ನವದೆಹಲಿ: ಕೋಮು ದ್ವೇಷದ ಸಂದೇಶಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದರುವುದಕ್ಕಾಗಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಬಿಜೆಪಿಯ ಮಾಜಿ ಪದಾಧಿಕಾರಿಗಳಾದ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವಿವಿಧ ಗುಂಪುಗಳನ್ನು ಪ್ರಚೋದಿಸಿದ್ದು, ಸಾರ್ವಜನಿಕ ನೆಮ್ಮದಿಯ ನಿರ್ವಹಣೆಗೆ ಹಾನಿಕಾರಕ ಸನ್ನಿವೇಶಗಳನ್ನು ಸೃಷ್ಟಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ಗುರುವಾರ ವರದಿ ಮಾಡಿದೆ.
ವಿಶೇಷ ಘಟಕದಿಂದ ನೋಂದಾಯಿಸಲಾದ ಎಫ್‌ಐಆರ್‌ನಲ್ಲಿ ಹಿರಿಯ ಪತ್ರಕರ್ತೆ ಸಬಾ ನಖ್ವಿ ಮತ್ತು ಪುರೋಹಿತ ಯತಿ ನರಸಿಂಹಾನಂದ ಅವರ ಹೆಸರು ಕೂಡ ಸೇರಿದೆ.
ಬಂಧನಕ್ಕೆ ಮಮತಾ ಬ್ಯಾನರ್ಜಿ ಒತ್ತಾಯ
ದೇಶದ ಏಕತೆಗೆ ಭಂಗ ಬಾರದಂತೆ ಹಾಗೂ ಜನರು ಮಾನಸಿಕವಾಗಿ ಸಂಕಟಕ್ಕೆ ಒಳಗಾಗದಂತೆ ಬಿಜೆಪಿಯ ಆರೋಪಿಗಳಾಗಿರುವ ಬಿಜೆಪಿ ನಾಯಕರನ್ನು ಕೂಡಲೇ ಬಂಧಿಸಬೇಕೆಂದು ನಾನು ಬಲವಾಗಿ ಕೋರುತ್ತೇನೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿ ಒತ್ತಾಯಿಸಿದ್ದಾರೆ.
ಕೆಲವು ವಿನಾಶಕಾರಿ ಬಿಜೆಪಿ ನಾಯಕರ ಇತ್ತೀಚಿನ ಹೇಯ ಮತ್ತು ಕ್ರೂರ ದ್ವೇಷದ ಹೇಳಿಕೆಗಳನ್ನು ನಾನು ಖಂಡಿಸುತ್ತೇನೆ, ಇದರ ಪರಿಣಾಮವಾಗಿ ಹಿಂಸಾಚಾರದ ಹರಡುವಿಕೆ ಮಾತ್ರವಲ್ಲದೆ, ಶಾಂತಿ ಮತ್ತು ಸೌಹಾರ್ದದ ಭಂಗಕ್ಕೆ ಕಾರಣವಾಗುತ್ತದೆ. ದೇಶದ ವಿಭಜನೆಗೆ ಕಾರಣವಾಗುತ್ತದೆ ಎಂದು ಇನ್ನೊಂದು ಟ್ವೀಟ್ ನಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.
ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರನ್ನು ಈಗಾಗಲೇ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿದೆ.