Advertisement

ರಾತ್ರೋರಾತ್ರಿ ಅಕ್ರಮ ಮಳಿಗೆ, ಕಂಪೌಂಡ್ ನಿರ್ಮಾಣ; ತೆರವಿಗೆ ಮುಂದಾದ ನಗರಸಭೆ ಅಧಿಕಾರಿಗಳು

11:38 AM Dec 11, 2023 | Team Udayavani |

ಹುಣಸೂರು: ನಗರದ ಕಲ್ಪತರು ವೃತ್ತದ ಬಳಿಯ ಖಾಲಿ ನಿವೇಶನದಲ್ಲಿ ರಾತ್ರೋರಾತ್ರಿ ಅಕ್ರಮ ಮಳಿಗೆ ಮತ್ತು ಕಂಪೌಂಡ್ ನಿರ್ಮಿಸಲಾಗಿದೆ.

Advertisement

ಈ ನಿವೇಶನ ಕೋಟ್ಯಾಂತರ ರೂ. ಬೆಲೆ ಬಾಳುವ ಜೊತೆಗೆ ಹೆದ್ದಾರಿ ತಿರುವಿನಲ್ಲಿರುವುದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಕೂಡಾ ಅಕ್ರಮವಾಗಿ ಬೇಲಿ ಹಾಕುತ್ತಿದ್ದಾರೆಂದು ನಗರಸಭೆಯವರಿಗೆ ತೆರವುಗೊಳಿಸಲು ಪತ್ರ ಬರೆದಿದ್ದರು.

ಈ ನಡುವೆ ಹುಣಸೂರಿನ ನ್ಯಾಯಾಲಯದಲ್ಲೂ ನಗರಸಭೆ ಹಾಗೂ ಮಾಲಿಕರೆಂದು ಹೇಳಿಕೊಳ್ಳುತ್ತಿರುವ ಹೆಬ್ಸೂರ್ ರೆಹಮಾನ್, ಷರೀಪ್ ಕಂಪೌಂಡ್ ನಿರ್ಮಿಸಲು ಮುಂದಾಗಿದ್ದರು. ಇಲ್ಲಿ ಆಟೋ ಚಾಲಕರು ಹಾಗೂ ಕೆಲ ಸಂಘಟನೆಗಳವರು ದೂರು ನೀಡಿದ್ದರ ಮೇರೆಗೆ ನಿರ್ಮಿಸದಂತೆ ಎಚ್ಚರಿಕೆ ನೀಡಿದ್ದರು. ಆದರೂ ಸಹ ಮತ್ತೆ ನಿರ್ಮಿಸಲು ಮುಂದಾಗಿದ್ದರಿಂದ ಈ ಸಂಬಂಧ ವಕೀಲರೊಬ್ಬರು ನ್ಯಾಯಾಲಯದಿಂದ ಖಾಯಂ ನಿರ್ಭಂದಕಾಜ್ಷೆ (ತಡೆಯಾಜ್ಞೆ) ತಂದು ಹಾಜರುಪಡಿಸಿದ್ದರಿಂದಾಗಿ ಕಂಪೌಂಡ್ ನ್ನು ಹಿಂದಿನ ಪೌರಾಯುಕ್ತೆ ಮಾನಸ ಹಾಗೂ ಅಧಿಕಾರಿಗಳ ತಂಡ ತೆರವುಗೊಳಿಸಿ ಎಚ್ಚರಿಕೆ ನೀಡಿದ್ದರು. ಆದರೆ ಶನಿವಾರ ಮದ್ಯರಾತ್ರಿ  ಮತ್ತೆ ಆಟೋ ನಿಲ್ದಾಣದ ಬಳಿ ಜಂಕ್‌ಶೀಟ್‌ನ ದೊಡ್ಡ  ಮಳಿಗೆ ಮತ್ತು ಸಿಮೆಂಟ್ ಕಂಪೌಂಡ್ ನಿರ್ಮಿಸಿದ್ದಾರೆ.

ವಿಷಯ ತಿಳಿದ ನಗರಸಭೆ ಪ್ರಭಾರ ಪೌರಾಯುಕ್ತೆ ಶರ್ಮಿಳಾ, ಆರ್.ಐ.ಆದ ಮಧುಸೂಧನ್  ಸಿಬ್ಬಂದಿಗಳೊಂದಿಗೆ ಸ್ಥಳಕ್ಕಾಗಮಿಸಿ ಅಕ್ರಮ ನಿರ್ಮಾಣ ತೆರವುಗೊಳಿಸಲು ಮುಂದಾಗುತ್ತಿದ್ದಂತೆ ನಮ್ಮ ಜಾಗದಲ್ಲಿ ಮಳಿಗೆ, ಕಂಪೌಂಡ್ ನಿರ್ಮಿಸಿಕೊಂಡಿದ್ದೇವೆಂದು ಸುಮಾರು ಗಂಟೆಗೂ ಹೆಚ್ಚು ಕಾಲ ವಾದಿಸಿದರಲ್ಲದೆ  ಮಾತಿನ ಚಕಮಕಿಯೂ ನಡೆಯಿತು.

Advertisement

ಬೆರಳೆಣಿಕೆಯಲ್ಲಿದ್ದ ಪೊಲೀಸರಿಂದ ನಿಯಂತ್ರಣ ಕಷ್ಟಸಾಧ್ಯವಾಗಿತ್ತು. ಈ ವೇಳೆ ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿ ನೀವು ಯಾರದೋ ಮಾತು ಕೇಳಿ ಬಂದಿದ್ದೀರಾ, ಇಲ್ಲಿ ಹಣಕ್ಕಾಗಿ ಕೆಲವು ವ್ಯಕ್ತಿಗಳು ನಿತ್ಯ ಪೋನ್ ಮಾಡುತ್ತಿದ್ದಾರೆ, ಬೆದರಿಕೆ ಇದೆ. ಈ ನಡುವೆ ನಮ್ಮ ಆಸ್ತಿ ಉಳಿಸಿಕೊಳ್ಳುವುದು ತಪ್ಪಾ ಎಂದು ಕೆಲವರು ಅಧಿಕಾರಿಗಳನ್ನೇ ತರಾಟೆ ತೆಗೆದುಕೊಂಡರು.

ಪಕ್ಕದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸಿರೆಂದು ಪಟ್ಟು ಹಿಡಿದರು. ಈ ವೇಳೆ ಪೌರಾಯುಕ್ತೆ ಶರ್ಮಿಳ ನಿಮ್ಮಿಂದಲೇ ಅದು ಶುರುವಾಗಲಿ. ಇಷ್ಟಕ್ಕೆ ನಿಲ್ಲಿಸಿ, ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಡೆದು ಕ್ರಮವಹಿಸಲಾಗುವುದೆಂದು ಎಚ್ಚರಿಸಿದ ನಂತರ ನಗರಸಭೆ ಜೆಸಿಬಿ ವಾಪಾಸ್ಸಾಯಿತು.

ಕಂಪೌಂಡ್ ತೆರವುಗೊಳಿಸುವ ವಿಚಾರ ನಗರದಲ್ಲಿ ಹರಡುತ್ತಿದ್ದಂತೆ ಸ್ಥಳದಲ್ಲಿ  ನೂರಾರು ಮಂದಿ ಜಮಾಯಿಸಿದ್ದರಿಂದಾಗಿ ಸಂಚಾರ ಅಸ್ತವ್ಯಸ್ತವಾಗಿತ್ತು. ಪೊಲೀಸರು ನಿಯಂತ್ರಿಸಲು ಹರಸಾಹಸಪಟ್ಟರು. ಹೆಚ್ಚಿನ ಸಂಖ್ಯೆಯಲ್ಲಿ ಜನರು ನೆರೆದಿದ್ದರಿಂದಾಗಿ ನಗರಸಭೆ ಅಧಿಕಾರಿಗಳು ಸಹ ಯಾವುದೇ ಕ್ರಮ ಕೈಗೊಳ್ಳದೆ ವಾಪಸ್ಸಾದರು.

Advertisement

Udayavani is now on Telegram. Click here to join our channel and stay updated with the latest news.

Next