ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಕಾಫಿ, ಅಡಿಕೆ, ಮೆಣಸು ಮತ್ತು ಏಲಕ್ಕಿ ಬೆಳೆಗಾರರು ಹಾಗೂ ರೈತರು ಬರ, ನೆರೆಯಿಂದ ತೀವ್ರ ಸಂಕಷ್ಟದಲ್ಲಿದ್ದು, ಕೇಂದ್ರ ಸರಕಾರ ಕೂಡಲೇ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಸಚಿವ ಸಿ.ಟಿ. ರವಿ ಅವರು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದಾರೆ.
ದಿಲ್ಲಿಯಲ್ಲಿ ಮಂಗಳವಾರ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರೊಂದಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾದ ಸಿ.ಟಿ. ರವಿ ಅವರು ಜಿಲ್ಲೆಯ ಕಾಫಿ ಬೆಳೆಗಾರರು, ರೈತರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ತಿಳಿಸಿ ಕೂಡಲೇ ಪ್ಯಾಕೇಜ್ ಘೋಷಿಸಿ ನೆರವಾಗಬೇಕು ಎಂದು ಕೋರಿದರು.
ಎರಡು ವರ್ಷಗಳಿಂದ ಉಂಟಾದ ಪ್ರವಾಹದಿಂದಾಗಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ಅಡಿಕೆ, ಮೆಣಸು ಮತ್ತು ಏಲಕ್ಕಿ ಬೆಳೆ ಕೊಚ್ಚಿ ಹೋಗಿದ್ದು, ಸಾವಿರಾರು ಕುಟುಂಬಗಳ ಬದುಕು ಬೀದಿಗೆ ಬಿದ್ದಿದೆ. ಕೋವಿಡ್-19 ವೈರಾಣು ಕಾಣಿಸಿಕೊಂಡ ಬಳಿಕ ರೈತರ ಪರಿಸ್ಥಿತಿ ಶೋಚನೀಯವಾಗಿದ್ದು, ಸರಣಿ ಸಂಕಷ್ಟಗಳಿಂದ ನಲುಗುತ್ತಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಮನವಿ ಮಾಡಿದರು.
ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಅಲ್ಪಾವಧಿ ಬೆಳೆ ಸಾಲ ವಿತರಣೆ, ಕೃಷಿ ಬೆಳೆ ಸಾಲದ ಮಿತಿಯನ್ನು 3 ಲಕ್ಷ ರೂ.ಗೆ ಏರಿಕೆ, ಪ್ರಸಕ್ತ ವರ್ಷದಲ್ಲಿ ರೈತರಿಗೆ ನೀಡುವ ಸಾಲಕ್ಕೆ ಬಡ್ಡಿ ವಿಧಿಸದಿರಲು ಕ್ರಮ ಕೈಗೊಳ್ಳಬೇಕು. ಕಾಫಿ ಮಂಡಳಿಗೆ ಬಾಕಿಯಿರುವ ಸಹಾಯಧನವನ್ನು ತತ್‌ಕ್ಷಣ ಬಿಡುಗಡೆ ಮಾಡಬೇಕು. ರಸಗೊಬ್ಬರ, ಕ್ರಿಮಿನಾಶಕ ಸೇರಿದಂತೆ ಇತರೆ ಆಯ್ದ ಉತ್ಪನ್ನಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ಜತೆಗೆ ರಸಗೊಬ್ಬರಕ್ಕೆ ಸಹಾಯಧನ ಘೋಷಿಸಬೇಕು ಎಂದು ಕೋರಿದರು.
ಪ್ಯಾಕೇಜ್ ಇಲ್ಲವೇ ನೆರವಿಗೆ ಪ್ರಯತ್ನ
ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಕೇಂದ್ರ ಎಲ್ಲ ರೀತಿಯ ನೆರವು ನೀಡಲು ಸಿದ್ಧವಿದೆ. ಮುಂದಿನ ವಾರ ಕಾಫಿ ಬೆಳೆಗಾರರ ಪ್ರತಿನಿಧಿ ಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಬಳಿಕ ಅಧಿಕಾರಿಗಳೊಂದಿಗೆ ಚರ್ಚಿಸಿ ವಿಶೇಷ ಪ್ಯಾಕೇಜ್ ಇಲ್ಲವೇ ಆರ್ಥಿಕ ನೆರವು ಬಿಡು
ಗಡೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾ ಗುವುದು ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದರು.