ಹೈದರಾಬಾದ್/ಭೋಪಾಲ್: ಸಂಸದ ಅಸಾದುದ್ದೀನ್ ಒವೈಸಿ ನೇತೃತ್ವದ ಎಂಐಎಂ ಪಕ್ಷದ ಮೈತ್ರಿ ತ್ಯಜಿಸಿ ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ ಎಂದು ಟಿಆರ್‌ಎಸ್ ಸ್ಪಷ್ಟಪಡಿಸಿದೆ. ಪಕ್ಷದ ಹಿರಿಯ ನಾಯಕ ಅಬಿದ್ ರಸೂಲ್ ಖಾನ್ ಭಾನುವಾರ ಮಾತನಾಡಿ, ನಾವು ವಾಗ್ಧಾನಗಳನ್ನು ಪೂರೈಸುತ್ತೇವೆ. ಯಾವ ಸ್ನೇಹಿತರನ್ನು ಹೊಂದಿದ್ದೆವೋ ಅವರ ಜತೆ ಮೈತ್ರಿ ಮುಂದುವರಿಸುತ್ತೇವೆ. ಬಿಜೆಪಿ ಜತೆಗೆ ಮೈತ್ರಿ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಬಿಜೆಪಿ ನೀಡಿದ ಆಫರ್ ತಿರಸ್ಕರಿಸಿದ್ದಾರೆ.
ಒವೈಸಿ ಪಕ್ಷದ ಜತೆಗಿನ ಮೈತ್ರಿ ತ್ಯಜಿಸಿದರೆ ಟಿಆರ್‌ಎಸ್‌ಗೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ತೆಲಂ ಗಾಣ ಬಿಜೆಪಿ ಅಧ್ಯಕ್ಷ ಕೆ.ಲಕ್ಷ್ಮಣ ಅವರು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಟಿಆರ್‌ಎಸ್ ಈ ಪ್ರತಿಕ್ರಿಯೆ ನೀಡಿದೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿಯೂ ಟಿಆರ್‌ಎಸ್, ಬಿಜೆಪಿಯ ಬಿ ಟೀಂ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದರು.
ಮರು ಮತದಾನ: ರಾಜಸ್ಥಾನದ ಕರಾನ್ಪುರ ವಿಧಾನಸಭಾ ಕ್ಷೇತ್ರದಲ್ಲಿರುವ ಮತಗಟ್ಟೆಯೊಂದ ರಲ್ಲಿ ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶ ನೀಡಿದೆ. ಡಿ.7ರಂದು ಮತದಾನ ಆರಂಭಕ್ಕೆ ಮುನ್ನ ಇವಿಎಂ ಪ್ರಾತ್ಯಕ್ಷಿಕೆ ನೀಡಲಾಗಿತ್ತು. ಪ್ರಾತ್ಯಕ್ಷಿಕೆ ವೇಳೆ ಹಾಕಲಾಗಿದ್ದ ಮತಗಳನ್ನು ಡಿಲೀಟ್ ಮಾಡಿರಲಿಲ್ಲ. ಹೀಗಾಗಿ ಮರು ಮತದಾನಕ್ಕೆ ಆದೇಶಿಸಲಾಗಿದೆ ಎಂದು ಆಯೋಗ ತಿಳಿಸಿದೆ. ಸೋಮವಾರ ಇಲ್ಲಿ ಮರು ಮತದಾನ ನಡೆಯಲಿದೆ.
ಏಕತೆಯೇ ಶಕ್ತಿ: ಮಧ್ಯಪ್ರದೇಶ ಕಾಂಗ್ರೆಸ್‌ನಲ್ಲಿ ಹಿಂದಿನ ಸಂದರ್ಭಗಳಲ್ಲಿ ಬಣ ಸಂಘರ್ಷಗಳಿದ್ದವು. ಆದರೆ ಈಗ ಏಕತೆಯೇ ನಮ್ಮ ಶಕ್ತಿಯಾಗಿದೆ ಎಂದು ಪಕ್ಷದ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. “ಪಿಟಿಐ’ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ವಿಧಾನ ಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕು ಎಂಬ ನಿಟ್ಟಿನಲ್ಲಿ ಕಾರ್ಯಕರ್ತರು ಮತ್ತು ನಾಯಕರು ಕೆಲಸ ಮಾಡಿದ್ದಾರೆ ಎಂದು ಹೇಳಿ ಕೊಂಡಿದ್ದಾರೆ. “115 ಕ್ಷೇತ್ರಗಳಲ್ಲಿ ಪ್ರಚಾರ ಮಾಡುವ ವೇಳೆ ಕಾರ್ಯಕರ್ತರಲ್ಲಿ ಅಪರಿಮಿತ ಉತ್ಸಾಹ ಇತ್ತು’ ಎಂದೂ ಹೇಳಿದ್ದಾರೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದರೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸುವಿರಾ ಎಂಬ ಪ್ರಶ್ನೆಗೆ “ಊಹಾಪೋಹದ ವಿಚಾರಗಳಿಗೆ ಉತ್ತರಿಸುವುದಿಲ್ಲ’ ಎಂದಿದ್ದಾರೆ. ಪಕ್ಷದ ಕಾಯìಕರ್ತರ, ನಾಯಕರ ಒಟ್ಟು ಉದ್ದೇಶ ಬಿಜೆಪಿ ಸರಕಾರವನ್ನು ಕಿತ್ತೂಗೆಯುವುದೇ ಆಗಿದೆ ಎಂದು ಸಿಂಧಿಯಾ ಹೇಳಿದ್ದಾರೆ. ಅದಾದ ಬಳಿಕ ನಾಯಕತ್ವ ಯಾರು ವಹಿಸುತ್ತಾರೆ ಎನ್ನುವುದನ್ನು ನಿರ್ಧರಿಸಲಾಗುತ್ತದೆ ಎಂದಿದ್ದಾರೆ.