Advertisement
ಈಗ, ಗುಜರಾತ್‌ನಲ್ಲಿ ಸಹಾಯಕ ಜಿಲ್ಲಾಧಿಕಾರಿಯಾಗಿರುವ ಈ ಸಾಧಕ ವರುಣ್ ಬರನ್‌ವಾಲ್. ಇಂಗ್ಲಿಷಿನ ಬ್ಲಾಗ್‌ಗಳಿಗೆ ಆತನೇ ಹೇಳಿಕೊಂಡ ಯಶೋಗಾಥೆಯ ಭಾವಾನುವಾದ ಇಲ್ಲಿದೆ.***
“ಮೂವರು ತಂಗಿಯರು, ಅಪ್ಪ, ಅಮ್ಮ, ಒಬ್ಬ ಅಣ್ಣ ಮತ್ತು ನಾನು… ಹೀಗೆ ಏಳು ಜನರಿದ್ದ ಕುಟುಂಬ ನಮ್ಮದು. ಮಹಾರಾಷ್ಟ್ರದ ಪಾಲ್ಗಾರ್ ಜಿಲ್ಲೆಯ ಬಾಯ್ಸರ್ ಎಂಬ ಊರಿನಲ್ಲಿ ನಾವಿದ್ದೆವು. ಅಪ್ಪ, ಒಂದು ಸೈಕಲ್ ಶಾಪ್ ಇಟ್ಟುಕೊಂಡಿದ್ದರು. ಅವರ ಸಂಪಾದನೆಯಿಂದಲೇ ಬದುಕು ನಡೆಯುತ್ತಿತ್ತು. ಒಂದು ಚಿಕ್ಕ ಊರಿನಲ್ಲಿ ನಡೆಸುತ್ತಿದ್ದ ಸೈಕಲ್‌ಶಾಪ್ ಅಂದಮೇಲೆ ವಿವರಿಸಿ ಹೇಳಬೇಕಿಲ್ಲ ತಾನೆ? ಅಲ್ಲಿ ದೊಡ್ಡ ಮೊತ್ತದ ಸಂಪಾದನೆ ಆಗುತ್ತಿರಲಿಲ್ಲ. ಅವತ್ತಿನ ದುಡಿಮೆ ಅವತ್ತಿನ ಖರ್ಚಿಗೆ ಸರಿ ಹೋಗುತ್ತಿತ್ತು. ಬಡತನದೊಂದಿಗೇ ಬದುಕುವುದನ್ನು ನಾವು ಅಭ್ಯಾಸ ಮಾಡಿಕೊಂಡಿದ್ದೆವು.
Related Articles
Advertisement
ಹೀಗೇ ಹದಿನೈದಿಪ್ಪತ್ತು ದಿನಗಳು ಕಳೆದವು. ನನ್ನ ಬದುಕಿನಲ್ಲಿ ಮೊದಲ ವಿಸ್ಮಯ ನಡೆದದ್ದೇ ಆಗ. ಅದೊಂದು ದಿನ ಸಂಜೆ ಸೈಕಲ್‌ಶಾಪ್‌ನ ಮುಂದೆ ಕಾರೊಂದು ಬಂದು ನಿಂತಿತು. ಯಾರಪ್ಪಾ ಇದು ಅಂದುಕೊಂಡು ನೋಡಿದರೆ ಡಾ. ಕಂಪ್ಲಿ. ಅವರು, ಅಪ್ಪನಿಗೆ ಚಿಕಿತ್ಸೆ ನೀಡಿದ್ದ ಸರ್ಜನ್. ಆಸ್ಪತ್ರೆಗೆ ಹೋಗಿದ್ದಾಗ ಅವರಿಗೆ ನಮ್ಮ ಕುಟುಂಬದವರ ಪರಿಚಯವಾಗಿತ್ತು. ನನ್ನನ್ನು ಕಂಡವರೇ, ಮುಂದೆ ಏನ್ಮಾಡಬೇಕು ಅಂತಿದೀಯ? ಎಂದು ಕೇಳಿದರು. ಅವರಿಗೆ, ನಡೆದಿದ್ದನ್ನೆಲ್ಲ ವಿವರಿಸಿದೆ. ಒಂದು ವರ್ಷಕ್ಕೆ 10000 ರೂಪಾಯಿ ಕೊಡುವ ಶಕ್ತಿ ನಮಗಿಲ್ಲ ಸಾರ್. ನಾನು ಕಾಲೇಜಿಗೆ ಹೋಗಲ್ಲ. ಸೈಕಲ್ ಶಾಪ್‌ನಲ್ಲಿ ದುಡಿದೇ ಬದುಕ್ತೇನೆ ಅಂದೆ. ಡಾ. ಕಂಪ್ಲಿಯವರು ಮಾತಾಡಲಿಲ್ಲ. ಪರ್ಸ್‌ನಿಂದ ದುಡ್ಡು ತೆಗೆದು ಕೈಗಿಟ್ಟು ಹೇಳಿದರು: “ಇಲ್ಲಿ ಹತ್ತು ಸಾವಿರ ರೂಪಾಯಿ ಇದೆ. ನಾಳೆಯೇ ಹೋಗಿ ಕಾಲೇಜಿಗೆ ಸೇರಿಕೋ…’
ಆ ವೈದ್ಯರ ಕರುಣೆ ಮತ್ತು ಪ್ರೀತಿಗೆ ಹೇಗೆ ಕೃತಜ್ಞತೆ ಹೇಳಬೇಕೋ ಗೊತ್ತಾಗಲಿಲ್ಲ. ಮರುದಿನವೇ ಕಾಲೇಜಿಗೆ ಸೇರಿದೆ. ಪ್ರತಿ ತಿಂಗಳೂ 650 ರೂಪಾಯಿಗಳನ್ನು ಶುಲ್ಕವಾಗಿ ಕೊಡಬೇಕೆಂಬ ಇನ್ನೊಂದು ನಿಯಮದ ಬಗ್ಗೆ ಗೊತ್ತಾಗಿದ್ದೇ ಆಗ. ಒಂದು ಸಾವಿರ ರೂಪಾಯಿಯಲ್ಲಿ ಐದು ಜನರ ಕುಟುಂಬ ಇಡೀ ತಿಂಗಳು ಬದುಕುತ್ತಿದ್ದ ಸಂದರ್ಭ ಅದು. ಹೀಗಿರುವಾಗ 650 ರೂಪಾಯಿಗಳನ್ನು ಪ್ರತೀ ತಿಂಗಳು ಕೊಡುವುದಾದರೂ ಹೇಗೆ? “ಸುಸ್ತಾಗುವವರೆಗೂ ದುಡಿಯುತ್ತಲೇ ಓದಬೇಕು. ಯಾವ ಕೆಲಸವಾದರೂ ಸರಿ’ ಎಂದು ನಾನು ನಿರ್ಧರಿಸಿದ್ದೇ ಆಗ. ಮಧ್ಯಾಹ್ನದವರೆಗೆ ಕಾಲೇಜು, ಆನಂತರ ಚಿಕ್ಕ ಮಕ್ಕಳಿಗೆ ಟ್ಯೂಶನ್, ನಂತರ ಒಂದೆರಡು ಅಂಗಡಿಗಳಲ್ಲಿ ಗಂಟೆಗಳ ಲೆಕ್ಕದಲ್ಲಿ ಕೆಲಸ.. ಹೀಗೆಲ್ಲ ದುಡಿದೆ. ನನ್ನ ಬಡತನ ಹಾಗೂ ಕಷ್ಟದ ಬಗ್ಗೆ ತಿಳಿದ ಅಧ್ಯಾಪಕರು ಆಗಾಗ್ಗೆ ತಾವೂ ನೆರವಾದರು. ಹಾಗಾಗಿ, ನೂರೆಂಟು ಕಷ್ಟಗಳ ಮಧ್ಯೆಯೂ ಡಿಸ್ಟಿಂಕ್ಷನ್‌ನಲ್ಲಿ ಪಿಯುಸಿ ಮುಗಿಯಿತು.
ಡಾಕ್ಟರಾಗಬೇಕು ಎಂಬ ಮಹದಾಸೆ ಆಗ ಮತ್ತೂಮ್ಮೆ ಕೈಜಗ್ಗಿದ್ದು ನಿಜ. ಆದರೆ, ಎಂಬಿಬಿಎಸ್‌ಗೆ ವಿಪರೀತ ಖರ್ಚಿದೆ ಎಂದು ಗೊತ್ತಿದ್ದರಿಂದ ಎಂಜಿನಿಯರಿಂಗ್ ಸೇರಿಕೊಂಡೆ. ಡಿಸ್ಟಿಂಕ್ಷನ್‌ನ ಕಾರಣದಿಂದ ಸ್ಕಾಲರ್‌ಶಿಪ್ ಸಿಕ್ಕಿತು ನಿಜ.”ಆದರೆ ದುಡ್ಡು ಸ್ಯಾಂಕ್ಷನ್ ಆಗುವುದು ವರ್ಷದ ಕೊನೆಗೆ. ಈಗ ಎಲ್ಲಾದ್ರೂ ಸಾಲ ಮಾಡಿ ದುಡ್ಡು ಕಟ್ಟಿಬಿಡಿ. ಸ್ಕಾಲರ್‌ಶಿಪ್ ದುಡ್ಡು ಬಂದಾಗ ಅದನ್ನೆಲ್ಲಾ ನಿಮಗೇ ಕೊಡ್ತೀವಿ’ ಎಂದು ಅಕೌಂಟ್ಸ್ ಸೆಕ್ಷನ್ನಲ್ಲಿ ಹೇಳಿದರು. ಎಂಜಿನಿಯರಿಂಗ್ ಶಿಕ್ಷಣಕ್ಕೆ ದುಡ್ಡು ಹೊಂದಿಸುವುದು ಅಂದರೆ ತಮಾಷೆಯೆ? ಮುಂದೇನು ಗತಿ? ದೇವರೇ, ಯಾಕಪ್ಪಾ ನನಗೆ ಇಷ್ಟೆಲ್ಲಾ ಕಷ್ಟ ಕೊಡ್ತೀಯ? ಎಂದು ನನ್ನಷ್ಟಕ್ಕೆ ನಾನೇ ಹೇಳಿಕೊಂಡೆ. ನಂಬಿದ್ರೆ ನಂಬಿ, ಬಿಟ್ರೆ ಬಿಡಿ; ಹೀಗೆ ಹೇಳಿದ ಕೆಲವೇ ದಿನಗಳಲ್ಲಿ, ಮತ್ತೂಂದು ಮ್ಯಾಜಿಕ್ ನಡೆದು ಹೋಯಿತು.
ನಮ್ಮ ಕಾಲೇಜಲ್ಲಿ ಎಂಜಿನಿಯರಿಂಗ್ ಓದಲು ಅಫಘನಿಸ್ಥಾನದ ಆರು ಮಂದಿ ಬಂದಿದ್ದರು. ಅವರೆಲ್ಲಾ ಒಟ್ಟಿಗೇ ಬಂದು ಇಲ್ಲಿನ ವೇಗದ ಇಂಗ್ಲಿಷ್ ಮತ್ತು ಪಠ್ಯಕ್ರಮ ನಮಗೆ ತಕ್ಷಣಕ್ಕೆ ಅರ್ಥವಾಗೋದಿಲ್ಲ. ನಮಗೆ ಅರ್ಥವಾಗುವಂತೆ ನಿಧಾನವಾಗಿ ಹೇಳಿಕೊಡು. ನಿನಗೆ ಟ್ಯೂಶನ್ ಫೀ ಕೊಡುತ್ತೇವೆ’ ಅಂದರು. ಅವರಿಗೆ ಟ್ಯೂಶನ್ ಮಾಡುತ್ತಾ, ಆಗಲೇ ನಾನೂ ಓದುತ್ತಾ ಎರಡು ವರ್ಷ ಮುಗಿಸಿದೆ. ಮೂರನೇ ವರ್ಷದಲ್ಲಿ ಕ್ಯಾಂಪಸ್ ಇಂಟರ್‌ವ್ಯೂ ನಡೆಯಿತು. ನನ್ನ ಶೈಕ್ಷಣಿಕ ಸಾಧನೆ ಗಮನಿಸಿದ ಡಿಲೋಟ್ ಎಂಬ ಎಂಎನ್‌ಸಿ ಕಂಪನಿ ನೌಕರಿಯ ಆಫರ್ ನೀಡಿತು. ಡಿಗ್ರಿ ಮುಗಿದ 6 ತಿಂಗಳ ನಂತರ ಕೆಲಸಕ್ಕೆ ಸೇರಬೇಕೆಂದೂ ತಿಳಿಸಿತು.
ಅಂತೂ, ಒಳ್ಳೆಯ ಸಂಬಳದ ಕೆಲಸ ಸಿಕ್ಕಿತು. ಇನ್ಮುಂದೆ ನಮ್ಮ ಕುಟುಂಬದ ಎಲ್ಲ ಕಷ್ಟಗಳೂ ಮುಗಿದವು ಎಂಬ ಸಡಗರದಲ್ಲಿ ನಾನಿದ್ದೆ. ಆಗಲೇ ಲೋಕಪಾಲ್ ಮಸೂದೆಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಅಣ್ಣಾ ಹಜಾರೆಯವರ ನೇತೃತ್ವದಲ್ಲಿ ಚಳವಳಿ ಆರಂಭವಾಯಿತು. ಹಜಾರೆಯವರ ಮಾತು, ಭಾಷಣವನ್ನು ಕೇಳಿದ ಬಳಿಕ ಕಾರ್ಪೊರೇಟ್ ಸಂಸ್ಥೆಯಲ್ಲಿ ಕೂಲಿಯಂತೆ ದುಡಿಯುವ ಬದಲು ಐಎಎಸ್ ಮಾಡಿ, ಬಡಜನರ ಸೇವೆ ಮಾಡುವುದೇ ಸರಿ ಅನ್ನಿಸಿತು. ನನ್ನ ಈ ನಿರ್ಧಾರ ಕೇಳಿ ಗೆಳೆಯರು, ಬಂಧುಗಳು ಬಯ್ದರು. “ಮನೇಲಿ ಊಟಕ್ಕೂ ಪರದಾಡುವ ಸ್ಥಿತಿ ಇದೆ. ಅಮ್ಮನಿಗೆ ಅನಾರೋಗ್ಯ ಜೊತೆಯಾಗಿದೆ. ಹೀಗಿರುವಾಗ ಕೆಲಸಕ್ಕೆ ಹೋಗೋದು ಬಿಟ್ಟು ಮತ್ತೆ ಓದಿ¤àನಿ ಅಂತಿದೀಯಲ್ಲ. ನಿನಗೆ ಬುದ್ಧಿ ನೆಟ್ಟಗಿಲ್ವ?’ ಎಂದರು. “ಆರ್ಡರಿನ ಪ್ರಕಾರ ಕೆಲಸಕ್ಕೆ ಜಾಯಿನ್ ಆಗಲು ಇನ್ನೂ ಆರು ತಿಂಗಳ ಕಾಲಾವಕಾಶ ಇದೆ. ಆ ಅವಧಿಯಲ್ಲಿ ಮನೇಲಿದ್ದು ಮಾಡುವುದೇನು? ಏನಾಗುತ್ತೋ ನೋಡೋಣ. ಒಂದು ಪ್ರಯತ್ನ ಮಾಡ್ತೇನೆ’ ಎಂದಷ್ಟೇ ಉತ್ತರಿಸಿ ಎಲ್ಲರನ್ನೂ ಸಮಾಧಾನಿಸಿದೆ.
ಈಗಲೂ ಅಷ್ಟೆ. ನನ್ನ ಕಣ್ಮುಂದೆ ಒಂದು ಗುರಿಯಿತ್ತು. ಆದರೆ ಗುರಿ ಸಾಧನೆಯ ದಾರಿ ಗೊತ್ತಿರಲಿಲ್ಲ. ಬದುಕಿನಲ್ಲಿ ದಾರಿ ತಿಳಿಯದೇ ಅಡ್ಡಾಡುತ್ತಿದ್ದೆ. ಮುಂದೇನು ಮಾಡುವುದೋ ತಿಳಿಯದೆ ನಾನು ಕಂಗಾಲಾಗಿದ್ದಾಗಲೇ ನನ್ನ ಬದುಕಿನಲ್ಲಿ ಮತ್ತೂಂದು ಮ್ಯಾಜಿಕ್ಕೂ ನಡೆದುಹೋಯಿತು. ನನ್ನ ರೂಂಮೇಟ್ ಆಗಿದ್ದ ಭೂಷಣ್, ತನ್ನ ಪರಿಚಯದ ಐಎಎಸ್ ಕೋಚಿಂಗ್ ಸೆಂಟರಿನಲ್ಲಿ ಪ್ರವೇಶ ದೊರಕಿಸಿಕೊಟ್ಟ. ಅದರ ಬೆನ್ನಿಗೇ, ಹಿಂದೊಮ್ಮೆ ರೈಲು ಪ್ರಯಾಣದ ವೇಳೆ ಪರಿಚಯವಾಗಿದ್ದ ಹಿರಿಯರೊಬ್ಬರು, ತಮಗೆ ಪರಿಚಯವಿದ್ದ ಎನ್‌ಜಿಒ ಮೂಲಕ ಐಎಎಸ್ ಓದಿಗೆ ಅಗತ್ಯವಿದ್ದ ಪುಸ್ತಕಗಳನ್ನು ಖರೀದಿಸಲು ನೆರವಾದರು.
ಆನಂತರದ ದಿನಗಳಲ್ಲಿ ನಾನು ಪುಸ್ತಕಗಳ ಮಧ್ಯೆಯೇ ಉಸಿರಾಡಿದೆ. ಎಷ್ಟೋ ಸಂದರ್ಭಗಳಲ್ಲಿ ಹಗಲು ರಾತ್ರಿಯ ಪರಿವೆಯೇ ಇಲ್ಲದಂತೆ ಓದಿದೆ. ಓದಿಕೊಂಡಷ್ಟೇ ಶ್ರದ್ಧೆಯಿಂದ 2014ರಲ್ಲಿ ಪರೀಕ್ಷೆಗೂ ಹಾಜರಾದೆ. ಕೆಲವೇ ತಿಂಗಳುಗಳ ನಂತರ ಫಲಿತಾಂಶವೂ ಬಂತು. ಮೊದಲ ಪ್ರಯತ್ನದಲ್ಲೇ, ಎಲ್ಲರೂ ಬೆರಗಾಗುವಂತೆ, 32ನೇ ರ್‍ಯಾಂಕಿನೊಂದಿಗೆ ನಾನು ಐಎಎಸ್ ಪಾಸ್ ಮಾಡಿದ್ದೆ!**
ಗುಜರಾತ್‌ನ ಹಿಮ್ಮತ್‌ನಗರದಲ್ಲಿ ನಾನೀಗ ಸಹಾಯಕ ಜಿಲ್ಲಾಧಿಕಾರಿ. ಇವತ್ತು ಸರ್ಕಾರಿ ನೌಕರಿ, ಕಾರು, ಬಂಗಲೆ, ಆಳು-ಕಾಳು ಎಲ್ಲವೂ ಇದೆ. ಆದರೆ ಕೇವಲ ಹತ್ತು ವರ್ಷದ ಹಿಂದೆ ಬರೀ ನೀರು ಕುಡಿದು, ಒಂದು ಪೀಸ್ ಬ್ರೆಡ್ ತಿಂದು ಹೊಟ್ಟೆ ತುಂಬಿಸಿಕೊಂಡಿದ್ದನ್ನು ನಾನು ಮರೆತಿಲ್ಲ, ಮರೆಯುವುದೂ ಇಲ್ಲ. ಕಷ್ಟಗಳು ಬಂದಾಗ ಕಂಗಾಲಾಗದೇ ಮುನ್ನಡೆದರೆ ಗೆಲವು ಸಿಕ್ಕೇ ಸಿಗುತ್ತದೆ. ದೇವರು, ಯಾವುದಾದರೂ ಒಂದು ರೂಪದಲ್ಲಿ ನಮ್ಮ ಕೈಹಿಡಿಯುತ್ತಾನೆ ಎಂಬುದಕ್ಕೆ ನನ್ನ ಬದುಕೇ ಸಾಕ್ಷಿ ಅನ್ನುತ್ತಾ ತಮ್ಮ¾ ಯಶೋಗಾಥೆಗೆ ಮಂಗಳ ಹಾಡುತ್ತಾರೆ ವರುಣ್. – ಎ.ಆರ್. ಮಣಿಕಾಂತ್