Advertisement

ಗೊಬ್ಬರವಾಗಲಿದೆ ಪಚ್ಚನಾಡಿ ತ್ಯಾಜ್ಯ! ಬಯೋಮೈನಿಂಗ್‌ ವ್ಯವಸ್ಥೆಗೆ ಕಾರ್ಯಾದೇಶ

12:00 PM Aug 05, 2022 | Team Udayavani |

ಮಹಾನಗರ: ಸುಮಾರು ಮೂರು ವರ್ಷಗಳಿಂದ ಮಂದಾರದಲ್ಲಿ ಶೇಖರಣೆಯಾಗಿರುವ ಪಚ್ಚನಾಡಿಯ ತ್ಯಾಜ್ಯವನ್ನು ಸಂಸ್ಕರಿಸಿ ಗೊಬ್ಬರ, ಆಯಿಲ್‌ ತಯಾರಿಸುವ ಬಹು ಮಹತ್ವದ ಬಯೋಮೈನಿಂಗ್‌ ಯೋಜನೆ ಅನುಷ್ಠಾನವಾಗಲಿದೆ.

Advertisement

ಪಚ್ಚನಾಡಿಯ ತ್ಯಾಜ್ಯ ಕರಗಿಸಲು “ಬಯೋ ಮೈನಿಂಗ್‌’ ವಿಧಾನವನ್ನು ಅಳವಡಿಸಲಾಗುತ್ತಿದ್ದು, ಈಗಾಗಲೇ ಪ್ರಾಥ ಮಿಕ ಹಂತದ ಕೆಲಸಗಳು ಆರಂಭಗೊಂಡಿವೆ. ಈ ಪ್ರದೇಶದಲ್ಲಿ ಬೃಹತ್‌ ಶೆಡ್‌ ನಿರ್ಮಿಸಲಾಗಿದ್ದು, ಛಾವಣಿ ಕೆಲಸ ವಾರದೊಳಗೆ ಪೂರ್ಣಗೊಳ್ಳಲಿದೆ. ಬಳಿಕ ತ್ಯಾಜ್ಯ ಸಂಸ್ಕರಣೆಗೆ ಯಂತ್ರಗಳು ಬರಲಿವೆ. ಈ ಉದ್ದೇಶಕ್ಕೆ ಕೆಲವು ಪ್ರದೇಶಗಳಲ್ಲಿ ಭೂಮಿ ಅಗೆದು, ಮಣ್ಣು ಹದಗೊಳಿಸಲಾಗಿದೆ. ಯಂತ್ರೋಪಕರಣಗಳು ಸಿದ್ಧಗೊಂಡ ಬಳಿಕ ಪೂರ್ಣ ಪ್ರಮಾಣದ ಕೆಲಸ ಆರಂಭವಾಗಲಿದೆ. ಸದ್ಯದ ಮಾಹಿತಿ ಯಂತೆ ಎರಡು ತಿಂಗಳೊಳಗೆ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಆರಂಭವಾಗುವ ನಿರೀಕ್ಷೆ ಇದೆ.

ಗುಡ್ಡೆಯಂತೆ ಬೆಳೆದಿರುವ ಡಂಪಿಂಗ್‌ ಯಾರ್ಡ್‌ನ ತ್ಯಾಜ್ಯವನ್ನು ಜೈವಿಕ ವಿಧಾನದ ಮುಖೇನ ಕರಗಿಸುವ ವ್ಯವಸ್ಥೆಗೆ “ಬಯೋಮೈನಿಂಗ್‌’ ಎನ್ನಲಾಗುತ್ತದೆ. ಪಚ್ಚನಾಡಿ ತ್ಯಾಜ್ಯ ಸಂಸ್ಕರಿಸಿ ಏನನ್ನು ತಯಾರು ಮಾಡಬಹುದು ಎಂಬ ಬಗ್ಗೆ ಗುತ್ತಿಗೆ ವಹಿಸಿಕೊಂಡ ಸಂಸ್ಥೆ, ಪಾಲಿಕೆ ಚರ್ಚೆ ಮಾಡಿ ಅಂತಿಮಗೊಳಿಸಲು ಮುಂದಾಗಿದೆ. ಒಟ್ಟಾರೆ ತ್ಯಾಜ್ಯಗಳು ಮೂರು ವಿಧಗಳಲ್ಲಿ ಸಂಸ್ಕರಣೆಯಾಗಲಿದೆ. ಪ್ರತ್ಯೇಕವಾಗಿ 80 ಎಂ.ಎಂ., 35 ಎಂ.ಎಂ., 8 ಎಂ.ಎಂ.ನಲ್ಲಿ ಸ್ಕ್ರೀನಿಂಗ್‌ನಲ್ಲಿ ಸಂಸ್ಕರಣೆ ನಡೆಯುತ್ತದೆ. ಈ ರೀತಿ ಸಂಸ್ಕರಿಸಿದ ಉತ್ಪನ್ನಗಳಿಂದ ಗೊಬ್ಬರ, ಆಯಿಲ್‌ ತಯಾರು ಮಾಡಲು ಅವಕಾಶ ಇದೆ. ಅದೇ ರೀತಿ, ಉಪಯೋಗವಾಗದ ವಸ್ತುಗಳನ್ನು ಸಿಮೆಂಟ್‌ ತಯಾರಿಕೆಗೆ ಕಳುಹಿಸಬಹುದು.

56 ಕೋ.ರೂ. ವೆಚ್ಚದಲ್ಲಿ ಪಾರಂಪರಿಕ ತ್ಯಾಜ್ಯ ಸಂಸ್ಕರಣೆ ನಡೆಯಲಿದೆ. ಹಣ ಕಾಸಿನ ಸಾಲದ ನೆರವಿಗೆಂದು ಈಗಾ ಗಲೇ ಕೆಯುಐಡಿಎಫ್‌ಸಿಗೆ ಪಾಲಿಕೆ ಪತ್ರ ಬರೆದಿದ್ದು, ಅಲ್ಲಿಂದಲೂ ಪೂರಕ ಸ್ಪಂದನೆ ವ್ಯಕ್ತವಾಗಿದೆ. ಸುಮಾರು 4ರಿಂದ 5 ವರ್ಷಗಳವರೆಗಿನ ಯೋಜನೆ ಇದಾಗಿದೆ. ಪಚ್ಚನಾಡಿಯಲ್ಲಿ ತ್ಯಾಜ್ಯ ದುರಂತ ಸಂಭವಿಸಿದ ಸ್ಥಳದಲ್ಲಿ ಮತ್ತಷ್ಟು ಅನಾಹುತ ಸಂಭವಿಸದಂತೆ ತಡೆಯಲು ಸುಮಾರು 7 ಮೀಟರ್‌ ಎತ್ತರದ ತಡೆಗೋಡೆ ನಿರ್ಮಿಸಲಾಗಿದ್ದು, ತ್ಯಾಜ್ಯದ ನೀರು ಶೇಖರಣೆಗೆ ಟ್ಯಾಂಕ್‌ ವ್ಯವಸ್ಥೆ ಕೈಗೊಳ್ಳಲಾಗಿದೆ.

ರಾಶಿ ಬಿದ್ದಿದೆ 9 ಲಕ್ಷ ಟನ್‌ ತಾಜ್ಯ

Advertisement

ಪಚ್ಚನಾಡಿಯ ಮಂದಾರ ಪ್ರದೇಶದಲ್ಲಿ 2019ರ ಆಗಸ್ಟ್‌ ತಿಂಗಳಿನಲ್ಲಿ ತ್ಯಾಜ್ಯರಾಶಿ ಜರಿದು ಮಂದಾರ ಭಾಗಕ್ಕೆ ಕುಸಿದು ಸುಮಾರು 2 ಕಿ.ಮೀ.ನಷ್ಟು ದೂರಕ್ಕೆ ಸರಿದಿತ್ತು. 50 ಮೀ. ಗಳಷ್ಟು ಎತ್ತರದಲ್ಲಿ ಸುಮಾರು 9 ಲಕ್ಷ ಟನ್‌ ತ್ಯಾಜ್ಯ ರಾಶಿ ಬಿದ್ದಿತ್ತು. ತ್ಯಾಜ್ಯ ವನ್ನು ಕರಗಿಸಲು ನ್ಯಾಕ್‌ ಆಫ್‌ ಎಂಬ ಸಂಸ್ಥೆ ಟೆಂಡರ್‌ ಪಡೆದಿದೆ. 56 ಕೋ. ರೂ. ವೆಚ್ಚದಲ್ಲಿ ಈ ಯೋಜನೆ ಅಂತಿಮಗೊಂಡಿದೆ.

ಅಧಿಕಾರಿಗಳ ಜತೆ ಶೀಘ್ರ ಸಭೆ: ಪಚ್ಚನಾಡಿಯಲ್ಲಿ ರಾಶಿ ಬಿದ್ದಿರುವ ತ್ಯಾಜ್ಯವನ್ನು ಬಯೋಮೈನಿಂಗ್‌ ವಿಧಾನದ ಮೂಲಕ ಕರಗಿಸಲಾಗುತ್ತಿದೆ. ಈಗಾಗಲೇ ಟೆಂಡರ್‌ ಅಂತಿಮಗೊಂಡು ಕಾರ್ಯಾದೇಶ ನೀಡಲಾಗಿದೆ. ಪ್ರಾಥಮಿಕ ಹಂತದ ಕಾಮಗಾರಿ ಈಗಾಗಲೇ ಆರಂಭಗೊಂಡಿದೆ. ಕಾಮಗಾರಿಗೆ ವೇಗ ನೀಡುವ ನಿಟ್ಟಿನಲ್ಲಿ ಸದ್ಯದಲ್ಲೇ ಸಂಬಂಧಪಟ್ಟ ಅಧಿಕಾರಿಗಳ ಜತೆ ಸಭೆ ನಡೆಸಲಾಗುವುದು. –ಡಿ. ವೇದವ್ಯಾಸ ಕಾಮತ್‌, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next