ಮನೆ ಯಜಮಾನ ಮೌನಿಯಾಗಿ ಬಿಟ್ಟರೆ ಉಳಿದವರೆಲ್ಲರೂ ಮಾತನಾಡು ತ್ತಾರೆ! ಈ ಮಾತು ಸ್ವಲ್ಪ ಬದಲಿಸಿ ಕಾಂಗ್ರೆಸ್‌ಗೆ ಅನ್ವಯಿಸಬಹುದು. ಮನೆ ಯಜಮಾನ ಕಣ್ಣುಮುಚ್ಚಿ ಕುಳಿತರೆ ಹೊರಗೆ ಹೋದವರ ಸಂಖ್ಯೆಯೇ ತಿಳಿ ಯುವುದಿಲ್ಲ. ಎರಡು ವರ್ಷಗಳಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರು ಎಷ್ಟು ಮಂದಿ ಪಕ್ಷದಿಂದ ಹೊರ ನಡೆದರು ಎಂಬುದಕ್ಕೆ ಲೆಕ್ಕವೇ ಇಲ್ಲ. ಈಗ ಕೇರಳದಲ್ಲಿ ಪಿ.ಸಿ. ಚಾಕೋ ಸರದಿ. ಒಂದು ಮಾತು- ಯಾರು ಹೊರ ನಡೆದರೂ ಈಗ ಏನು ಆಗುವುದಿಲ್ಲವಂತೆ!
ಪಿ. ಸಿ. ಚಾಕೋ ಕಾಂಗ್ರೆಸ್‌ನ ನಿಷ್ಠಾವಂತ ಮುಂದಾಳು. ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿಯ ಆಪ್ತ ವೃತ್ತದಲ್ಲಿದ್ದವರೂ ಸಹ. ಬಹಳ ಮುಖ್ಯವಾಗಿ ಚಾಕೋ ಬಹಳ ಸುದ್ದಿಗೆ ಬಂದದ್ದು 2 ಜಿ ಹಗರಣದ ತನಿಖೆ ಸಂದರ್ಭ. ಕಾಂಗ್ರೆಸ್ ನೇತೃತ್ವದ ಯುಪಿಎ ಎರಡನೇ ಅವಧಿ. 2ಜಿ ಸ್ಪೆಕ್ಟ್ರಂ ಹಗರಣ ಭಾರೀ ಸುದ್ದಿಯಲ್ಲಿತ್ತು. ತನಿಖೆಗೆಂದು ನೇಮಿಸಲಾದ ಜಂಟಿ ಸದನ ಸಮಿತಿ ಅಧ್ಯಕ್ಷರಾಗಿದ್ದವರು ಚಾಕೋ. ತನಿಖಾ ವರದಿ ಬಂದಾಗ ಆಡಳಿತ ಪಕ್ಷವನ್ನು ಆರೋಪದಿಂದ ಬಚಾವ್ ಮಾಡಿದ್ದರು. ಅಂದರೆ ಕ್ಲೀನ್ ಚಿಟ್. ಆಗ ವಿಪಕ್ಷವಾದ ಬಿಜೆಪಿ, ಸಮಿತಿ ಅಧ್ಯಕ್ಷರು ವರದಿಯನ್ನು ತಿರುಚಿದ್ದಾರೆ ಎಂದು ಆಪಾದನೆ ಮಾಡಿತ್ತು. ಸದನದಲ್ಲೂ ಪ್ರತಿಭಟನೆಗೆ ಪ್ರಯತ್ನಿಸಿತ್ತು. ಆಗ ಕಾಂಗ್ರೆಸ್ ಅನ್ನು ಬಿರುಗಾಳಿಯಿಂದ ರಕ್ಷಿಸಿದ್ದೇ ಇದು. ಆದರೆ ಅದೇನೂ ಅನಂತ ರದ ಚುನಾವಣೆಯಲ್ಲಿ ಕೈ ಹಿಡಿಯಲಿಲ್ಲ ಎಂಬುದು ಬೇರೆ ಮಾತು.
ಚಾಕೋವಿಗೆ ಅವಕಾಶ ಸಿಗಲಿಲ್ಲವೇ ಎಂದರೆ ಸಿಕ್ಕಿದೆ. 1980ರಿಂದ ಸಕ್ರಿಯ ರಾಜಕಾರಣದಲ್ಲಿದ್ದವರು. 2013ರ ದಿಲ್ಲಿ ಚುನಾವಣೆ. ಅಲ್ಲಿನ ಕಾಂಗ್ರೆಸ್‌ನ ಉಸ್ತುವಾರಿಯ ಹೊಣೆ ಸಿಕ್ಕಿತು. ಆಗ ಶೀಲಾ ದೀಕ್ಷಿತ್‌ರ ಮೊದಲನೇ ಅವಧಿ ಮುಗಿದಿತ್ತು. ಮತ್ತೆ ಕಾಂಗ್ರೆಸ್‌ನ್ನು ಗೆಲ್ಲಿಸುವ ಹೊಣೆ ಇತ್ತು ಚಾಕೋ ಅವರಿಗೆ. ಆದರೆ ಆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಎಂಟೇ ಸೀಟು ದಕ್ಕಿತು. ಅದಕ್ಕೆ ಏನೇನೋ ಕಾರಣಗಳನ್ನು ಹೇಳಲಾಗಿತ್ತು. ಆಗತಾನೇ ಹುಟ್ಟಿದ್ದ ಆಮ್ ಆದ್ಮಿ ಪಾರ್ಟಿ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ 28 ಸೀಟುಗಳನ್ನು ಗಳಿಸಿತು. ಕಾಂಗ್ರೆಸ್ ಬಾಹ್ಯ ಬೆಂಬಲ ನೀಡಿದ್ದಕ್ಕೆ ಕೇಜ್ರಿವಾಲ್ ಮುಖ್ಯಮಂತ್ರಿಯಾದರು. 2015ರಲ್ಲಿ ಮೈತ್ರಿ ಕಡಿತಗೊಂಡಿದ್ದರ ಪರಿಣಾಮ ನಡೆದ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ದಯನೀಯವಾಗಿ ಸೋತಿತು. ಅಂದರೆ ಒಂದೂ ಸ್ಥಾನ ಲಭಿಸಲಿಲ್ಲ. ಚಾಕೋ ಆಗಲೂ ಉಸ್ತುವಾರಿಯಾಗಿದ್ದರು. ಶೀಲಾ ದೀಕ್ಷಿತ್ ಮತ್ತು ಚಾಕೋ ಮಧ್ಯೆ ಸಮನ್ವಯದ ಕೊರತೆ ಹೆಚ್ಚಾಗತೊಡಗಿತ್ತು. ಚಾಕೋ ಅವರನ್ನು ಹಿಂಪಡೆಯುವಂತೆಯೂ ಸ್ಥಳೀಯ ಮುಖಂಡರು ಒತ್ತಾಯಿಸತೊಡಗಿದ್ದರು. 2020ರ ಚುನಾವಣೆ ಯಲ್ಲಿ ಮತ್ತೆ ಕಾಂಗ್ರೆಸ್ ಸೋತಿತು. ಅಗ ಅನಿವಾರ್ಯವಾಗಿ ಉಸ್ತುವಾರಿಗೆ ರಾಜೀನಾಮೆ ಕೊಡಬೇಕಾದ ಸಂದರ್ಭ ಬಂದಿತು.
ರಾಷ್ಟ್ರ ರಾಜಕಾರಣ ಸಾಕೆಂದು ರಾಜ್ಯ ರಾಜಕಾರಣಕ್ಕೆ ಮರಳಿದರು ಚಾಕೋ. ಆದರೆ ಕೇರಳ ರಾಜ್ಯದಲ್ಲಿ ಹಿಂದಿದ್ದಂತೆ ಇರಲಿಲ್ಲ ಪಕ್ಷ. ಎರಡು-ಮೂರು ಶಕ್ತಿ ಕೇಂದ್ರಗಳು. ಅದಕ್ಕೇ ಅವರು ತಮ್ಮ ರಾಜೀನಾಮೆ ಹಿನ್ನೆಲೆಯಲ್ಲಿ ಪ್ರಸ್ತಾವಿಸಿ, ಇಲ್ಲೀಗ ಯಾವುದಾದರೂ ಒಂದು ಗುಂಪಿನ ಜತೆ ಫೋಟೋ ನಿಲ್ಲಲೇಬೇಕು. ಇಲ್ಲವಾದರೆ ನೀವು ಫೋಟೋದಲ್ಲಿ ಇರುವುದೇ ಇಲ್ಲ ಎಂದದ್ದು.
ಕೇರಳದಲ್ಲೀಗ ಕಾಂಗ್ರೆಸ್ ಐ ಮತ್ತು ಕಾಂಗ್ರೆಸ್ ಎ ಎಂದಿದೆ. ಕಾಂಗ್ರೆಸ್ ಐ ಎಂದರೆ ಅಖೀಲ ಭಾರತ ಕಾಂಗ್ರೆಸ್. ಕಾಂಗ್ರೆಸ್ ಎ ಎಂದರೆ ಆ್ಯಂಟನಿ ಕಾಂಗ್ರೆಸ್. ಇಷ್ಟಾದ ಮೇಲೂ ರಾಹುಲ್ ಗಾಂಧಿ ಆಪ್ತರ ವೃತ್ತದಲ್ಲಿರುವ ಕೇರಳದವರೇ ಆದ ಕೆ.ಸಿ. ವೇಣುಗೋಪಾಲ್ ಅವರ ಲೆಕ್ಕಾಚಾರವೂ ನಡೆಯುತ್ತದಂತೆ. ಹೀಗಾಗಿ 40 ಮಂದಿಯ ಚುನಾವಣೆ ಸಮಿತಿ ಯಿದ್ದರೂ ಯಾರೋ ಅಭ್ಯರ್ಥಿಗಳನ್ನು ಹೆಸರಿಸುತ್ತಾರೆ, ಇನ್ಯಾರಿಂದಲೋ ಇನ್ನೆಲ್ಲಿಯೋ ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳುತ್ತದಂತೆ.
ಅದಕ್ಕೇ ಚಾಕೋ ಹೊರಗೆ ಬಂದಿದ್ದು. ಪಕ್ಷದಲ್ಲೀಗ ಪ್ರಜಾತಂತ್ರವಿಲ್ಲ ಎಂದು. ಆದರೆ ಸೋಲಿನ ಬಾಲ ಹಿಡಿದವರ ಹಿಂದೆ ಯಾರೂ ಇರುವುದಿಲ್ಲವಲ್ಲ !
-ಅಶ್ವಘೋಷ