ಹೊಸದಿಲ್ಲಿ: ಉಜ್ಬೆಕಿಸ್ಥಾನ ವಿರುದ್ಧ ನಡೆಯಲಿರುವ ಡೇವಿಸ್ ಕಪ್ ಹೋರಾಟಕ್ಕಾಗಿ ಲಿಯಾಂಡರ್ ಪೇಸ್ ಅವರನ್ನು ಭಾರತೀಯ ಡೇವಿಸ್ ಕಪ್ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಆದರೆ ಪೇಸ್ ಅವರನ್ನು ಆಟವಾಡುವ ಅಂತಿಮ ನಾಲ್ವರ ತಂಡದಲ್ಲಿ ಆಯ್ಕೆ ಮಾಡಲು ನೂತನ ಆಟವಾಡದ ನಾಯಕ ಮಹೇಶ್ ಭೂಪತಿ ನಿರ್ಧರಿಸಲಿದ್ದಾರೆ.
ಏಶ್ಯ-ಓಶಿಯಾನಿಯಾ ಬಣ ಒಂದರ ಎರಡನೇ ಸುತ್ತಿನ ಹೋರಾಟ ಎಪ್ರಿಲ್ 7ರಿಂದ ಬೆಂಗಳೂರಿನಲ್ಲಿ ನಡೆಯಲಿದೆ. ಅದಕ್ಕಿಂತ 10 ದಿನ ಮೊದಲು ಪೇಸ್ ಅವರ ಆಯ್ಕೆಯನ್ನು ಭೂಪತಿ ನಿರ್ಧರಿಸಲಿದ್ದಾರೆ.
ಎಸ್‌ಪಿ ಮಿಶ್ರಾ ಅವರನ್ನು ಒಳಗೊಂಡ ಅಖೀಲ ಭಾರತ ಟೆನಿಸ್ ಅಸೋಸಿಯೇಶನ್ (ಎಐಟಿಎ) ಆಯ್ಕೆ ಸಮಿತಿ ನಾಲ್ವರು ಸಿಂಗಲ್ಸ್ (ಯೂಕಿ ಭಾಂಬ್ರಿ, ರಾಮ್‌ಕುಮಾರ್ ರಾಮನಾಥನ್, ಪ್ರಜ್ಞೆàಶ್ ಗುಣೇಶ್ವರನ್ ಮತ್ತು ಎನ್. ಶ್ರೀರಾಮ್ ಬಾಲಾಜಿ) ಮತ್ತು ಇಬ್ಬರು ಡಬಲ್ಸ್ ಆಟಗಾರ (ರೋಹನ್ ಬೋಪಣ) ರನ್ನು ಒಳಗೊಂಡ ಭಾರತೀಯ ತಂಡವನ್ನು ಆಯ್ಕೆ ಮಾಡಿತು.
ಇದು ಭಾರತದ ಉತ್ತಮ ಡೇವಿಸ್ ಕಪ್ ತಂಡಗಳಲ್ಲಿ ಒಂದಾಗಿದೆ. ಇದರಲ್ಲಿ ಬೆಸ್ಟ್ ತಂಡವನ್ನು ನಾಯಕ ಭೂಪತಿ ಆಯ್ಕೆ ಮಾಡುವ ಅವಕಾಶ ಪಡೆದಿದ್ದಾರೆ. ಸದ್ಯದ ಮಟ್ಟಿಗೆ ಡಬಲ್ಸ್‌ಗೆ ಲಿಯಾಂಡರ್ ಮತ್ತು ರೋಹನ್ ಸೂಕ್ತ ಆಟಗಾರು ಆಗಿದ್ದಾರೆ. ಹೋರಾಟ ಆರಂಭವಾಗಲು 10 ದಿನವಿರುವಾಗ ನಾಯಕ ಭೂಪತಿ ಅವರು ಆಯ್ಕೆ ಸಮಿತಿಯ ಚೇರ್ಮನ್ ಜತೆ ಚರ್ಚಿಸಿ ಅಂತಿಮ ನಾಲ್ವರ ತಂಡವನ್ನು ಅಂತಿಮಗೊಳಿಸಲಿದ್ದಾರೆ ಎಂದು ಎಐಟಿಎ ಪ್ರಧಾನ ಕಾರ್ಯದರ್ಶಿ ಹಿರಣ್ಮಯಿ ಚಟರ್ಚಿ ತಿಳಿಸಿದ್ದಾರೆ.