ಬೆಂಗಳೂರು: ಆಕ್ಸಿಜನ್ ಬೆಡ್ ಸಿಗದೆ ಪರದಾಡುತ್ತಿದ್ದ ಕೋವಿಡ್ ಸೋಂಕಿತನಿಗೆ ಆ್ಯಂಬುಲೆನ್ಸ್‌ನಲ್ಲೇ ಆಕ್ಸಿಜನ್ ವ್ಯವಸ್ಥೆ ಮಾಡುವ ಮೂಲಕ ನಗರದ ಯುವಕರ ತಂಡವೊಂದು ನೆರವಾಗಿದೆ.
ನಗರದ ರಾಯಸಂದ್ರದ ಕೋವಿಡ್ ಸೋಂಕಿತ ವ್ಯಕ್ತಿಯೊಬ್ಬರು ಶುಕ್ರವಾರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಸರಿಯಾದ ಚಿಕಿತ್ಸೆ ನೀಡದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮನೆಗೆ ಕರೆದುಕೊಂಡು ಬಂದಿದ್ದಾರೆ. ನಂತರ ಶನಿವಾರದಿಂದ ಐಸಿಯು ಬೆಡ್‌ಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಎಲ್ಲೂ ಬೆಡ್ ಸಿಕ್ಕಿರಲಿಲ್ಲ.
ಈ ನಡುವೆ ಕೊರೊನಾ ಸೋಂಕಿತನಿಗೆ ತೀವ್ರ ಸ್ವರೂಪದಲ್ಲಿ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದೆ. ಹಾಗಾಗಿ, ಬೇರೆ ದಾರಿ ಕಾಣದ ಕುಟುಂಬಸ್ಥರು ಗರುಡ ಮಾಲ್ ಬಳಿಯ ಕೋವಿಡ್ ಕೇರ್ ಸೆಂಟರ್‌ಗೆ ಕರೆತಂದಿದ್ದರು. ಅಷ್ಟರಲ್ಲಿ ಸೋಂಕಿತನ ಆಕ್ಸಿಜನ್ ಸ್ಯಾಚುರೇಶನ್ ಲೆವಲ್ 82ಕ್ಕೆ ಕುಸಿದಿತ್ತು. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಐಸಿಯು ಬೆಡ್ ಬೇಕೆಂದು ಕುಟುಂಬಸ್ಥರು ಎಲ್ಲೆಡೆ ಅಂಗಲಾಚುತ್ತಿದ್ದರು.
ಇದನ್ನೂ ಓದಿ :ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 130 ಕ್ವಿಂಟಾಲ್ ಅಕ್ಕಿ ಪೊಲೀಸರ ವಶಕ್ಕೆ
ಈ ವಿಷಯ ತಿಳಿದು ನಗರದ ಯತೀಶ್ ಮತ್ತು ತಂಡ ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ತಡರಾತ್ರಿ ರೋಗಿಯನ್ನು ಕೋವಿಡ್ ಕೇರ್ ಸೆಂಟರ್‌ನಿಂದ ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲು ಸಹಾಯ ಮಾಡಿದ್ದಾರೆ. ಆದರೆ, ಕಿಮ್ಸ್‌ನಲ್ಲಿಯೂ ಸೋಂಕಿತನಿಗೆ ಬೆಡ್ ಸಿಕ್ಕಿಲ್ಲ. ಈ ವೇಳೆ ಬೇರೆ ದಾರಿ ಕಾಣದೆ ರಸ್ತೆ ಪಕ್ಕದಲ್ಲೇ ಆ್ಯಂಬುಲೆನ್ಸ್ ನಿಲ್ಲಿಸಿ, ಯತೀಶ್ ಮತ್ತು ತಂಡದವರು ಆಕ್ಸಿಜನ್ ಸಿಲಿಂಡರ್ ಅಳವಡಿಸಿ ರೋಗಿಯ ಪ್ರಾಣ ಉಳಿಸಿದ್ದಾರೆ.
ಆಕ್ಸಿಜನ್ ಬೆಡ್ ಸಿಗದೆ ಪರದಾಡುತ್ತಿದ್ದ ಕೋವಿಡ್ ಸೋಂಕಿತನಿಗೆ ನೆರವಾಗುವ ಮೂಲಕ ಯುವಕರ ತಂಡ ಮಾನವೀಯ ಕಾರ್ಯ ಮಾಡಿದೆ. ಇದಕ್ಕೆ ಸೋಂಕಿತರ ಸಂಬಂಧಿಕರು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.