ಪಚ್ಚನಾಡಿ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ರವಿವಾರ ರಾತ್ರಿ ಕಾಣಿಸಿಕೊಂಡ ಬೆಂಕಿ ಸೋಮವಾರ ಬೆಳಗ್ಗಿನ ಜಾವ 4 ಗಂಟೆಯವರೆಗೆ ಹೊತ್ತಿ ಉರಿದಿತ್ತು. ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಲ್ಲಿ ಈ ಹಿಂದೆಯೂ ಹಲವು ಸಲ ಬೆಂಕಿ ಕಾಣಿಸಿಕೊಂಡಿತ್ತು. ಆದರೆ, ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡದ್ದು ಇದೇ ಮೊದಲು. ಈ ಹಿನ್ನೆಲೆಯಲ್ಲಿ ಬೆಂಕಿಗೆ ಶಾರ್ಟ್ ಸರ್ಕ್ನೂಟ್ ಕಾರಣವೇ? ಅಥವಾ ಬೇರೆ ಏನಾದರೂ ಕಾರಣವಿದೆಯೇ? ಎಂಬ ಬಗ್ಗೆ ತಿಳಿಯಲು ತನಿಖೆಗೆ ಜಿಲ್ಲಾಡಳಿತ ಮುಂದಾಗಿದೆ.
Advertisement
ರವಿವಾರ ರಾತ್ರಿ ಸುಮಾರು 8.30ರ ವೇಳೆಗೆ ಈ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಳ್ಳಲು ಆರಂಭವಾಗಿತ್ತು. ಹೊತ್ತು ಕಳೆದಂತೆ ಬೆಂಕಿಯ ಕೆನ್ನಾಲಿಗೆ ಸುತ್ತಮುತ್ತಲು ವ್ಯಾಪಿಸಿ ಸಾರ್ವಜನಿಕರಿಗೆ ಭೀತಿ ಉಂಟುಮಾಡಿತ್ತು. ಆ ಸಮಯಕ್ಕಾಗಲೇ ಸುತ್ತಮುತ್ತಲ ಮಂದಿ ಸ್ಥಳಕ್ಕೆ ಜಮಾಯಿಸಿದ್ದರು. ಬೆಂಕಿಯ ಜತೆ ದಟ್ಟವಾದ ಹೊಗೆಯಿಂದಾಗಿ ತುರ್ತು ಕಾರ್ಯಾಚರಣೆಗೆ ಸ್ವಲ್ಪ ಹಿನ್ನೆಡೆ ಉಂಟಾಗಿತ್ತು. ಆದರೂ ಸ್ಥಳೀಯರು ಮತ್ತು ಅಗ್ನಿಶಾಮಖ ಇಲಾಖೆ ಸಿಬಂದಿ ಬೆಂಕಿಗೆ ನೀರು ಹಾಯಿಸುವ ಮುಖೇನ ಬೆಂಕಿಯ ತೀವ್ರತೆ ಕಡಿಮೆ ಮಾಡಲು ಪ್ರಯತ್ನಿಸಿದರು.
“ಪಚ್ಚನಾಡಿಯಲ್ಲಿ ತ್ಯಾಜ್ಯ ಸಂಸ್ಕರಣೆ ಮಾಡುವ ಉದ್ದೇಶಕ್ಕೆ ಸ್ಥಳದಲ್ಲಿ ಸುಮಾರು 14 ಬೃಹತ್ ಯಂತ್ರಗಳಿದ್ದವು. ಅದರಲ್ಲಿ ಬಹುತೇಕ ಯಂತ್ರಗಳು ಹೊಸತು. ಒಟ್ಟಾರೆ ಸುಮಾರು 60 ಲಕ್ಷ ರೂ.ಗೂ ಮಿಕ್ಕಿ ಬೆಲೆಯುಳ್ಳ ಯಂತ್ರ ಇವುಗಳಾಗಿದ್ದು, ಬೆಂಕಿಯ ಕೆನ್ನಾಲಿಗೆಗೆ ಅವುಗಳೆಲ್ಲ ಸುಟ್ಟು ಹೋಗಿವೆ. ಇವುಗಳನ್ನು ಸರಿಪಡಿಸಲು ಕೂಡ ಅಸಾಧ್ಯವಾಗುವಷ್ಟು ಸುಟ್ಟಿದ್ದು, ಮರು ಬಳಕೆ ಅಸಾಧ್ಯ’ ಎನ್ನುತ್ತಾರೆ ಕಾರ್ಮಿಕರು.
Related Articles
Advertisement
ತಪ್ಪಿದ ದೊಡ್ಡ ದುರಂತ !ಮಂಗಳೂರು ನಗರದಲ್ಲಿ ಉತ್ಪತ್ತಿಯಾಗುವ ಕಸವನ್ನು ಪಚ್ಚನಾಡಿಯಲ್ಲಿ ಸಂಸ್ಕರಣೆ ಮಾಡಲಾಗುತ್ತದೆ. ಪ್ಲಾಸ್ಟಿಕ್ ಬಾಟಲ್‌ಗಳು, ಪ್ಲಾಸ್ಟಿಕ್ ಚೀಲಗಳನ್ನು ಯಂತ್ರಗಳ ಮುಖೇನ ಇಲ್ಲಿ ಕ್ರಶ್ಶಿಂಗ್ ಮಾಡಲಾಗುತ್ತದೆ. ಇದಕ್ಕೆಂದು ಪಚ್ಚನಾಡಿ ಡಂಪಿಂಗ್ ಯಾರ್ಡ್‌ನ ಎದುರು ಭಾಗದಲ್ಲಿರುವ ವಿಶಾಲವಾದ ಜಾಗದಲ್ಲಿ ಪ್ರತ್ಯೇಕ ಘಟಕ ಇದೆ. ಸಂಸ್ಕರಣೆ ಮಾಡುವ ಉದ್ದೇಶಕ್ಕೆಂದು ಖಾಸಗಿ ಸಂಸ್ಥೆಗೆ ಲೀಸ್‌ಗೆ ನೀಡಲಾಗಿದೆ. ಈ ಘಟಕದಲ್ಲಿ ಸುಮಾರು 40ಕ್ಕೂ ಮಿಕ್ಕಿ ಕಾರ್ಮಿಕರು ದುಡಿಯುತ್ತಾರೆ. ರವಿವಾರ ಆದ ಕಾರಣ ಕಾರ್ಮಿಕರು, ಭದ್ರತ ಸಿಬಂದಿ ಸ್ಥಳದಲ್ಲಿ ಇರಲಿಲ್ಲ. ಹಾಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲ. ಒಂದುವೇಳೆ, ತ್ಯಾಜ್ಯ ಸಂಸ್ಕರಣೆ ಸಮಯದಲ್ಲಿ ಈ ದುರಂತ ಸಂಭವಿಸುತ್ತಿದ್ದರೆ ಹೆಚ್ಚಿನ ಅಪಾಯವಾಗುತ್ತಿತ್ತು. ಈ ಹಿಂದೆಯೂ ಬೆಂಕಿ ಕಾಣಿಸಿಕೊಂಡಿತ್ತು
ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಲ್ಲಿ ಕಳೆದ ವರ್ಷ ಮತ್ತು ಅದಕ್ಕೂ ಅದರ ಹಿಂದಿನ ವರ್ಷ ಕೆಲವು ಬಾರಿ ಬೆಂಕಿ ಕಾಣಿಸಿಕೊಂಡು ಅನಾಹುತ ಸಂಭವಿಸಿತ್ತು. ಬಳಿಕ ಮೂರ್‍ನಾಲ್ಕು ದಿನ ಕಾರ್ಯಾಚರಣೆ ನಡೆಸಿ ಬೆಂಕಿ ಆರಿಸುವ ಕೆಲಸ ಮಾಡಲಾಗಿತ್ತು. ಜೇಸಿಬಿ, ಲಾರಿ ಮುಖೇನ ಸ್ಥಳಕ್ಕೆ ಮಣ್ಣು ಹಾಕುವ ಕಾರ್ಯ ನಡೆದಿತ್ತು. ಆದರೆ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡದ್ದು ಇದೇ ಮೊದಲು. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಶಾಶ್ವತ ಪರಿಹಾರ ಕಂಡುಕೊಳ್ಳುವತ್ತ ಪ್ರಯತ್ನಿಸಬೇಕಿದೆ ಎನ್ನುತ್ತಾರೆ ಸಾರ್ವಜನಿಕರು. ವರದಿ ಸಲ್ಲಿಕೆಗೆ ಸೂಚನೆ
ಪಚ್ಚನಾಡಿ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ರವಿವಾರ ಬೆಂಕಿ ತಗುಲಿದ್ದು, ಶಾರ್ಟ್ ಸರ್ಕ್ನೂಟ್‌ನಿಂದ ಎಂದು ಹೇಳಲಾಗುತ್ತಿದೆ. ಈ ಕುರಿತಂತೆ ಬೇರೆ ಕಾರಣ ಇದೆಯೇ ಎಂಬ ಬಗ್ಗೆ ಪೊಲೀಸ್ ಮಟ್ಟದಲ್ಲಿಯೂ ತನಿಖೆ ನಡೆಸಲಾಗುತ್ತದೆ. ಈ ಘಟನೆಯ ಕುರಿತಂತೆ ಪಾಲಿಕೆ ಪರಿಸರ ಅಭಿಯಂತರರ ಮುಖೇನ ವರದಿಸಲ್ಲಿಕೆ ಮಾಡಲು ಮನಪಾ ಆಯುಕ್ತರಿಗೆ ಸೂಚಿಸಿದ್ದೇನೆ.
-ಡಾ| ರಾಜೇಂದ್ರ ಕೆ.ವಿ., ದ.ಕ. ಜಿಲ್ಲಾಧಿಕಾರಿ ನೀರು ಸ್ಟೋರೇಜ್ ವ್ಯವಸ್ಥೆ
ಕೆಲವು ತಿಂಗಳುಗಳ ಹಿಂದೆ ಪಚ್ಚನಾಡಿ ಡಂಪಿಂಗ್ ಯಾರ್ಡ್‌ನ ತ್ಯಾಜ್ಯದಲ್ಲಿ ಬೆಂಕಿ ಕಾಣಿಕೊಂಡಿತ್ತು. ಇದೀಗ ತ್ಯಾಜ್ಯ ಸಂಸ್ಕರಣ ಘಟಕಕ್ಕೂ ಬೆಂಕಿ ತಗುಲಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಉದ್ದೇಶದಿಂದ ಸ್ಥಳದಲ್ಲಿ ಸುಮಾರು 20 ಲಕ್ಷ ಲೀ. ಸಾಮರ್ಥ್ಯದ ನೀರು ಸಂಗ್ರಹ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು.
-ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್