Advertisement

ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಆಮ್ಲಜನಕ ಸಿಲಿಂಡರ್‌!

02:31 PM Jun 19, 2020 | sudhir |

ಲಿಮಾ: ಕೋವಿಡ್‌ನಿಂದಾಗಿ ಜನರು ತತ್ತರಿಸಿದ್ದು, ಹಲವರು ಮಾನವೀಯ ನೆರವಿಗೆ ಯತ್ನಿಸಿದ್ದರೆ ಪೆರುವಿನಲ್ಲಿ ಇದರ ದುರ್ಲಾಭ ಎತ್ತಲು ಆಮ್ಲಜನಕ ಮಾರಾಟಗಾರರು ಮುಂದಾಗಿದ್ದಾರೆ. ಇದರಿಂದ ರೋಗಿಗಳ ಸಂಬಂಧಿಕರು ಪರದಾಡುವಂತಾಗಿದೆ. ಈಗ ಅಲ್ಲಿ ಆಮ್ಲಜನಕ ಸಿಲಿಂಡರ್‌ ಒಂದರ ಬೆಲೆ ಸಾವಿರ ಪಟ್ಟು ಹೆಚ್ಚಾಗಿದ್ದು, ಜೀವ ಉಳಿಸಲು ಬೇರೆ ದಾರಿ ಕಾಣದೆ ಜನ ದುಬಾರಿ ಬೆಲೆ ಕೊಟ್ಟು ಕಾಳಸಂತೆಯಲ್ಲಿ ಖರೀದಿಸುತ್ತಿದ್ದಾರೆ.

Advertisement

ಸರಕಾರಿ ಆಸ್ಪತ್ರೆಗಳಲ್ಲಿ ಬೇಕಾದಷ್ಟು ಆಮ್ಲಜನಕ ಸಿಲಿಂಡರ್‌ ಸಿಗುತ್ತಿಲ್ಲ ಇದರಿಂದ ರೋಗಿಗಳ ಸಂಬಂಧಿಕರು 8 ಕ್ಯೂಬಿಕ್‌ ಮೀಟರ್‌ ಆಮ್ಲಜನಕ ಸಿಲಿಂಡರ್‌ಗೆ ಸುಮಾರು 90 ಸಾವಿರ ರೂ. ವರೆಗೂ ಕೊಡಬೇಕಾಗಿದೆ. ಸಾಮಾನ್ಯವಾಗಿ ಇಂತಹ ಸಿಲಿಂಡರ್‌ಗಳ ಬೆಲೆ 8ರಿಂದ 10 ಸಾವಿರ ರೂ.ವರೆಗೂ ಇದೆ. ಬೇಡಿಕೆ ಇರುವ ಸಂದರ್ಭಗಳಲ್ಲಾದರೆ ಒಂದೆರಡು ಸಾವಿರ ರೂ. ಏರಿಕೆಯಾಗಬಹುದು. ಆದರೆ ಇದು 1 ಸಾವಿರ ಪಟ್ಟು ಏರಿಕೆಯಾಗಿದ್ದು, ಅಮಾನವೀಯ ಎಂದು ಪೆರುವಿನ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಸಂಬಂಧಿಕರನ್ನು ಉಳಿಸಿಕೊಳ್ಳಲೇ ಬೇಕೆಂಬ ಪ್ರಯತ್ನದಿಂದ ಚಿಕಿತ್ಸೆಗೆ ಸಾಲ, ಆಮ್ಲಜನಕ ಖರೀದಿಗೂ ಸಾಲ ಮಾಡಲು ಮುಂದಾಗಿದ್ದಾರೆ.

ಪೆರುವಿನ ಆರೋಗ್ಯ ಸಚಿವರು ಹೇಳುವಂತೆ ದೇಶದಲ್ಲಿ ಈಗ ನಿತ್ಯ 180 ಟನ್‌ ಆಮ್ಲಜನಕದ ಕೊರತೆ ಇದೆಯಂತೆ. ಇದಕ್ಕಾಗಿ ವಿದೇಶಗಳಿಂದ ಪ್ಲ್ರಾಂಟ್‌ಗಳನ್ನು ಆಮದು ಮಾಡಲು 28 ಲಕ್ಷ ಡಾಲರ್‌ನ ಪ್ಯಾಕೇಜ್‌ ಘೋಷಿಸಲಾಗಿದೆ. ಆಸ್ಪತ್ರೆಗಳ ಆಕ್ಸಿಜನ್‌ ಪ್ಲ್ರಾಂಟ್‌ಗಳನ್ನು ನಿರ್ವಹಣೆ ಮಾಡದ್ದರಿಂದ ಸಮಸ್ಯೆ ಬಿಗಡಾಯಿಸಲು ಕಾರಣವಾಗಿದೆ.

ರೋಗಿಗಳ ಸಂಬಂಧಿಕರು ಆಸ್ಪತ್ರೆಗಳಲ್ಲಿದ್ದಾಗ, ಮನೆಯಲ್ಲಿದ್ದಾಗಲೂ ಸಿಲಿಂಡರ್‌ ಬಳಸುತ್ತಿದ್ದಾರೆ. ಇದಕ್ಕಾಗಿ ಅವರು ಸ್ವಂತಕ್ಕೆಂದು ಸಿಲಿಂಡರ್‌ ಖರೀದಿಸಿದ್ದು, ಅದನ್ನು ತುಂಬಿಕೊಳ್ಳುವಲ್ಲಿಯೂ ದೊಡ್ಡ ಸರತಿ ಸಾಲು ಇದೆ. ಮನೆಯವರು, ಸಂಬಂಧಿಕರು ಕ್ಯೂ ನಿಂತು, ದುಬಾರಿ ಹಣ ಕೊಟ್ಟು ಸಿಲಿಂಡರ್‌ ತೆಗೆದುಕೊಂಡು ಬರಬೇಕಾದ ದುಸ್ಥಿತಿ ಅಲ್ಲಿನವರದ್ದು. ಪೆರುವಿನಲ್ಲಿ ನಿತ್ಯ 4 ಸಾವಿರ ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿದ್ದು, ಇದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡಲು ಕಾರಣವಾಗಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next