Advertisement

ಆದಾಯ ಸಂಗ್ರಹಕ್ಕೆ ಸ್ವಂತ ತೆರಿಗೆಯೊಂದೇ ಮಾರ್ಗ

11:39 PM Feb 26, 2022 | Team Udayavani |

ಬೆಂಗಳೂರು: ಕೇಂದ್ರದ ತೆರಿಗೆ ಹಂಚಿಕೆ ಹಾಗೂ ಸಹಾಯಾನುಧಾನ ಕಡಿಮೆಯಾಗುತ್ತಿರುವುದು, ಜಿಎಸ್‌ಟಿ ಪರಿಹಾರ ಸ್ಥಗಿತದ ಆತಂಕ ಹಿನ್ನೆಲೆಯಲ್ಲಿ ಮುಂದಿನ ವರ್ಷ ರಾಜ್ಯದ ತೆರಿಗೆ ಹಾಗೂ ತೆರಿಗೆಯೇತರ ಬಾಬ್ತುಗಳಿಂದಲೇ ಹೆಚ್ಚು ವರಮಾನ ಸಂಗ್ರಹಿಸುವ ಸವಾಲು ಎದುರಾಗಿದೆ.

Advertisement

ವಾಣಿಜ್ಯ ತೆರಿಗೆ, ಅಬಕಾರಿ, ನೋಂದಣಿ ಮತ್ತು ಮುದ್ರಾಂಕ ಹಾಗೂ ಮೋಟಾರು ವಾಹನ ಇಲಾಖೆ ಗಳಿಗೆ 2022-23ನೇ ಸಾಲಿನ ಬಜೆಟ್‌ನಲ್ಲಿ ಹೆಚ್ಚು ಸಂಪನ್ಮೂಲ ಕ್ರೋಡೀ ಕರಿಸುವ ಟಾರ್ಗೆಟ್‌ ನೀಡಲು ಸರಕಾರ ನಿರ್ಧರಿಸಿದೆ.

ತೆರಿಗೆ ಹಾಗೂ ತೆರಿಗೆಯೇತರ ಆದಾಯದ ಮೂಲಕ ಪ್ರಸಕ್ತ ಆರ್ಥಿಕ ವರ್ಷಕ್ಕಿಂತ 7 ಸಾವಿರ ಕೋಟಿ ರೂ. ಹೆಚ್ಚುವರಿ ತೆರಿಗೆ ಸಂಗ್ರಹಕ್ಕೆ ಗುರಿ ನೀಡಲು ತೀರ್ಮಾನಿಸಲಾಗಿದ್ದು, ಆ ಪೈಕಿ ಅಬಕಾರಿ ಇಲಾಖೆಗೆ 3 ಸಾವಿರ ಕೋಟಿ ರೂ. ಹೆಚ್ಚುವರಿ ಗುರಿ ನಿಗದಿ ಯಾಗಲಿದೆ ಎನ್ನಲಾಗಿದೆ.

2021-22ನೇ ಸಾಲಿನಲ್ಲಿ ತೆರಿಗೆ ಸಂಗ್ರಹ ಪ್ರಮಾಣ ಜನವರಿ ಅಂತ್ಯಕ್ಕೆ ಒಟ್ಟಾರೆ ಶೇ.86ರಷ್ಟು ಸಾಧನೆಯಾ ಗಿದ್ದು, ಮಾರ್ಚ್‌ ಅಂತ್ಯಕ್ಕೆ ಅಬಕಾರಿ ವಲಯದಿಂದ ಶೇ.100ರಷ್ಟು ಹಾಗೂ ಇತರ ವಲಯದಲ್ಲಿ ಶೇ.95ರ ವರೆಗೂ ಸಂಗ್ರಹದ ನಿರೀಕ್ಷೆಯಿದ್ದು, ಬಹುತೇಕ ನಿಗದಿತ ಗುರಿ ತಲುಪುವ ನಿರೀಕ್ಷೆಯಿದೆ.

ಮುಂದಿನ ಆರ್ಥಿಕ ವರ್ಷದಲ್ಲಿ ಹೆಚ್ಚಿನ ವರಮಾನ ಸಂಗ್ರಹಕ್ಕೆ ಟಾರ್ಗೆಟ್‌ ನೀಡಲೇಬೇಕಾದ ಅನಿವಾ ರ್ಯತೆ ಇದೆ. ಇಲ್ಲದಿದ್ದರೆ ಸಬ್ಸಿಡಿ, ಸಾಲದ ಕಂತು, ಬಡ್ಡಿ ಪಾವತಿ, ಹಾಲಿ ಯೋಜನೆಗಳ ಮುಂದುವರಿಕೆಗೆ ಹಣಕಾಸು ಹೊಂದಾಣಿಕೆ ಮಾಡು ವುದು ಕಷ್ಟವಾಗಲಿದೆ ಎಂದು ವಿತ್ತ ಇಲಾಖೆ ಮೂಲಗಳು ತಿಳಿಸುತ್ತವೆ.

Advertisement

ಹೆಚ್ಚಿನ ಅನುದಾನಕ್ಕೆ ಬೇಡಿಕೆ
ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಇಲಾಖೆಗಳ ಅನುದಾನದಲ್ಲಿ ಶೇ.25ರಿಂದ 50ರ ವರೆಗೂ ಕಡಿತ ಮಾಡಲಾಗಿತ್ತು. ಈ ಬಾರಿ ಪ್ರತಿ ಇಲಾಖೆಗಳಿಂದ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಇಡಲಾಗಿದೆ.
ಪ್ರಮುಖವಾಗಿ ಜಲಸಂಪನ್ಮೂಲ, ಶಿಕ್ಷಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ಕೃಷಿ ಮತ್ತು ತೋಟಗಾರಿಕೆ, ಕಂದಾಯ ಇಲಾಖೆಗಳಿಂದ 10 ರಿಂದ 15 ಸಾವಿರ ಕೋಟಿ ರೂ. ಹೆಚ್ಚುವರಿ ಅನುದಾನಕ್ಕೆ ಬೇಡಿಕೆಯಿದೆ ಎನ್ನಲಾಗಿದೆ.

ಮುಂದಿನ ವರ್ಷ ಚುನಾವಣೆ ಇರುವುದರಿಂದ ಕ್ಷೇತ್ರಗಳಲ್ಲಿ ಬಾಕಿ ಇರುವ ಯೋಜನೆ ಗಳನ್ನು ಪೂರ್ಣಗೊಳಿಸಲು ಶಾಸಕರೂ ಅನುದಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಇದು ಮುಖ್ಯಮಂತ್ರಿಗೆ ತಲೆನೋವಾ ಗಿದೆ. 2021-22ನೇ ಸಾಲಿನ ಬಜೆಟ್‌ನಲ್ಲಿ ಸ್ವಂತ ತೆರಿಗೆ ಹಾಗೂ ತೆರಿಗೆಯೇತರ ವಲಯದಿಂದ 1,16,764 ಕೋಟಿ ರೂ. ವರಮಾನ ನಿರೀಕ್ಷಿಸಲಾಗಿತ್ತು. ಜನವರಿ ಅಂತ್ಯಕ್ಕೆ 1,00,417.04 ಕೋಟಿ ರೂ. ಸಂಗ್ರಹವಾಗಿದೆ. ಈ ಪೈಕಿ ಅಬಕಾರಿ ವಲಯದಿಂದ 24,580 ಕೋಟಿ ರೂ. ಗುರಿ ಪೈಕಿ 22 ಸಾವಿರ ಕೋಟಿ ರೂ.ವರೆಗೂ ಸಂಗ್ರಹವಾಗಿದ್ದು ಶೇ.100ರಷ್ಟು ಗುರಿ ಸಾಧನೆ ನಿರೀಕ್ಷೆಯಿದೆ. ಹೀಗಾಗಿ, ಈ ಬಾರಿ 27,500 ಸಾವಿರ ಕೋಟಿ ರೂ. ಗುರಿ ನಿಗದಿಪಡಿಸುವ ಸಾಧ್ಯತೆಯಿದೆ.

ಮುಖ್ಯಮಂತ್ರಿಗೂ ಸವಾಲು
2021-22ನೇ ಸಾಲಿನಲ್ಲಿ ಕೇಂದ್ರದ ತೆರಿಗೆ ಹಂಚಿಕೆ ಹಾಗೂ ಕೇಂದ್ರದ ಸಹಾಯಾನುಧಾನ ಕ್ರಮವಾಗಿ ಡಿಸೆಂಬರ್‌ ಅಂತ್ಯಕ್ಕೆ ಶೇ.67.68 ಹಾಗೂ 69.88ರಷ್ಟು ಮಾತ್ರ ಲಭಿಸಿದ್ದು, ಜಿಎಸ್‌ಟಿ ಪರಿಹಾರದಲ್ಲೂ ಕಡಿತವಾಗಿದೆ. ಇದರ ನಡುವೆ, 2017ರಿಂದ ಆರಂಭವಾಗಿರುವ ಜಿಎಸ್‌ಟಿ ಪರಿಹಾರ 2022ಕ್ಕೆ ಅಂತ್ಯಗೊಳ್ಳುವ ಆತಂಕವೂ ಇದೆ. ವಿಸ್ತರಣೆಗೆ ರಾಜ್ಯ ಸರಕಾರಗಳು ಮನವಿ ಮಾಡಿದೆಯಾದರೂ ಕೇಂದ್ರ ಸಮ್ಮತಿ ಸೂಚಿಸಿಲ್ಲ. ಹೀಗಾಗಿ, ಒಂದೊಮ್ಮೆ ಜಿಎಸ್‌ಟಿ ಪರಿಹಾರ ಸ್ಥಗಿತಗೊಂಡರೆ ಬಹುದೊಡ್ಡ ಹೊರೆ ಬೀಳಲಿದ್ದು, ಸಾಲಕ್ಕೆ ಶರಣಾಗಬೇಕಾಗುತ್ತದೆ. ಚೊಚ್ಚಲ ಬಜೆಟ್‌ ಮಂಡಿಸಲು ಸಜ್ಜಾಗುತ್ತಿರುವ ಬಸವರಾಜ ಬೊಮ್ಮಾಯಿ ಅವರಿಗೂ ಇದು ಸವಾಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next