ಬೆಂಗಳೂರು:ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆಯಿಂದ ನೂರಾರು ಜನರು ಮೃತಪಟ್ಟ ಪ್ರಕರಣದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಸರಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದು, ಪ್ರತಿ ದಿನ 187 ಟನ್ ಆಮ್ಲಜನಕ ಉತ್ಪಾದನಾ ಸಾಮರ್ಥ್ಯ ಗಳಿಸಿದೆ.
ಸಂಭಾವ್ಯ ಮೂರನೇ ಅಲೆಯನ್ನು ಎದುರಿಸಲು ಸಕಲ ಸಿದ್ದತೆ ಮಾಡಿಕೊಳ್ಳುತ್ತಿರುವ ಆರೋಗ್ಯ ಇಲಾಖೆ ಈ ಬಾರಿ ಆಮ್ಲಜನಕದ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ಎಚ್ಚರಿಕೆ ವಹಿಸಿದೆ.
ಹೀಗಾಗಿ ಜಿಲ್ಲೆಗಳಲ್ಲೇ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸಲಾಗಿದ್ದು, ಪ್ರತಿ ದಿನ 187 ಟನ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ರಾಜ್ಯಕ್ಕೆ ಒಟ್ಟು 262 ಆಮ್ಲಜನಕ ತಯಾರಿಕಾ ಘಟಕವನ್ನು ಕೇಂದ್ರ ಸರಕಾರ ಹಂಚಿಕೆ ಮಾಡಿದೆ. 224ಕ್ಕೆ ಒಪ್ಪಿಗೆ ಲಭಿಸಿದ್ದು, 190 ಘಟಕಗಳು ನಾನಾ ಜಿಲ್ಲೆಗಳಲ್ಲಿ ಸ್ಥಾಪನೆಯಾಗಿದೆ.
ಈ ಘಟಕಗಳ ನಿರ್ವಹಣೆಗಾಗಿ ಒಟ್ಟು 245 ಜನರಿಗೆ ತರಬೇತಿ ನೀಡಲಾಗಿದೆ. ಕೇಂದ್ರ ಆರೋಗ್ಯ ಇಲಾಖೆ ಸಿಬ್ಬಂದಿ ಡಿಸೆಂಬರ್ ಮೊದಲ ವಾರದಲೇ ತಾಂತ್ರಿಕ ನೌಕರರು, ವೈದ್ಯ, ಅರೆವೈದ್ಯ, ನರ್ಸ್ ಹಾಗೂ ಪ್ಯಾರಾ ಮೆಡಿಕಲ್ ಸಿಬ್ಬಂದಿ ಕೌಶಲ್ಯ ತರಬೇತಿಯನ್ನು ನೀಡಿದ್ದಾರೆ. ಹೀಗಾಗಿ ಈ ಬಾರಿ ಆಮ್ಲಜನಕ ಕೊರತೆಯ ಸಮಸ್ಯೆ ಉದ್ಭವವಾಗಲಾರದು ಎಂಬ ವಿಶ್ವಾಸವನ್ನು ಆರೋಗ್ಯ ಇಲಾಖೆ ಹೊಂದಿದೆ.