ಹರಿದ್ವಾರ: ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯುಂಟಾಗಿ ಕೋವಿಡ್ ರೋಗಿಗಳು ಸಾವನ್ನಪ್ಪುತ್ತಿರುವವರ ಸಂಖ್ಯೆ ಮುಂದುವರೆದಿದೆ. ಭಾನುವಾರ ಕರ್ನಾಟಕದಲ್ಲಿ 24 ಜನರು ಕೊನೆಯುಸಿರೆಳೆದ ಘಟನೆ ಮಾಸುವ ಮುನ್ನವೇ ಇದೀಗ ಹರಿದ್ವಾರದಲ್ಲಿ ಮತ್ತೊಂದು ಅಂತಹದೇ ಘಟನೆ ನಡೆದಿದೆ.
ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದರಿಂದ ಐವರು ಕೋವಿಡ್–19 ರೋಗಿಗಳು ಸಾವಿಗೀಡಾಗಿರುವ ಘಟನೆ ಹರಿದ್ವಾರ ಜಿಲ್ಲೆಯ ರೂರ್ಕಿಯ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ.
ಒಬ್ಬ ರೋಗಿಗೆ ವೆಂಟಿಲೇಟರ್ ನೀಡಲಾಗಿತ್ತು. ಉಳಿದ ನಾಲ್ವರು ಆಮ್ಲಜನಕ ಸೌಲಭ್ಯ ಹೊಂದಿದ್ದ ಹಾಸಿಗೆಯಲ್ಲಿದ್ದರು ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.
ಪ್ರಕರಣದ ಕುರಿತು ತನಿಖೆಗೆ ಆದೇಶಿಸಲಾಗಿದೆ. ಜತೆಗೆ, ಆಸ್ಪತ್ರೆಯಲ್ಲಿನ ವೈದ್ಯಕೀಯ ಸೌಲಭ್ಯಗಳ ಕುರಿತು ಪರಿಶೀಲನೆ ಕೈಗೊಳ್ಳಲು ರೂರ್ಕಿಯ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷರ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಒಂದು ವಾರದಲ್ಲಿ ಈ ತಂಡ ವರದಿ ನೀಡಲಿದೆ ಎಂದು ಹರಿದ್ವಾರ ಜಿಲ್ಲಾಧಿಕಾರಿ ಸಿ. ರವಿಶಂಕರ್ ತಿಳಿಸಿದ್ದಾರೆ. ಈ ಘಟನೆಗೆ ಹೊಣೆಯಾದವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇನ್ನು ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ‍್ಯೆ ಹೆಚ್ಚಾಗುತ್ತಿದೆ. ಇದರ ಜೊತೆಗೆ ಆಕ್ಸಿಜನ್ ಸಹಿತ ಬೆಡ್‍ಗಳ ಕೊರತೆ ಕೂಡ ಎದುರಾಗಿದೆ. ಆಮ್ಲಜನಕದ ಅಭಾವದಿಂದ ಈಗಾಗಲೇ ಸಾಕಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಸಾವುಗಳು ಸಂಭವಿಸಿವೆ.