಛೆಯಿಂದ ವಿದ್ಯಾರ್ಥಿಗಳೇ ಮಾಡುತ್ತಿದ್ದಾರೆ. ಹೆತ್ತವರಿಂದಲೂ ಪ್ರೋತ್ಸಾಹ ಸಿಕ್ಕಿದ್ದು, ಅವರಲ್ಲಿ ಹಲವರು ತಮ್ಮ ಬಿಡುವಿನ ವೇಳೆಯಲ್ಲಿ ಬಂದು ಪ್ಯಾಡ್ ತಯಾರಿಕೆಯಲ್ಲಿ ಕೈ ಜೋಡಿಸುತ್ತಿದ್ದಾರೆ. ಆ 21 ಹುಡುಗರೇ ಇಲ್ಲಿನ ಹುಡುಗಿಯರಿಗೆ ಪ್ಯಾಡ್ ತಯಾರಿಕೆಯ ತರಬೇತಿ ನೀಡಿರುವುದು ಎಂಬುದು ಗಮನಾರ್ಹ ವಿಷಯ.
“ಸದ್ಯಕ್ಕೆ 18 ಕಾಲೊನಿಗಳಿಗೆ, ಅನಾಥಾಶ್ರಮಗಳಿಗೆ ಹಳೇ ಬಟ್ಟೆ ಕೊಡುತ್ತಿದ್ದೇವೆ. ಬೇರೆ ಬೇರೆ ಜಿಲ್ಲೆಗಳಿಂದ ಹಳೆಬಟ್ಟೆಗಳು ಬರುತ್ತಿವೆ. ಕೇವಲ ಕಾಟನ್ ಬಟ್ಟೆಗಳನ್ನು ಮಾತ್ರ ಪ್ಯಾಡ್‌ಗೆ ಬಳಸುವುದು. ಧರಿಸಲು ಆಗದಷ್ಟು ಹಳೆಯ ಬಟ್ಟೆಗಳಿಂದ ಹಾಸಿಗೆ ಮಾಡಿ ಕಾಲೊನಿಗಳಿಗೆ ಕೊಡುತ್ತಿದ್ದೇವೆ. ಮುಂದೆ ಮೈಸೂರಿನಿಂದ ವುಡ್ ಪಲ್ಪ್ಗಳನ್ನು ತಂದು ಅದರಿಂದ ಪ್ಯಾಡ್ ತಯಾರಿಸೋ ಯೋಚನೆಯಿದೆ. ಅದಕ್ಕೆ ಜಾಸ್ತಿ ಹೀರಿಕೊಳ್ಳುವ ಸಾಮರ್ಥ್ಯವಿದೆ. ಪ್ರತಿ ಕಿಟ್‌ಗೂ 120 ರೂ. ಖರ್ಚು ಬೀಳುತ್ತದೆ. ಈಗ ತಿಂಗಳಿಗೆ ನೂರಿನ್ನೂರು ಮಹಿಳೆಯರಿಗೆ, ಅನಾಥಾಶ್ರಮಗಳ ಹುಡುಗಿಯರಿಗೆ ಕಿಟ್ ಕೊಡುತ್ತಿದ್ದೇವೆ. ಮುಂದೆ ಇನ್ನಷ್ಟು ಬೆಳೆಯುವ ಆಸೆಯಿದೆ. ಸ್ವಂತ ಹಣ ಹಾಗೂ ವಿದ್ಯಾರ್ಥಿಗಳ ಸಹಾಯದಿಂದ ಇದನ್ನು ನಡೆಸುತ್ತಿರುವುದು. ಬಾಡಿಗೆ ಆಫೀಸಿನಲ್ಲಿ ಪ್ಯಾಡ್ ತಯಾರಿಕೆ ನಡೆಯುತ್ತಿದೆ. ಈಗ ನಾನು ಕಾವೂರಿಗೆ ಡೆಪ್ಯೂಟ್ ಆಗಿರೋದರಿಂದ ಬೇರೊಂದು ಆಫೀಸ್ ಹುಡುಕುತ್ತಿದ್ದೇವೆ. ಮೊದಲು ಜನ ತುಂಬಾ ವಿರೋಧಿಸಿದರು. ನಂತರ ಅವರಿಂದಲೇ ಪ್ರೋತ್ಸಾಹ ಸಿಕ್ಕಿತು. ಬೆಂಗಳೂರಿನಲ್ಲಿರೋ ನನ್ನ ವಿದ್ಯಾರ್ಥಿಗಳೂ ಅಲ್ಲಿಂದ ಬಟ್ಟೆ ಸಂಗ್ರಹಿಸಿ ಕಳಿಸುತ್ತಾರೆ’-ಪ್ರಮೀಳಾ ರಾವ್ *** ಸೂರತ್‌ನ ಪ್ಯಾಡ್‌ವುಮನ್‌ಗೆ ಸುಧಾಮೂರ್ತಿಯೇ ಸ್ಫೂರ್ತಿ!: ಇವರು 62 ವರ್ಷದ ಮೀನಾ ಮೆಹ್ತಾ ಹಾಗೂ ಪತಿ ಅತುಲ್ ಮೆಹ್ತಾ. ಗುಜರಾತ್‌ನ ಸೂರತ್‌ನವರು. ಇವರನ್ನು ಮೆಹ್ತಾ ದಂಪತಿ ಅಂತ ಗುರುತಿಸುವವರಿಗಿಂತ “ಪ್ಯಾಡ್ ಕಪಲ್’ ಎಂದು ಕರೆಯುವವರೇ ಹೆಚ್ಚು. ಯಾಕೆಂದರೆ, ಇವರು ಪ್ರತಿ ತಿಂಗಳೂ 5,000 ಹೆಣ್ಮಕ್ಕಳಿಗೆ ಉಚಿತವಾಗಿ ಪ್ಯಾಡ್ ಹಂಚುತ್ತಿದ್ದಾರೆ. ಕಳೆದ 5 ವರ್ಷಗಳಿಂದ ಈ ಕೆಲಸ ಮಾಡುತ್ತಿರುವ ಮೀನಾ ಮೆಹ್ತಾ, ಈ ಕೆಲಸಕ್ಕಾಗಿಯೇ “ಮಾನುನಿ ಫೌಂಡೇಶನ್’ ಎಂಬ ಸಂಸ್ಥೆಯನ್ನೂ ಸ್ಥಾಪಿಸಿದ್ದಾರೆ. ಸ್ಫೂರ್ತಿಯಾದ ಸುಧಾಮೂರ್ತಿ: ಪ್ಯಾಡ್ ಹಂಚುವ ಮೀನಾ ಅವರಿಗೆ ಮೊದಲ ಸ್ಫೂರ್ತಿ ಇನ್ಫೋಸಿಸ್ ಫೌಂಡೇಶನ್‌ನ ಸುಧಾಮೂರ್ತಿ. 2004ರಲ್ಲಿ ಸುನಾಮಿ ಬಂದಾಗ ಸುಧಾಮೂರ್ತಿ ಅವರು ತಮಿಳುನಾಡಿನ ಸುನಾಮಿ ಸಂತ್ರಸ್ತೆಯರಿಗೆ 6 ಟ್ರಕ್‌ಗಳಲ್ಲಿ ಪ್ಯಾಡ್‌ಗಳನ್ನು ಕಳಿಸಿದ್ದರು. ಸಂತ್ರಸ್ತರಿಗೆ ಊಟ, ಬಟ್ಟೆ, ಕಂಬಳಿ ನೀಡುವುದು ಸಹಜ. ಆದರೆ, ಹೆಣ್ಣುಮಕ್ಕಳ ಪ್ಯಾಡ್‌ನ ಅಗತ್ಯವನ್ನು ಮನಗಂಡ ಸುಧಾ ಮೂರ್ತಿ ಅವರ ಆ ಸೇವೆ ಮೀನಾ ಅವರಲ್ಲಿ ಹೊಸ ಯೋಚನೆಯೊಂದನ್ನು ಹುಟ್ಟು ಹಾಕಿತು. ಮನ ಕಲುಕಿದ ಹುಡುಗಿಯರು…: ಮೀನಾ ಅವರನ್ನು ಈ ಕೆಲಸ ಪ್ರಾರಂಭಿಸಲು ಮತ್ತಷ್ಟು ಪ್ರೇರೇಪಿಸಿದ್ದು ಇಬ್ಬರು ಹುಡುಗಿಯರು. ಒಮ್ಮೆ ಇಬ್ಬರು ಹುಡುಗಿಯರು ಕಸದ ಬುಟ್ಟಿಯಿಂದ ಏನನ್ನೋ ಎತ್ತಿಕೊಳ್ಳುತ್ತಿದ್ದುದನ್ನು ಮೀನಾ ನೋಡಿದರು. ಏನದು ಎಂದು ಕೇಳಿದಾಗ, ಅವರು “ಪ್ಯಾಡ್’ ಎಂದರು. ಬಳಸಿದ ಪ್ಯಾಡ್‌ನಿಂದ ಏನು ಮಾಡುತ್ತೀರಿ ಅಂದಿದ್ದಕ್ಕೆ, ಆ ಹುಡುಗಿಯರು, “ಮೇಡಂ, ನಾವಿದನ್ನು ತೊಳೆದು ಬಳಸುತ್ತೇವೆ. ಪ್ರತಿ ತಿಂಗಳೂ ಹೀಗೆಯೇ ಬಿಸಾಡಿದ ಪ್ಯಾಡ್‌ಗಳನ್ನು ಡಸ್ಟ್‌ಬಿನ್‌ಗಳಿಂದ ಎತ್ತಿ, ತೊಳೆದು, ಬಳಸುತ್ತೇವೆ. ಹೊಸ ಪ್ಯಾಡ್ ಕೊಳ್ಳಲು ಹಣವಿಲ್ಲ’ ಅಂದರಂತೆ. ಅದನ್ನು ಕೇಳಿದ ಮೀನಾ, ಇಂಥ ಬಡ ಹೆಣ್ಣುಮಕ್ಕಳಿಗೆ ಪ್ಯಾಡ್ ಹಂಚುವ, ಸ್ವತ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ನಿರ್ಧಾರ ಮಾಡಿದರು. ಪತ್ನಿಯ ಈ ಸೇವೆಗೆ ಬೆನ್ನೆಲುಬಾಗಿ ನಿಂತವರು ಪತಿ ಅತುಲ್ ಮೆಹ್ತಾ. ಪ್ಯಾಡ್ ಹಂಚಲು 25,000 ರೂ. ಹಣ ನೀಡಿ ಪತ್ನಿಯನ್ನು ಬೆಂಬಲಿಸಿದರು. ಮೀನಾ, ಸೂರತ್‌ನ ಮುನ್ಸಿಪಲ್ ಶಾಲೆಗಳಿಗೆ ತೆರಳಿ 11-14 ವರ್ಷದ ಹೆಣ್ಣುಮಕ್ಕಳಿಗೆ ಪ್ಯಾಡ್ ಹಂಚಲು ಶುರುಮಾಡಿದರು. ಹೀಗೆ ಪ್ಯಾಡ್ ದಾನ ಮಾಡುತ್ತಿದ್ದಾಗ ತಿಳಿದು ಬಂದಿದ್ದೇನೆಂದರೆ, ಎಷ್ಟೋ ಹುಡುಗಿಯರ ಬಳಿ ಪ್ಯಾಡ್ ಧರಿಸಲು ಒಳ ಉಡುಪುಗಳೇ ಇಲ್ಲವೆಂದು. ನಂತರ ಅವರು ಅಗತ್ಯ ವಸ್ತುಗಳ ಕಿಟ್ ಕೊಡಲು ನಿರ್ಧರಿಸಿದರು. ಮ್ಯಾಜಿಕಲ್ ಕಿಟ್…: ಮೀನಾ ಹಂಚುತ್ತಿರುವ “ಮ್ಯಾಜಿಕಲ್ ಕಿಟ್’ನಲ್ಲಿ, 8 ಪ್ಯಾಡ್‌ಗಳಿರುವ ಒಂದು ಸ್ಯಾನಿಟರಿ ನ್ಯಾಪಿRನ್ ಪ್ಯಾಕ್, 1 ಸೋಪ್, ಒಂದು ಜೊತೆ ಒಳ ಉಡುಪು, 4 ಶ್ಯಾಂಪೂ ಇರುತ್ತದೆ. 2012ರಲ್ಲಿ 5 ಶಾಲಾ ಹುಡುಗಿಯರಿಗೆ ಪ್ಯಾಡ್ ಕೊಡುವ ಮೂಲಕ ಶುರುವಾದ ಇವರ ಪ್ಯಾಡ್ ಸೇವೆ, ಇವತ್ತು ಸ್ಲಂ ಮಹಿಳೆಯರು, ತರಕಾರಿ ಮಾರುವ ಹೆಂಗಸರು, ವಾಚ್‌ಮ್ಯಾನ್‌ನ ಹೆಂಡತಿ, ಮನೆ ಕೆಲಸದಾಕೆ ಸೇರಿದಂತೆ 5000 ಬಡ ಹೆಣ್ಣುಮಕ್ಕಳನ್ನು ರಕ್ಷಿಸುತ್ತಿದೆ. ಪ್ರತಿ ಕಿಟ್‌ಗೆ 60 ರೂ.ನಂತೆ, ಮೀನಾ- ಅತುಲ್ ದಂಪತಿ ಪ್ರತಿ ತಿಂಗಳು 3 ಲಕ್ಷ ರೂ.ಗಳನ್ನು ಇದಕ್ಕಾಗಿಯೇ ಮೀಸಲಿಡುತ್ತಾರೆ. ಉದ್ಯೋಗದಲ್ಲಿರುವ ಬಡ ಹೆಣ್ಮಕ್ಕಳಿಂದ ಕಿಟ್‌ಗೆ 5 ರೂ.ನಂತೆ ಸಂಗ್ರಹಿಸಿ, ಆ ಹಣವನ್ನು ಮತ್ತೆ ಪ್ಯಾಡ್ ಹಂಚಲು ಬಳಸಲಾಗುತ್ತಿದೆ. ಶಾಲೆಗಳಿಗೆ ಹೋಗಿ ಪ್ಯಾಡ್ ಹಂಚುವುದಷ್ಟೇ ಅಲ್ಲ, ಈ ದಂಪತಿ ಸ್ವತ್ಛತೆಯ ಬಗ್ಗೆ ಜಾಗೃತಿಯನ್ನೂ ಮೂಡಿಸುತ್ತಾರೆ. ಪ್ಯಾಡ್ ಧರಿಸುವುದು ಹೇಗೆ, ಅದರಿಂದ ಹರಡಬಹುದಾದ ರೋಗಗಳು ಯಾವುವು, ಅದನ್ನು ಬಳಸಿದ ಮೇಲೆ ಎಸೆಯುವುದು ಹೇಗೆ ಎಂದು ವಿವರಿಸಿ ಹೇಳುತ್ತಾರೆ. ಮಾನುನಿ ಫೌಂಡೇಶನ್: 2017ರಲ್ಲಿ ಎಚ್‌ಡಿಎಫ್ಸಿ ವತಿಯಿಂದ ಮೀನಾ ಅವರಿಗೆ 8 ಲಕ್ಷ ರೂ. ಮೊತ್ತದ ಪ್ರಶಸ್ತಿಯೊಂದು ಸಿಕ್ಕಿತು. ಆ ಹಣವನ್ನೂ ಅವರು ಸಮಾಜಸೇವೆಗೇ ಬಳಸಲು ನಿರ್ಧರಿಸಿ “ಮಾನುನಿ ಫೌಂಡೇಶನ್’ಅನ್ನು ಸ್ಥಾಪಿಸಿದರು. ಈ ಸಂಸ್ಥೆಗೆ ದೇಶ-ವಿದೇಶಗಳಿಂದ ದೇಣಿಗೆ ಬರುತ್ತಿದೆ. ಸುಧಾ ಮೂರ್ತಿಯವರೂ ಮೀನಾ ಅವರ ಕೆಲಸವನ್ನು ಗುರುತಿಸಿ, ಇನ್ಫೋಸಿಸ್ ಫೌಂಡೇಶನ್ ವತಿಯಿಂದ 2 ಲಕ್ಷ ರೂ. ಮೌಲ್ಯದ ಪ್ಯಾಡ್ ನೀಡಿದ್ದಾರೆ. “ಪ್ಯಾಡ್‌ಮ್ಯಾನ್’ ಶೋ: ಸೂರತ್‌ನ ಕೊಳೆಗೇರಿಯ 125 ಮಹಿಳೆಯರಿಗಾಗಿ “ಪ್ಯಾಡ್ ಮ್ಯಾನ್’ ಸಿನಿಮಾದ ಸ್ಪೆಶಲ್ ಸ್ಕ್ರೀನಿಂಗ್ ಅನ್ನು ಹಮ್ಮಿಕೊಳ್ಳಲಾಗಿತ್ತು. ಆ ಮೂಲಕ ಮಹಿಳೆಯರಲ್ಲಿ ಸ್ವತ್ಛತೆಯ ಅರಿವು ಮೂಡಿಸುವ ಪ್ರಯತ್ನ ಮೀನಾ ಅವರದ್ದು. “ದೇವರು ನಮಗೆ ಎಲ್ಲವನ್ನೂ ಕೊಟ್ಟಿದ್ದಾನೆ. ಹಾಗಾಗಿ ನಮ್ಮಿಂದ ನಾಲ್ಕು ಮಂದಿಗೆ ಸಹಾಯವಾದರೆ ನಮಗೂ ಸಂತೋಷ. ನಮ್ಮ ದೇಶದಲ್ಲಿ ಅವೆಷ್ಟೋ ಲಕ್ಷ ಮಹಿಳೆಯರಿಗೆ ಪ್ಯಾಡ್ ಖರೀದಿಸಲೂ ಶಕ್ತಿಯಿಲ್ಲ. ಇನ್ನೂ ಎಷ್ಟೋ ಮಂದಿಗೆ ಅದರ ಮಹತ್ವವೇ ಗೊತ್ತಿಲ್ಲ. ಅಂಥ ಮಹಿಳೆಯರಿಗೆ ನೆರವಾಗುವುದು ನಮ್ಮ ಉದ್ದೇಶ. ಒಬ್ಬ ಹೆಣ್ಣಿಗೆ ಜೀವಿತಾವಧಿಯಲ್ಲಿ ಸರಿಸುಮಾರು 16,200 ಪ್ಯಾಡ್‌ಗಳು ಬೇಕು. ಹಾಗಾಗಿ ಉದ್ಯೋಗದಲ್ಲಿರುವ, ಹಣವಿರುವ ಎಲ್ಲ ಹೆಣ್ಣುಮಕ್ಕಳೂ ಕನಿಷ್ಠ ಒಂದೊಂದು ಹುಡುಗಿಯನ್ನು ದತ್ತು ತೆಗೆದುಕೊಂಡು, ಅವರ ಪ್ಯಾಡ್‌ನ ಖರ್ಚನ್ನು ಭರಿಸುವ ಪಣ ತೊಡಬೇಕು’
-ಮೀನಾ ಮೆಹ್ತಾ * ಪ್ರಿಯಾಂಕ