Advertisement

ಬೆಳಪುವಿನಲ್ಲಿ ಜಿಲ್ಲೆಯ ಪ್ರಥಮ ಆಕ್ಸಿಜನ್‌ ರಿಫಿಲ್ಲಿಂಗ್‌ ಸ್ಥಾವರ

01:32 AM Apr 26, 2021 | Team Udayavani |

ಕಾಪು: ಕೊರೊನಾ ಬಾಧಿತರ ಸಂಖ್ಯೆ ದಿನೇದಿನೆ ಏರುತ್ತಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರಿಗೆ ಅತೀ ಅಗತ್ಯವಾಗಿರುವ ಆಕ್ಸಿಜನ್‌ ಕೊರತೆ ತಲೆದೋರುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಪ್ರಥಮ ಆಕ್ಸಿಜನ್‌ ರಿಫಿಲ್ಲಿಂಗ್‌ ಘಟಕವೊಂದು ಕಾಪು ತಾಲೂಕಿನ ಬೆಳಪುವಿನಲ್ಲಿ ಸ್ಥಾಪನೆಯಾಗಿದೆ.

Advertisement

ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿ ಎಸ್‌.ಎನ್‌. ಕ್ರೈಯೋಜನಿಕ್ಸ್‌ ಪ್ರೈ. ಲಿ. ಸಂಸ್ಥೆಯು ಕೈಗಾರಿಕೆಗೆ ಮತ್ತು ಮೆಡಿಕಲ್‌ ಆಕ್ಸಿಜನ್‌ ಸಿಲಿಂಡರ್‌ಗಳನ್ನು ಸರಬರಾಜು ಮಾಡುವ ಉದ್ದೇಶದೊಂದಿಗೆ ಘಟಕವನ್ನು ಸ್ಥಾಪಿಸಿದೆ. ಯೋಜಿತ ರೀತಿಯಲ್ಲಿ ಲಿಕ್ವಿಡ್‌ ಆಕ್ಸಿಜನ್‌ ಪೂರೈಕೆಯಾದರೆ ಒಂದೆರಡು ದಿನಗಳಲ್ಲೇ ಆಕ್ಸಿಜನ್‌ ಸಿಲಿಂಡರ್‌ಗಳ ಪೂರೈಕೆಯಾಗಲಿದೆ.

ಸ್ವಾವಲಂಬಿ ಉಡುಪಿ
ಪ್ರಸ್ತುತ ಉಡುಪಿ ಜಿಲ್ಲೆಯ ಆಸ್ಪತ್ರೆಗಳು ಮತ್ತು ಕೈಗಾರಿಕೆಗಳು ಬೈಕಂಪಾಡಿ ಮತ್ತು ಕಾರ್ನಾಡ್‌ ಕೈಗಾರಿಕಾ ವಲಯದಲ್ಲಿ ಕಾರ್ಯಾಚರಿಸುತ್ತಿರುವ ಮೂರು ಆಕ್ಸಿಜನ್‌ ಘಟಕಗಳನ್ನು ಅವಲಂಬಿಸಿವೆ. ಬೆಳಪುವಿನ ಘಟಕ ಕಾರ್ಯಾರಂಭಿಸಿದಾಗ ಹೊರ ಜಿಲ್ಲೆಯ ಅವಲಂಬನೆ ಕಡಿಮೆಯಾಗಲಿದೆ.

ಬಳ್ಳಾರಿ, ಬೆಂಗಳೂರಿನಿಂದ ಲಿಕ್ವಿಡ್‌ ಆಕ್ಸಿಜನ್‌ ಪೂರೈಕೆ
ರಿಫಿಲ್ಲಿಂಗ್‌ ಘಟಕಕ್ಕೆ ಬೇಕಾಗುವ ಲಿಕ್ವಿಡ್‌ ಆಕ್ಸಿಜನ್‌ ಅನ್ನು ಬೆಂಗಳೂರು ಮತ್ತು ಬಳ್ಳಾರಿ ಸಮೀಪದ ತೋರಂಗಲ್‌ನಿಂದ ತರಿಸಿಕೊಳ್ಳಲಾಗುತ್ತದೆ. ಏಕಕಾಲಕ್ಕೆ 20 ಸಾವಿರ ಕ್ಯೂಬಿಕ್‌ ಮೀ. ಲಿಕ್ವಿಡ್‌ ಆಕ್ಸಿಜನ್‌ (-180 ಡಿಗ್ರಿ) ತರಿಸಿ ದಾಸ್ತಾನು ಇರಿಸಿಕೊಂಡು ಬಳಿಕ ಗ್ಯಾಸ್‌ ಆಗಿ ಸಂಸ್ಕರಿಸಿ ಸಿಲಿಂಡರ್‌ಗಳಿಗೆ ತುಂಬಲಾಗುತ್ತದೆ.

40ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆ
ಜಿಲ್ಲೆಯ ಉಡುಪಿ, ಮಣಿಪಾಲ, ಕುಂದಾಪುರ, ಬ್ರಹ್ಮಾವರ, ಕಾರ್ಕಳ ಸೇರಿದಂತೆ ಸರಕಾರಿ ಮತ್ತು ಖಾಸಗಿ ವಲಯದ 40ಕ್ಕೂ ಅಧಿಕ ಆಸ್ಪತ್ರೆಗಳಿಗೆ ಬೆಳಪುವಿನಿಂದ ಕಡಿಮೆ ಸಾಗಾಟ ವೆಚ್ಚ ಮತ್ತು ಕಡಿಮೆ ಅವಧಿಯಲ್ಲಿ ಆಕ್ಸಿಜನ್‌ ಪೂರೈಕೆ ಸಾಧ್ಯವಾಗಲಿದೆ ಎಂದು ಸಂಸ್ಥೆಯ ಮುಖ್ಯಸ್ಥ ನಟರಾಜ್‌ ತಿಳಿಸಿದ್ದಾರೆ.

Advertisement

ಬೆಳಪುವಿನಲ್ಲಿ ಆರಂಭಗೊಳ್ಳಲಿರುವ ಜಿಲ್ಲೆಯ ಪ್ರಥಮ ಆಕ್ಸಿಜನ್‌ ರಿಫಿಲ್ಲಿಂಗ್‌ ಘಟಕಕ್ಕೆ ಎಲ್ಲ ಪರವಾನಿಗೆಗಳನ್ನು ನೀಡಲಾಗಿದ್ದು, ಶೀಘ್ರದಲ್ಲೇ ಕಾರ್ಯಾರಂಭಗೊಳ್ಳಲಿದೆ. ಇದರಿಂದ ಜಿಲ್ಲೆಯ ಮೆಡಿಕಲ್‌ ಎಮರ್ಜೆನ್ಸಿಯ ತ್ವರಿತ ನಿರ್ವಹಣೆ ಸಾಧ್ಯವಾಗಲಿದೆ.
– ಸದಾಶಿವ ಪ್ರಭು, ಅಪರ ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next