Advertisement

ಪಾಲಿಕೆ ಆಸ್ಪತ್ರೆ ಗಳಿಗೆ ಆಕ್ಸಿಜನ್‌ ವ್ಯವಸ್ಥೆ

02:53 PM Aug 28, 2020 | Suhan S |

ಬೆಂಗಳೂರು: ಕೋವಿಡ್ ಸೋಂಕು ಕಲಿಸಿದ ಪಾಠದಿಂದಾಗಿ ಬಿಬಿಎಂಪಿ ಹೆರಿಗೆ ಆಸ್ಪತ್ರೆಗಳು, ರೆಫರಲ್‌ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೆಚ್ಚುವರಿ “ಆಕ್ಸಿಜನ್‌’ ಸಿಕ್ಕಂತಾಗಿದೆ.

Advertisement

ನಗರದಲ್ಲಿ ಆಕ್ಸಿಜನ್‌ ವ್ಯವಸ್ಥೆ ಸಿಗದೆ ಸಾರ್ವಜನಿಕರು ಪರದಾಡಿದ್ದು, ಸಕಾಲದಲ್ಲಿ ಆಕ್ಸಿಜನ್‌ ಸೇವೆ ಸಿಗದೆ ಸಾವಿಗೀಡಾದ ಘಟನೆಗಳೂ ನಡೆದಿದ್ದವು. ಇದು ನಗರದ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಬೇಕಾದ ಅನಿ ರ್ವಾಯತೆಯನ್ನು ಸಾಬೀತು ಮಾಡಿದೆ. ಇದರ ಬೆನ್ನಲ್ಲೇ ಪಾಲಿಕೆ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಸೇವೆ ಕಲ್ಪಿಸುವ ಮೂಲಕ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಮುಂದಾಗಿದೆ. ನಗರದ 4 ರೆಫರಲ್‌ ಆಸ್ಪತ್ರೆಗಳು, 20 ಹೆರಿಗೆ ಆಸ್ಪತ್ರೆಗಳಲ್ಲಿ ತಲಾ 5ಆಕ್ಸಿಜನ್‌ ಕಾನ್ಸ್‌ನಟ್ರೇಟರ್‌ (ಹೆಚ್ಚುವರಿ ಆಮ್ಲಜನಕ ವ್ಯವಸ್ಥೆ ಕಲ್ಪಿಸುವ ಸಾಧನ) ವ್ಯವಸ್ಥೆ ಹಾಗೂ 85 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಲಾ 1 ಆಕ್ಸಿಜನ್‌ ಕಾನ್ಸ್‌ನಟ್ರೇಟರ್‌ ವ್ಯವಸ್ಥೆ ಇರುವ ಹಾಸಿಗೆ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಿಕೊಳ್ಳಲಾಗಿದೆ.

ಕೇಂದ್ರೀಕೃತ ಆಕ್ಸಿಜನ್‌ ಸರಬರಾಜು ವ್ಯವಸ್ಥೆ: ನಗರದ 20 ಹೆರಿಗೆ ಆಸ್ಪತ್ರೆ ಹಾಗೂ 4 ರೆಫರಲ್‌ ಆಸ್ಪತ್ರೆಗಳಲ್ಲಿ ಕೇಂದ್ರೀಕೃತ ಆಕ್ಸಿಜನ್‌ ಸೌಲಭ್ಯ ಕಲ್ಪಿಸಲು ಪಾಲಿಕೆ ಯೋಜನೆ ರೂಪಿಸಿಕೊಂಡಿದೆ. ಆಕ್ಸಿಜನ್‌ ವ್ಯವಸ್ಥೆ ಬೇಕಾ ಗಿರುವ ರೋಗಿಗೆ ಅವರು ಇರುವ ಹಾಸಿಗೆಗೆ (ಗ್ಯಾಸ್‌ ಅಥವಾ ವಿದ್ಯುತ್‌ ಪೈಪ್‌ಲೈನ್‌ ರೀತಿ) ಆಕ್ಸಿಜನ್‌ ನೇರ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಇದಾಗಿದೆ. ಈ ಮೂಲಕ ಯಾವುದೇ ತುರ್ತು ಸಂದರ್ಭದಲ್ಲಾದರೂ ವ್ಯಕ್ತಿಯೊಬ್ಬರಿಗೆ ಆಕ್ಸಿಜನ್‌ ಸೇವೆ ಕಲ್ಪಿಸಲು ಸಹಕಾರಿಯಾಗಲಿದೆ.

ಒಟ್ಟು 385 ಹಾಸಿಗೆಗಳಿಗೆ ಆಕ್ಸಿಜನ್‌ ವ್ಯವಸ್ಥೆ: ಪಾಲಿಕೆ ಹೆರಿಗೆ ಆಸ್ಪತ್ರೆ, ರೆಫರಲ್‌ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ ಒಟ್ಟು 385 ಹಾಸಿಗೆಗಳಿಗೆ ಆಕ್ಸಿಜನ್‌ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಈ ಮೂಲಕ ನಗರದಲ್ಲಿ ಮುಂದಿನ ದಿನಗಳಲ್ಲೂ ಪಾಲಿಕೆ ಆಸ್ಪತ್ರೆಗಳಲ್ಲಿ ಸಾರ್ವಜನಿಕರ ಆರೋಗ್ಯ ಸೇವೆಗೆ ಒತ್ತು ನೀಡಲು ಪಾಲಿಕೆ ಮಹತ್ವದ ರೂಪುರೇಷೆ ಹಾಕಿಕೊಂಡಿದೆ.

ಮತ್ತಷ್ಟು ಸಹಕಾರಿ: ಪಾಲಿಕೆ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಸೇವೆ ಕಲ್ಪಿಸುತ್ತಿರುವುದರಿಂದ ಮತ್ತಷ್ಟು ಜನರಿಗೆ ಸೇವೆ ನೀಡಲು ಸಾಧ್ಯವಾಗಲಿದೆ. ಈಗಾಗಲೇ ಕೆಲವು ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ವ್ಯವಸ್ಥೆ ಇದೆಯಾದರೂ, ಹೆಚ್ಚು ಜನರಿಗೆ ನೀಡಲು ಸಾಧ್ಯವಾಗುತ್ತಿರಲಿಲ್ಲ. ಕೆಲವು ನಿರ್ದಿಷ್ಟ ಭಾಗದ ಆಸ್ಪತ್ರೆಗಳಲ್ಲಿ ಮಾತ್ರ ಈ ವಿಶೇಷ ಸೌಲಭ್ಯ ಇದೆ. ಇದೀಗ ಎಲ್ಲಾ ಆಸ್ಪತ್ರೆಗಳಲ್ಲೂ ಇರುವುದರಿಂದ ತಡರಾತ್ರಿ ಯಾರಿಗಾದರೂ ಉಸಿರಾಟದ ಸಮಸ್ಯೆ ಉಂಟಾದರೂ ನೆರವಾಗಲಿದೆ. ಹೆರಿಗೆ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಇನ್ನೂ ಹೆಚ್ಚಿನ ಜನರಿಗೆ ಪಾಲಿಕೆ ಆಸ್ಪತ್ರೆಗಳಲ್ಲೇ ಚಿಕಿತ್ಸೆ ನೀಡಬಹುದು ಎಂದು ಹೆಸರು ಹೇಳಲು ಇಚ್ಛಿಸದ ಪಾಲಿಕೆ ಆರೋಗ್ಯಾಧಿಕಾರಿಯೊಬ್ಬರು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಭವಿಷ್ಯದ ದೃಷ್ಟಿಯಿಂದ ಅಭಿವೃದ್ಧಿ: ಪಾಲಿಕೆ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ವ್ಯವಸ್ಥೆ ಕಲ್ಪಿಸುತ್ತಿರುವ ಸಂಬಂಧ “ಉದಯವಾಣಿ’ಯೊಂದಿಗೆ ಮಾತನಾಡಿದ ವಿಶೇಷ ಆಯುಕ್ತ (ಆರೋಗ್ಯ ಹಾಗೂ ಘನತ್ಯಾಜ್ಯ) ಡಿ.ರಂದೀಪ್‌, ನಗರದಲ್ಲಿನ ಪಾಲಿಕೆ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿಕೊಂಡಿದ್ದೇವೆ. ಸದ್ಯ ಆಕ್ಸಿಜನ್‌ ವ್ಯವಸ್ಥೆ ಕಲ್ಪಿಸುವುದಕ್ಕೆ ಅಂದಾಜು 3ರಿಂದ 4 ಕೋಟಿ ರೂ. ವೆಚ್ಚವಾಗಲಿದೆ. ಪಾಲಿಕೆ ಆಸ್ಪತ್ರೆಗಳಲ್ಲಿನ ಶಸ್ತ್ರಚಿಕಿತ್ಸೆ ಕೊಠಡಿ, ಹೆರಿಗೆ ಕೊಠಡಿ ಹಾಗೂ ತುರ್ತು ಚಿಕಿತ್ಸೆ ಅವಶ್ಯವಿರುವವರಿಗೆ ಶೀಘ್ರ ಆಕ್ಸಿಜನ್‌ ಸೇವೆ ಲಭ್ಯವಾಗಲಿದೆ.

ಸೋಂಕಿತರಿಗೆ ಬೇಕಾದಷ್ಟು ಹಾಸಿಗೆ ಸದ್ಯ ಲಭ್ಯವಿದೆ. ಭವಿಷ್ಯದ ದೃಷ್ಟಿಯಿಂದ ಈ ವ್ಯವಸ್ಥೆ ಮಾಡಿಕೊಂಡಿದ್ದು, ಉಸಿರಾಟ ಹಾಗೂ ಅಸ್ತಮಾ ಸಮಸ್ಯೆ ಇರುವವರಿಗೆ ದೊಡ್ಡ ಆಸ್ಪತ್ರೆಗೆ ಸೇರಿಸುವ ಮುನ್ನ ಹಾಗೂ ಆ್ಯಂಬುಲೆನ್ಸ್‌ ಬರುವವರೆಗೆ ಪಾಲಿಕೆ ಆಸ್ಪತ್ರೆಗಳಲ್ಲಿ ಸೇವೆ ನೀಡಲೂ ಇದು ಸಹಕಾರಿಯಾಗಲಿದೆ ಎಂದು ಮಾಹಿತಿ ನೀಡಿದರು.

 

-ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next