ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಟೀಕೆಟ್ ಆಕಾಂಕ್ಷಿಗಳ ಪೈಪೋಟಿ ಆರಂಭವಾಗಿದ್ದು ಇದಕ್ಕೆ ನಗರದ ಎಸ್‌ಸಿ ಮೀಸಲು ಕ್ಷೇತ್ರವಾದ ಸಿ.ವಿ.ರಾಮನ್ ನಗರ ಸಾಕ್ಷಿಯಾಗಿದೆ. ಕಾಂಗ್ರೆಸ್ ಪಕ್ಷದ ಟಿಕೇಟ್‌ಗಾಗಿ ಸ್ಥಳೀಯ ಮುಖಂಡ ಆರ್.ರಮೇಶ್ ಅವರು ಕೆಪಿಸಿಸಿ ಕಾರ್ಯದರ್ಶಿ , ನಟ, ನಿರ್ಮಾಪಕ ಮದನ್‌ಪಟೇಲ್‌ಗೆ ಬೆದರಿಕೆ ಹಾಕಿರುವ ವಿಡಿಯೋ ಬಹಿರಂಗವಾಗಿದೆ.
ಇಬ್ಬರು ಹಳೇಯ ಸ್ನೇಹಿತರಾಗಿದ್ದು, ಸಿ.ವಿ.ರಾಮನ್ ನಗರದ ಟಿಕೇಟ್‌ಗಾಗಿ ಪೈಪೋಟಿ ಆರಂಭಿಸಿದ್ದಾರೆ. ರಮೇಶ್ ಅವರು ಬೆದರಿಕೆ ಹಾಕಿರುವ ಫೋನ್ ಸಂಭಾಷಣೆಯ ಆಡಿಯೋವನ್ನು ಮದನ್‌ಪಟೇಲ್ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
ಏಕವಚನದಲ್ಲೇ ಮಾತನಾಡಿರುವ ರಮೇಶ್ ಇದು ನನ್ನ ಕ್ಷೇತ್ರ, ನಾನು ಅಭ್ಯರ್ಥಿ ಅಂತ ಬರೆಯುತ್ತೇನೆ. ನಿನಗೆ ಆಗುತ್ತಾದಾ? ನನ್ನ ಹುಡುಗರು ಖತರ್ನಾಕ್ ಅವರು ,ಕೆಟ್ಟವರು ಪ್ರಾಣ ತೆಗಿತಾರೆ..ಎಲೆಕ್ಷನ್‌ಗೆ ನಾನು ಕ್ಯಾಂಡಿಡೇಟ್.. ಕ್ಷೇತ್ರ ನಿನ್ಗೆ ಬಿಡ್ಬೇಕಾ? ಏರಿಯಾ ನಂದು, ಕ್ಯಾಂಡಿಡೇಟ್ ನಾನೇ… ಎಂದು ಬೆದರಿಕೆ ಹಾಕಿರುವುದು ಆಡಿಯೋದಲ್ಲಿ ಕೇಳಿ ಬಂದಿದೆ.
ಈ ಬಗ್ಗೆ ನಗರ ಪೊಲೀಸ್ ಆಯುಕ್ತ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ದೂರು ನೀಡಿ ಶಿಸ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡುವುದಾಗಿ ಮದನ್ ಪಟೇಲ್ ಹೇಳಿದ್ದಾರೆ.
ಕಳೆದ ಬಾರಿಯ ಚುನಾವಣೆಯಲ್ಲಿ ರಮೇಶ್ ಅವರು ಪರಾಭವ ಹೊಂದಿದ್ದರು. ಬಿಎಸ್‌ಆರ್ ಕಾಂಗ್ರೆಸ್‌ನಲ್ಲಿದ್ದ ಮದನ್ ಪಟೇಲ್, ಆ ಬಳಿಕ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದರು.