ದೇವರಹಿಪ್ಪರಗಿ: ಬಡ ಕುಟುಂಬಗಳಿಗೆ ಕಂಟಕವಾಗಿರುವ ಗ್ರಾಮದ ಸರ್ಕಾರಿ ಸಾರಾಯಿ ಅಂಗಡಿಯ ಪರವಾನಗಿ ರದ್ದು ಪಡಿಸಿ ಶಾಶ್ವತವಾಗಿ ಮುಚ್ಚುವಂತೆ ಆಗ್ರಹಿಸಿ ಮಹಿಳೆಯರು ಗ್ರಾಮ ಪಂಚಾಯತ್‌ಗೆ ಬೀಗ ಜಡಿದು ಪ್ರತಿಭಟಿಸಿದರು.
ತಾಲೂಕಿನ ಮುಳಸಾವಳಗಿ ಗ್ರಾಪಂ ಆವರಣಕ್ಕೆ ಶುಕ್ರವಾರ ಆಗಮಿಸಿದ್ದ ಗ್ರಾಮದ ನೂರಾರು ಮಹಿಳೆಯರು ಸರ್ಕಾರಿ ಸಾರಾಯಿ ಅಂಗಡಿಯಿಂದ ತಮ್ಮ ಕುಟುಂಬದ ಸುಃಖ, ಶಾಂತಿ ಮಾಯವಾಗಿದ್ದು, ಸಾರಾಯಿ ಅಂಗಡಿ ಪರವಾನಗಿ ರದ್ದುಪಡಿಸಲು ಆಗ್ರಹಿಸಿದರು. ಈ ವೇಳೆ ಬಸಮ್ಮ ನಾಯೊRàಡಿ ಹಾಗೂ ಶಾಂತಾಬಾಯಿ ಸಾಲೋಡಗಿ ಮಾತನಾಡಿ, ಗ್ರಾಮದಲ್ಲಿ ಕಳೆದ ಎರಡು ವರ್ಷದ ಹಿಂದೆ ಯಾವುದೇ ಸಾರಾಯಿ ಅಂಗಡಿ ಇರಲಿಲ್ಲ. ಆಗ ಗ್ರಾಮ ಶಾಂತಮಯವಾಗಿತ್ತು. ಯಾವಾಗ ಸರ್ಕಾರದ ಸಾರಾಯಿ ಅಂಗಡಿ ಆರಂಭಗೊಂಡಿತೋ ಅಂದಿನಿಂದ ಗ್ರಾಮದಲ್ಲಿ ನೆಮ್ಮದಿ ಮಾಯವಾಗಿದೆ.
ಪ್ರತಿ ಕುಟುಂಬದಲ್ಲಿ ಕುಡಿತಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ವರ್ಷ ಯುವಕನೊಬ್ಬ ಕುಡಿದು ಅಂಗಡಿ ಮುಂದೆಯೇ ಮೃತಪಟ್ಟ ಘಟನೆ ಜರುಗಿದೆ. ಹೀಗಿರುವಾಗ ಗ್ರಾಮಕ್ಕೆ ಸರಾಯಿ ಅಂಗಡಿ ಬೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೋವಿಡ್ ಲಾಕ್‌ಡೌನ್ ಹಾಗೂ ಹಬ್ಬದ ದಿನಗಳಲ್ಲಿ ಹೆಚ್ಚಿನ ಬೆಲೆಗೆ ಸಾರಾಯಿ ಮಾರಾಟಕ್ಕೆ ಮುಂದಾಗುತ್ತಾರೆ. ಬಡ ಕುಟುಂಬಗಳ ಗಂಡಸರು ತಾವು ದುಡಿದ ಹಣವನ್ನೆಲ್ಲ ಕುಡಿತಕ್ಕೆ ಖರ್ಚು ಮಾಡಿದ್ದು, ಮಕ್ಕಳು ಸೇರಿದಂತೆ ಕುಟುಂಬಸ್ಥರು ಹಸಿವೆಯಲ್ಲಿ ಕಾಲ ಕಳೆಯುವಂತಾಗಿದೆ.
ಹೀಗಾದರೇ ಬಾಳುವೆ ಮಾಡುವುದಾದರೂ ಹೇಗೆ? ನಾವು ಹೆಣ್ಣುಮಕ್ಕಳು ದುಡಿದದ್ದನ್ನು ಸಹ ಗಂಡಸರು ಕಸಿದುಕೊಂಡು ಕುಡಿಯಲು ಖರ್ಚು ಮಾಡುತ್ತಿದ್ದು, ಕೂಡಲೇ ನಮ್ಮ ಬಡಕುಟುಂಬಗಳಿಗೆ ಕಂಟಕವಾದ ಸರ್ಕಾರಿ ಸಾರಾಯಿ ಅಂಗಡಿ ಪರವಾನಗಿ ರದ್ದು ಮಾಡಿ ಗ್ರಾಮದಿಂದ ತೆರುವುಗೊಳಿಸಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ನಂತರ ಪಿಡಿಒ ಮಹೇಶ ಬಗಲಿ ಅವರಿಗೆ ಮನವಿ ಸಲ್ಲಿಸಿದರು. ಬೋರಮ್ಮ ರೂಗಿ, ಮಹಾದೇವಿ ತಳವಾರ, ಗೀತಾ ನಾಯೊRàಡಿ, ಸತ್ಯಮ್ಮ ಬೂದಿಹಾಳ, ಯಮನವ್ವ ತಳವಾರ, ಚನ್ನಮ್ಮ ಬೂದಿಹಾಳ, ಸರಸ್ವತಿ ನಾಟೀಕಾರ, ಶೋಭಾ ನಾಟೀಕಾರ, ಸಾಬವ್ವ ಗಬ್ಬೂರ, ಜಯಶ್ರೀ ಸಿಂದಗಿ, ಕಮಲಾಬಾಯಿ ತಳವಾರ, ಜ್ಯೋತಿ ನಾಯೊಡಿ, ಯಲ್ಲಮ್ಮ ರಬಿನಾಳ, ಬಾಳವ್ವ ನಾಗಠಾಣ, ಭಾಗವ್ವ ಕಲಬುರ್ಗಿ, ಸವಿತಾ ಖ್ಯಾಡಗಿ, ಸುನಂದಾ ಬಾಗೇವಾಡಿ ಸೇರಿದಂತೆ ನೂರಕ್ಕೂ ಹೆಚ್ಚು ಮಹಿಳೆಯರು ಇದ್ದರು.