Advertisement

PM Vishwakarma Yojana: ಉಭಯ ಜಿಲ್ಲೆಗಳಲ್ಲಿ ನಿರೀಕ್ಷಿತ ನೋಂದಣಿ ಆಗಿಲ್ಲ

11:36 PM Jun 16, 2024 | Team Udayavani |

ಉಡುಪಿ: ಬಡಿಗೆ, ಕಮ್ಮಾರಿಕೆ, ಟೈಲರಿಂಗ್‌, ಮೀನು ಬಲೆ ತಯಾರಿಕೆ, ಶಿಲ್ಪಿಗಳು ಹೀಗೆ 18 ಸಾಂಪ್ರದಾಯಿಕ ವೃತ್ತಿಯಲ್ಲಿ ತೊಡಗಿರುವವರಿಗೆ ಕೌಶಲಾಧಾರಿತ ತರಬೇತಿಯ ಜತೆಗೆ ಅಗತ್ಯ ಸಾಲಸೌಲಭ್ಯ ಒದಗಿಸುವ ಕೇಂದ್ರ ಸರಕಾರದ ಪಿ.ಎಂ. ವಿಶ್ವಕರ್ಮ ಯೋಜನೆಗೆ ಉಭಯ ಜಿಲ್ಲೆಗಳಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ನೋಂದಣಿಯಾಗಿಲ್ಲ.

Advertisement

ಉಡುಪಿ ಮತ್ತು ದ.ಕ. ಜಿಲ್ಲೆಯಲ್ಲಿ ಟೈಲರಿಂಗ್‌ ವೃತ್ತಿಯವರು ಹೆಚ್ಚಿನ ಪ್ರಮಾಣದಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ ಮತ್ತು ಅವರಿಗೆ ಹಂತ ಹಂತವಾಗಿ ತರಬೇತಿ ನೀಡುವ ಕಾರ್ಯವೂ ಚಾಲ್ತಿಯಲ್ಲಿದೆ. ಆದರೆ, ಉಳಿದ ಕರಕುಶಲ ವೃತ್ತಿ ತರಬೇತಿ ನೋಂದಣಿ ಬಹಳ ಕಡಿಮೆಯಿದೆ ಎನ್ನುತ್ತಾರೆ ಅಧಿಕಾರಿಗಳು.

ನೋಂದಣಿಗೆ ಅವಕಾಶ
ಪಿ.ಎಂ. ವಿಶ್ವಕರ್ಮ ಯೋಜನೆಯಡಿ ಯಾವಾಗ ಬೇಕಾದರೂ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಅರ್ಹ ಫ‌ಲಾನುಭವಿಗಳು ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ಬುಕ್‌, ಆಧಾರ್‌ ಜೋಡಿತ ಮೊಬೈಲ್‌ ಸಂಖ್ಯೆ, ರೇಷನ್‌ ಕಾರ್ಡ್‌ ಹಾಗೂ ಕುಟುಂಬ ಸದಸ್ಯರ ಆಧಾರ್‌ ಕಾರ್ಡ್‌ ದಾಖಲೆಯೊಂದಿಗೆ ಸಾಮಾನ್ಯ ಸೇವಾ ಕೇಂದ್ರದ ಮೂಲಕ ನೋಂದಣಿ ಮಾಡಿಸಿಕೊಳ್ಳಬಹುದು. ಸರಕಾರಿ ಉದ್ಯೋಗಿಗಳು ಇರುವ ಕುಟುಂಬದ ಸದಸ್ಯರು ನೋಂದಣಿ ಮಾಡಲು ಸಾಧ್ಯವಿಲ್ಲ. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಅವಕಾಶ ಇರುತ್ತದೆ.

ಸವಲತ್ತು ಅನೇಕ
ಪಿ.ಎಂ. ವಿಶ್ವಕರ್ಮ ಯೋಜನೆಯಡಿ ನೋಂದಣಿ ಮಾಡಿಕೊಂಡವರಿಗೆ ಆರಂಭದಲ್ಲಿ ಒಂದು ವಾರಗಳ ತರಬೇತಿ ನೀಡಲಾಗುತ್ತದೆ. ಈ ತರಬೇತಿ ಅವಧಿಯಲ್ಲಿ ಪ್ರತಿ ದಿನಕ್ಕೆ 500 ರೂ.ಗಳ ಶಿಷ್ಯವೇತನ ನೀಡಲಾಗುತ್ತದೆ. ತರಬೇತಿ ಮುಗಿದ ಕೂಡಲೇ ಸಂಬಂಧಪಟ್ಟ ವೃತ್ತಿಗೆ ಪೂರಕವಾದ ಕಿಟ್‌ ಒದಗಿಸಲಾಗುತ್ತದೆ. ಹಾಗೆಯೇ ವೃತ್ತಿಯಲ್ಲಿ ಮುಂದುವರಿಯಲು ಅನುಕೂಲವಾಗುವಂತೆ 1 ಲಕ್ಷ ರೂ.ವರೆಗೂ ಸಾಲಸೌಲಭ್ಯ ಒದಗಿಸಲಾಗುತ್ತದೆ. ನಿರ್ದಿಷ್ಟ
ಅವಧಿಯಲ್ಲಿ ಸಾಲ ಮರುಪಾವತಿಸಿ ದರೆ ಪುನಃ ಹೆಚ್ಚುವರಿ ಸಾಲ ಪಡೆಯಲು ಅವಕಾಶವಿದೆ.

ನೋಂದಣಿ ವಿವರ
ಉಡುಪಿ: ಜಿಲ್ಲೆಯ ಗ್ರಾ.ಪಂ. ವ್ಯಾಪ್ತಿಯಿಂದ 11,697, ನಗರ ಸ್ಥಳೀಯ ಸಂಸ್ಥೆಗಳಿಂದ 1,788 ಅರ್ಜಿ ಸೇರಿ 13,485 ಅರ್ಜಿ ಸಲ್ಲಿಕೆಯಾಗಿವೆ. ಇದರಲ್ಲಿ 10,727 ಅರ್ಜಿಯನ್ನು ಜಿಲ್ಲಾ ಸಮಿತಿಗೆ ಶಿಫಾರಸು ಮಾಡಲಾಗಿದೆ. 33 ಅರ್ಜಿ ತಿರಸ್ಕೃತಗೊಂಡಿದ್ದು, 2,725 ಅರ್ಜಿ ಶಿಫಾರಸಿಗೆ ಬಾಕಿಯಿದೆ. 7,199 ಅರ್ಜಿಯನ್ನು ಜಿಲ್ಲಾ ಸಮಿತಿಯಿಂದ ರಾಜ್ಯ ಸಮಿತಿಗೆ ಶಿಫಾರಸ್ಸು ಮಾಡಲಾಗಿದೆ. 5,495 ಅರ್ಜಿ ರಾಜ್ಯ ಸಮಿತಿಯಿಂದ ಅನುಮೋದನೆಗೊಂಡಿದೆ. 16 ಅರ್ಜಿ ತಿರಸ್ಕೃತವಾಗಿವೆ.

Advertisement

ದಕ್ಷಿಣ ಕನ್ನಡ: ಜಿಲ್ಲೆಯ ಗ್ರಾ. ಪಂ. ವ್ಯಾಪ್ತಿಯಿಂದ 13,077, ನಗರ ಸ್ಥಳೀಯ ಸಂಸ್ಥೆಗಳಿಂದ 5,565 ಅರ್ಜಿ ಸೇರಿ 18,642 ಅರ್ಜಿ ಸಲ್ಲಿಕೆಯಾಗಿವೆ. ಇದರಲ್ಲಿ 13,167 ಅರ್ಜಿಯನ್ನು ಜಿಲ್ಲಾ ಸಮಿತಿಗೆ ಶಿಫಾರಸು ಮಾಡಲಾಗಿದೆ. 67 ಅರ್ಜಿ ತಿರಸ್ಕೃತಗೊಂಡಿದ್ದು, 5,408 ಅರ್ಜಿ ಶಿಫಾರಸಿಗೆ ಬಾಕಿಯಿದೆ. 6,217 ಅರ್ಜಿಯನ್ನು ಜಿಲ್ಲಾ ಸಮಿತಿಯಿಂದ ರಾಜ್ಯ ಸಮಿತಿಗೆ ಶಿಫಾರಸ್ಸು ಮಾಡಲಾಗಿದೆ. 4,322 ಅರ್ಜಿ ರಾಜ್ಯ ಸಮಿತಿಯಿಂದ ಅನುಮೋದನೆಗೊಂಡಿದೆ. 6 ಅರ್ಜಿ ತಿರಸ್ಕೃತವಾಗಿವೆ.

ಪಿಎಂ ವಿಶ್ವಕರ್ಮ ಯೋಜನೆ ಯಡಿ ಅರ್ಜಿ ಸಲ್ಲಿಸಲು ಈಗಲೂ ಅವಕಾಶವಿದೆ. ಅರ್ಹರು ಸಾಮಾನ್ಯ ಸೇವಾ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಿ, ಅಗತ್ಯ ತರಬೇತಿ ಪಡೆಯುವ ಮೂಲಕ ಯೋಜನೆ ಉಪಯೋಗ ಪಡೆಯಬಹುದಾಗಿದೆ. 18 ವೃತ್ತಿಯಲ್ಲಿರುವವರಿಗೆ ಅರ್ಜಿ ಸಲ್ಲಿಸುವ ಅವಕಾಶವಿದೆ. ಕೆಲವೊಂದು ವೃತ್ತಿಯವರಿಗೆ ಈಗಾಗಲೇ ತರಬೇತಿಯನ್ನು ಆರಂಭಿಸಿದ್ದೇವೆ.
ಗೋಕುಲ್‌ದಾಸ್‌ ನಾಯಕ್‌, ನಾಗರಾಜ್‌ ವಿ. ನಾಯಕ್‌,
ಜಂಟಿ ನಿರ್ದೇಶಕರು, ದ.ಕ., ಉಡುಪಿ ಜಿಲ್ಲಾ ಕೈಗಾರಿಕೆ ಕೇಂದ್ರ.

 -ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next