Advertisement

ಉಕ್ಕಿ ಹರಿದ ಹಳ್ಳಗಳು: ಹಟ್ಟಿ-ಗುಡದನಾಳ ಸಂಪರ್ಕ ಕಡಿತ

02:57 PM Oct 17, 2017 | Team Udayavani |

ಹಟ್ಟಿ ಚಿನ್ನದ ಗಣಿ: ಕಳೆದ ಎರಡು ದಿನಗಳಿಂದ ಹಟ್ಟಿ ಸುತ್ತಮುತ್ತ ಸುರಿದ ಭಾರೀ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಸೇತುವೆ ಮುಳುಗಡೆಯಾಗಿ ಗ್ರಾಮೀಣ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹಟ್ಟಿ-ಗುರುಗುಂಟಾ ಮುಖ್ಯ ರಸ್ತೆ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಮಾರ್ಗ ಮಧ್ಯದ ಕೋಠಾ ಗ್ರಾಮದ ಬಳಿ ಹಾಗೂ ಗುಡದನಾಳ ಗ್ರಾಮದ ಹಳ್ಳಗಳು ಉಕ್ಕಿ ಹರಿದ ಪರಿಣಾಮ ಸೇತುವೆ ಮುಳುಗಡೆಯಾಗಿದೆ. ಪರಿಣಾಮ ಸೇತುವೆ ಮೇಲೆ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ. ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು, ಹಳ್ಳದ ಎರಡೂ ಕಡೆಯ ಗ್ರಾಮಗಳ ಗ್ರಾಮಸ್ಥರು ಪರದಾಡುವಂತಾಗಿದೆ. 

Advertisement

ತೀವ್ರ ಸಮಸ್ಯೆ: ಗುಡದನಾಳ ಗ್ರಾಮದಿಂದ ಹಟ್ಟಿ ಹಾಗೂ ಲಿಂಗಸುಗೂರಿಗೆ ಮತ್ತು ಕೋಠಾ ಗ್ರಾಮದಿಂದ ಗುರುಗುಂಟಾ ಹಾಗೂ ಹಟ್ಟಿಗೆ ನಿತ್ಯ ನೂರಾರು ವಿದ್ಯಾರ್ಥಿಗಳು, ಚಿನ್ನದಗಣಿ ಕಂಪನಿ ಕಾರ್ಮಿಕರು ಆಗಮಿಸುತ್ತಾರೆ. ಈ ಮಾರ್ಗದಲ್ಲಿ ಸೇತುವೆ ಮುಳುಗಡೆ ಆಗಿ ವಾಹನ ಸಂಚಾರ ಸ್ಥಗಿತಗೊಂಡಿದ್ದರಿಂದ ಪರದಾಡು ವಂತಾಗಿದೆ. 

ಸೇತುವೆ ಎತ್ತರಿಸಲು ಆಗ್ರಹ: ಕೋಠಾ ಗ್ರಾಮದ ಬಳಿಯ ಹಳ್ಳದ ಸೇತುವೆಗೆ ಬೋಂಗಾ ಬಿದ್ದಿದೆ. ವಾಹನ ಚಾಲಕರು ಈ
ಸೇತುವೆ ಮೇಲೆ ಜೀವ ಭಯದಲ್ಲೇ ವಾಹನ ಚಲಾಯಿಸುವಂತಾಗಿದೆ. ಸೇತುವೆಗೆ ಬೋಂಗಾ ಬಿದ್ದು ತಿಂಗಳುಗಳೇ ಕಳೆದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ದುರಸ್ತಿಗೆ ಮುಂದಾಗಿಲ್ಲ. ಇದೀಗ ಇದೇ ಸೇತುವೆ ಮುಳುಗಡೆಯಾಗಿದ್ದು, ಸೇತುವೆ ಮತ್ತಷ್ಟು ಹದಗೆಟ್ಟಿರುವ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ.

ಕೋಠಾ ಬಳಿ ಹಳ್ಳ ತುಂಬಿ ಹರಿದರೆ ಸೇತುವೆ ಮುಳುಗಡೆ ಆಗಿ ವಾಹನ ಸಂಚಾರ ಸ್ಥಗಿತಗೊಳ್ಳುತ್ತದೆ. ಈ ಸೇತುವೆಯನ್ನು ಎತ್ತರಿಸಲು ಹಲವು ಬಾರಿ ಹೋರಾಟ ಮಾಡಿ ಮನವಿ ಸಲ್ಲಿಸಿದರೂ ಗ್ರಾಮ ಪಂಚಾಯತಿ, ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಇದಲ್ಲದೇ ಶಾಸಕರು ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೋಂಗಾ ಬಿದ್ದು ಹಾಳಾಗಿರುವ ಸೇತುವೆ ದುರಸ್ತಿ ಕಾರ್ಯ ಕೈಗೊಳ್ಳುವ ಜೊತೆಗೆ ಇದನ್ನು ಎತ್ತರಿಸಬೇಕು. ಇಲ್ಲದಿದ್ದರೆ ಪ್ರಗತಿಪರ, ವಿದ್ಯಾರ್ಥಿ ಸಂಘಟನೆಗಳೊಂದಿಗೆ ತೀವ್ರ ಹೋರಾಟ ಮಾಡಲಾಗುವುದೆಂದು ಮಲ್ಲೇಶ ಮ್ಯಾಗೇರಿ, ಮಲ್ಲಿಕಾರ್ಜುನ ಚಿತ್ರನಾಳ, ವಿನೋದಕುಮಾರ, ಮಲ್ಲಿಕಾರ್ಜುನ ಎಚ್ಚರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next