Advertisement
ದ.ಕ. ಹಾಗೂ ಉಡುಪಿ ಜಿಲ್ಲೆಯ ಭಿಕ್ಷುಕರಿಗಾಗಿ ಮಂಗಳೂರು ನಗರದ ಪಚ್ಚನಾಡಿಯಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರವೊಂದು ಕಾರ್ಯಚರಿಸುತ್ತಿದ್ದು, ಇಲ್ಲಿ ಭಿಕ್ಷುಕರ ಮನಪರಿವರ್ತನೆಯ ಕಾರ್ಯ ನಡೆಯುತ್ತಿದೆ. ಇಲ್ಲಿ ಭಿಕ್ಷುಕರನ್ನು ಕನಿಷ್ಠ ಒಂದು ವರ್ಷಗಳ ಕಾಲದಿಂದ ಗರಿಷ್ಠ 3 ವರ್ಷಗಳ ಕಾಲದವರೆಗೆ ಉಳಿಸಿಕೊಂಡು ಬಳಿಕ ಅವರ ವಿಳಾಸ ಪತ್ತೆ ಮಾಡಿ ಮನೆಗೆ ಕಳುಹಿಸುವ ಕೆಲಸ ಮಾಡಲಾಗುತ್ತಿದೆ.
ಪಚ್ಚನಾಡಿನಲ್ಲಿರುವ ನಿರಾಶ್ರಿತರ ಕೇಂದ್ರವು 2 ಎಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿದ್ದು, 125 ಪುರುಷರು ಹಾಗೂ 25 ಮಹಿಳೆಯರು ಸಹಿತ ಒಟ್ಟು 150 ಮಂದಿಯ ಸಾಮರ್ಥ್ಯ ಹೊಂದಿದೆ. ಪ್ರಸ್ತುತ ಕೇಂದ್ರದಲ್ಲಿ 103 ಮಂದಿ ಪುರುಷರು ಹಾಗೂ 6 ಮಂದಿ ಮಹಿಳೆಯರು ಅಶ್ರಯ ಪಡೆದಿದ್ದಾರೆ. ಕೇಂದ್ರದಲ್ಲಿ ಮೂರು ಮಂದಿ ಖಾಯಂ ಸಿಬಂದಿ ಸಹಿತ ಒಟ್ಟು 11 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿರಾಶ್ರಿತರ ಊಟೋಪಹಾರ ಸೇರಿ ಕೇಂದ್ರಕ್ಕೆ ಅಂದಾಜು 60 ಲಕ್ಷ ರೂ.ಗಳ ವರೆಗೆ ಅನುದಾನ ಲಭಿಸುತ್ತಿದೆ.
Related Articles
ಸಾಮಾನ್ಯವಾಗಿ ಸರಕಾರಿ ಕಚೇರಿ, ಕೇಂದ್ರಗಳೆಂದರೆ ಅಲ್ಲಿನ ನಿರ್ವಹಣೆ ಅಷ್ಟಕಷ್ಟೇ ಆಗಿರುತ್ತದೆ. ಆದರೆ ಮಂಗಳೂರಿನ ನಿರಾಶ್ರಿತರ ಪರಿಹಾರ ಕೇಂದ್ರ ಇತರ ಎಲ್ಲ ಇಲಾಖೆಗಳಿಗೂ ಮಾದರಿಯಾಗುವಂತಿದೆ. ಒಂದೆಡೆ ಶುಚಿಯಾದ ಕಟ್ಟಡ, ಸುತ್ತಮುತ್ತ ಹಣ್ಣು, ತರಕಾರಿ, ಹೂವಿನ ಗಿಡಗಳು ಕಂಗೊಳಿಸುತ್ತಿದೆ. ಮನೆಯೂ ಅಷ್ಟು ಚೆನ್ನಾಗಿ ಇರಲಿಕ್ಕಿಲ್ಲ ಎಂಬ ರೀತಿಯಲ್ಲಿ ನಿರಾಶ್ರಿತರ ಕೇಂದ್ರವನ್ನು ಅಚ್ಚುಕಟ್ಟಾಗಿ ಇರಿಸಿಕೊಳ್ಳಲಾಗಿದೆ.
Advertisement
ಕೇಂದ್ರದ ಸ್ವತ್ಛತೆಯ ಕಾರ್ಯವನ್ನು ನಿರಾಶ್ರಿತರೇ ಮಾಡುತ್ತಾರೆ. ಜತೆಗೆ ತರಕಾರಿ ಗಿಡಗಳನ್ನು ಬೆಳೆಸುವುದು, ಹೂವಿನ ಗಿಡಗಳ ನಿರ್ವಹಣೆ ಹೀಗೆ ಎಲ್ಲ ಕಾರ್ಯವನ್ನು ಅಲ್ಲಿರುವ ಭಿಕ್ಷುಕರೇ ಮಾಡುತ್ತಾರೆ.
ರೈಲಿನ ಮೂಲಕ ಬರುತ್ತಾರೆಜಿಲ್ಲೆಯಲ್ಲಿ ಲಭ್ಯವಾಗುವ ಭಿಕ್ಷುಕರಲ್ಲಿ ಕೇರಳ, ತಮಿಳುನಾಡಿನವರೇ ಅಧಿಕ. ಜತೆಗೆ ಉತ್ತರ ಭಾರತದವರೂ ಬರುತ್ತಾರೆ. ಇವರು ರೈಲಿನ ಮೂಲಕ ಬಂದು ನಗರದಲ್ಲಿ ಭಿಕ್ಷಾಟನೆಗೆ ತೊಡಗಿಕೊಳ್ಳುತ್ತಾರೆ. ಈ ರೀತಿಯಲ್ಲಿ ಬಂದ ಭಿಕ್ಷುಕರು ಕೇಂದ್ರದಲ್ಲಿ ದಾಖಲಾದರೆ ಮೊದಲಿಗೆ ಅವರ ವಿಳಾಸವನ್ನು ಗುರುತಿಸುವುದಕ್ಕೆ ಸಾಧ್ಯವಾಗುತ್ತದೆಯೇ ಎಂದು ನೋಡಿಕೊಳ್ಳುತ್ತೇವೆ. ಅವರು ಸಮರ್ಪಕ ವಿಳಾಸ ನೀಡಿದರೆ ಮನೆಯವರನ್ನು ಕರೆಸಿ ಅವರಿಂದ ಬಾಂಡ್ ಪಡೆದುಕೊಂಡು ಕಳುಹಿಸಲಾಗುತ್ತದೆ. ಹೆಚ್ಚಿನ ಸಂದರ್ಭದಲ್ಲಿ ಭಿಕ್ಷುಕರು ಮಾನಸಿಕವಾಗಿ ನೊಂದಿರುವುದರಿಂದ ಅವರಿಂದ ವಿಳಾಸ ತಿಳಿ ದು ಕೊ ಳ್ಳುವುದು ಕಷ್ಟವಾಗುತ್ತದೆ. ಹೀಗಾಗಿ ಅವರನ್ನು ಒಂದರಿಂದ ಮೂರು ವರ್ಷಗಳ ಕಾಲ ಕೇಂದ್ರದಲ್ಲೇ ಉಳಿಸಿಕೊಂಡು ಕೌನ್ಸೆಲಿಂಗ್ ನಡೆಸಿ ವಿಳಾಸವನ್ನು ತಿಳಿದುಕೊಳ್ಳಲಾಗುತ್ತದೆ. ಬಳಿಕ ಒಂದು ಸಾವಿರ ರೂ.ಪೆನಾಲ್ಟಿ ಕಟ್ಟಿ ಮನೆಯವರು ಕರೆದುಕೊಂಡು ಹೋಗಬೇಕಾಗುತ್ತದೆ. ಮನಪರಿವರ್ತನೆಯ ಕಾರ್ಯ
ನಾವು ಭಿಕ್ಷುಕರನ್ನು ಒಂದರಿಂದ ಮೂರು ವರ್ಷಗಳ ಕೇಂದ್ರದಲ್ಲಿ ಇಟ್ಟುಕೊಂಡು ಬಳಿಕ ಅವರ ಮನಪರಿವರ್ತನೆ ಮಾಡಲಾಗುತ್ತದೆ. ಬಳಿಕ ನಾವು ಬೇರೆ ಜಿಲ್ಲೆ, ರಾಜ್ಯಗಳ ಸಮಾಜ ಕಲ್ಯಾಣ ಇಲಾಖೆಗಳ ಮೂಲಕ ಅವರ ವಿಳಾಸವನ್ನು ಪತ್ತೆ ಹಚ್ಚುವ ಕಾರ್ಯ ಮಾಡುತ್ತೇವೆ. ಇಲ್ಲಿಗೆ ಬಂದ ಬಳಿಕ ಅವರ ಮನಪರಿವರ್ತನೆಯಾಗಿ ನೈಜ ಬದುಕಿಗೆ ಮರಳುತ್ತಾರೆ. ಸರಕಾರ ಅವರಿಗೆ ಮರುಜೀವನ ನೀಡಲು ಎಲ್ಲ ರೀತಿಯ ಸಹಕಾರ ಮಾಡುತ್ತಿದೆ. ಸಾರ್ವಜನಿಕ 10581 ಟೋಲ್‌ಫ್ರಿ ಸಂಖ್ಯೆಗೆ ಮಾಹಿತಿ ನೀಡಬೇಕು.
- ಶಾರದಾ, ಅಧೀಕ್ಷಕಿ
ನಿರಾಶ್ರಿತರ ಪರಿಹಾರ ಕೇಂದ್ರ, ಮಂಗಳೂರು ಇನ್ನು ಕುಡಿಯುವುದಿಲ್ಲ
ನಾನು ಕುಡಿದುಕೊಂಡು ಭಿಕ್ಷಾಟನೆ ಮಾಡುತ್ತಾ ತಿರುಗಾಡುತ್ತಿದೆ. ಆದರೆ ನನಗೆ ಈಗ ಇಲ್ಲಿ ಮರುಜೀವ ನೀಡಿದ್ದಾರೆ. ಇನ್ನು ಕುಡಿಯುವುದಿಲ್ಲ. ಮನೆಯಲ್ಲೇ ಇದ್ದುಕೊಂಡು ಜೀವನ ನಡೆಸುತ್ತೇನೆ. ಇಲ್ಲಿ ಇರುವುದಕ್ಕೆ ಬಹಳ ಸಂತೋಷವಾಗುತ್ತಿದೆ.
– ಆ್ಯಂಟನಿ ಚೆನ್ನೈ – ಕಿರಣ್ ಸರಪಾಡಿ