Advertisement

ಜ.5 ರಿಂದ ಜ.13ರವರೆಗೆ 2ನೇ ಹಂತದ ಪಂಚರತ್ನ ರಥಯಾತ್ರೆ: ಮಾಜಿ ಸಿಎಂ ಹೆಚ್ ಡಿಕೆ

05:04 PM Jan 04, 2023 | Team Udayavani |

ಬೆಂಗಳೂರು: ಎರಡನೇ ಹಂತದ ಪಂಚರತ್ನ ರಥಯಾತ್ರೆ ನಾಳೆಯಿಂದ ಬೀದರ್ ಜಿಲ್ಲೆಯಿಂದ ಪ್ರಾರಂಭ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.

Advertisement

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಬೀದರ್ ಮತ್ತು ಕಲಬುರ್ಗಿಯಲ್ಲಿ ರಥಯಾತ್ರೆ ಜನವರಿ 13ನೇ ತಾರೀಕಿನವರೆಗೆ ನಡೆಯಲಿದೆ ಎಂದರು.

ಬೀದರ್ ಜಿಲ್ಲೆಯಲ್ಲಿ 4 ದಿನ ಹಾಗೂ ಕಲಬುರ್ಗಿ ಜಿಲ್ಲೆಯಲ್ಲಿ 5 ದಿನ ರಥಯಾತ್ರೆ ನಡೆಯಲಿದ್ದು, ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 14,15, 16ರಂದು ವಿರಾಮ‌ ಇರಲಿದೆ. ಜನವರಿ 17ರಿಂದ ಇಂಡಿ ವಿಧಾನಸಭೆ ಕ್ಷೇತ್ರದಿಂದ ಮತ್ತೆ ರಥಯಾತ್ರೆ ಶುರು ಆಗಲಿದೆ. ಅದು ಕ್ರಮವಾಗಿ ರಾಯಚೂರು, ಕೊಪ್ಪಳ, ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಡೆಯಲಿದೆ. ಆ ಕುರಿತ ವೇಳಾಪಟ್ಟಿಯನ್ನು ತಿಳಿಸಲಾಗುವುದು ಎಂದರು ಕುಮಾರಸ್ವಾಮಿ ಅವರು.

ಅಮಿತ್ ಶಾಗೆ ಟಾಂಗ್ ಕೊಟ್ಟ ಮಾಜಿ ಸಿಎಂ:

ಹಳೆ ಮೈಸೂರು ಕರ್ನಾಟಕದಲ್ಲಿ ಬಿಟ್ಟರೆ ಉತ್ತರ ಕರ್ನಾಟಕದಲ್ಲಿ ಶಕ್ತಿ ಇಲ್ಲ ಅಂತಾರೆ ನಮ್ಮ ವಿರೋಧಿಗಳು. ಆದರೆ, ಆ ಭಾಗದಲ್ಲಿ ಕನಿಷ್ಟ 35 ಸ್ಥಾನ ಉತ್ತರ ಕರ್ನಾಟಕದಲ್ಲಿ ಗೆಲ್ಲಲು ಪ್ರಯತ್ನ ಮಾಡುತ್ತೇವೆ. ನಾವು ನಮ್ಮ ವಿಚಾರಗಳನ್ನು ಇಟ್ಟುಕೊಂಡು ಜನರ ಮುಂದೆ ಹೋಗುತ್ತೇವೆ. ಯಾರ ಬಗ್ಗೆಯೂ ವೈಯಕ್ತಿಕ ಟೀಕೆ ಯಾವುದೂ ಇರೋದಿಲ್ಲ. ಈ ಐದು ಕಾರ್ಯಕ್ರಮಗಳನ್ನು ಜನರ ಮುಂದೆ ಇಡ್ತೀವಿ ಎಂದು ಮಾಜಿ ಮುಖ್ಯಮಂತ್ರಿ ಅವರು ತಿಳಿಸಿದರು.

Advertisement

ಅಮಿತ್ ಶಾ ಅವರು ಬಂದು ನಮ್ಮ ಕುಟುಂಬ ಹಾಗೂ ಜೆಡಿಎಸ್ ಪಕ್ಷದ ಬಗ್ಗೆ ಟೀಕೆ ಮಾಡಿದ್ದರ ಬಗ್ಗೆ ಈಗಾಗಲೇ ಹೇಳಿದ್ದೇನೆ. ಸ್ವತಂತ್ರ ಸರ್ಕಾರ ತರುವುದು ನಮ್ಮ ಗುರಿ. ಜೆಡಿಎಸ್ ಪಕ್ಷವನ್ನು 35 ಸೀಟುಗಳಿಗೆ ಕಟ್ಟಿ ಹಾಕುತ್ತೇವೆ ಎಂದು ಅಮಿತ್ ಶಾ ಹೇಳಿದ್ದಾರೆ. ಕೊನೆಪಕ್ಷ ನಾವು ಅಷ್ಟು ಸೀಟು ಗೆಲ್ಲುತ್ತೇವೆ ಎಂದು ಅಮಿತ್ ಶಾ ಹೇಳಿದ್ದಾರೆ, ಅವರಿಗೆ ನಾನು ಆಭಾರಿ ಎಂದು ಕುಮಾರಸ್ವಾಮಿ ಅವರು ಕುಟುಕಿದರು.

ಬಿಜೆಪಿ ಕಾಂಗ್ರೆಸ್ ರೀತಿಯಲ್ಲಿ ನಾವು ದೊಡ್ಡ ಕಾರ್ಯತಂತ್ರ ಮಾಡಿಕೊಂಡು ಹೋಗುತ್ತಿಲ್ಲ. ಪಂಚರತ್ನ ನಮ್ಮ ಕಾರ್ಯಕ್ರಮ ಮಾತ್ರ. ಜನರಿಗೆ ಅದನ್ನು ಮಾತ್ರ ಹೇಳುತ್ತೇವೆ. ಈಗಾಗಲೇ ಪಂಚರತ್ನ ರಥಯಾತ್ರೆಯ ಮೊದಲ ಹಂತಕ್ಕೆ ಜನರಿಂದ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. 34 ದಿನಗಳ 34 ಕ್ಷೇತ್ರಗಳ ರಥಯಾತ್ರೆಯಲ್ಲಿ ಬಹುತೇಕ ಕ್ಷೇತ್ರಗಳನ್ನು ನಾವು ಗೆಲ್ಲುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಹಾರಗಳು ಅಚ್ಚರಿ ತಂದಿವೆ:

ಮೊದಲ ಹಂತದ ಪಂಚರತ್ನ ರಥಯಾತ್ರೆಯಲ್ಲಿ ಬೃಹತ್ ಹಾರಗಳ ನನ್ನನ್ನು ಜನತೆ ಹಾಗೂ ಕಾರ್ಯಕರ್ತ ಬಂಧುಗಳು ಸ್ವಾಗತಿಸಿದ ರೀತಿ ಕಂಡು ನನಗೆ ಆಶ್ಚರ್ಯವಾಗಿದೆ. ಅನೇಕ ಕಡೆ ಹೆಲಿಕಾಪ್ಟರ್ ಗಳ ಮೂಲಕ ಪುಷ್ಪವೃಷ್ಟಿ ಮಾಡಲಾಯಿತು. ಇದು ನನ್ನನ್ನು ಚಕಿತಗೊಳಿಸಿತು. ಮೊದಲು 2018 ರಲ್ಲಿ ಇಂಡಿಯಲ್ಲಿ ಸೇಬು ಹಾರ ಹಾಕಿದ್ದರು. ನಂತರ ಕೆಲ ಕಾಲ ಅಂತಹ ಹಾರಗಳನ್ನು ಹಾಕುವುದು ನಿಂತಿತ್ತು. ಈಗ ಹಳ್ಳಿಭಾಗದ ರೈತರು ಅವರು ಬೆಳೆದ ಬೆಳೆಯನ್ನೇ ಹಾರ ಮಾಡಿ ಹಾಕಿದ್ದಾರೆ. ತುಮಕೂರಿನ ಹುಲಿಕೆರೆಯಲ್ಲಿ ರುದ್ರಾಕ್ಷಿ ಹಾರ ಹಾಕಿದ್ದರು. ಆ ಹಾರವನ್ನು ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಮಹಾ ಸ್ವಾಮೀಜಿ ಅವರಿಗೆ ಸಮರ್ಪಣೆ ಮಾಡಿದ್ದೇನೆ ಎಂದು ಅವರು ಮಾಹಿತಿ ನೀಡಿದರು.

ಈ ಹಾರಗಳು ಇತಿಹಾಸ ನಿರ್ಮಾಣ ಮಾಡಿವೆ. ಗ್ರಾಮಗಳ ಜನರಿಂದ ಅದ್ಬುತ ಪ್ರತಿಕ್ರಿಯೆ ದೊರೆಯಿತು. ರಾತ್ರಿ ಎರಡು ಮೂರು ಗಂಟೆವರೆಗೆ ಸಭೆ ಮಾಡಿದ್ದೇನೆ. ನನಗೆ ಆಶಿರ್ವಾದ ಮಾಡಲು ತಾಯಂದಿರು ಅಷ್ಟೊತ್ತು ಇರುತ್ತಿದ್ದರು. ಮಕ್ಕಳು ಕೂಡ ಅಷ್ಟೊತ್ತು ಇದ್ದದ್ದು ಆಶ್ಚರ್ಯ ಉಂಟು ಮಾಡಿದೆ. ನಾನು ಸಿಎಂ ಆದಾಗಲೂ ನನಗೆ ಇಷ್ಟು ಉತ್ತಮ ಸ್ಪಂದನೆ ಸಿಕ್ಕಿರಲಿಲ್ಲ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹಾಗೂ ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಉಪಸ್ಥಿತರಿದ್ದರು.

ಇದನ್ನೂ ಓದಿ: ಗೋವಾ ಬೀಚ್ ನಲ್ಲಿ ಅಪಾಯಕಾರಿಯಾಗಿ ವಾಹನ ಚಾಲನೆ… ಕರ್ನಾಟಕ ಮೂಲದ ಚಾಲಕನ ವಿರುದ್ಧ ಪ್ರಕರಣ ದಾಖಲು

Advertisement

Udayavani is now on Telegram. Click here to join our channel and stay updated with the latest news.

Next