Advertisement

ಅತಿಕ್ರಮಣ ತೆರವು ನಿಲ್ಲಲ್ಲ: ಡಾ|ಚರಂತಿಮಠ

06:44 PM Jun 15, 2021 | Team Udayavani |

ಬಾಗಲಕೋಟೆ: ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಯಾವುದೇ ಕಾರಣಕ್ಕೂ ಸ್ಲಂ (ಕೊಳಚೆ ಪ್ರದೇಶ) ಗಳನ್ನು ಬೆಳೆಯಲು ಬಿಡಲ್ಲ. ಬದಲಾಗಿ ಅವುಗಳನ್ನು ಎಲ್ಲ ಬಡಾವಣೆಗಳಂತೆ ಅಭಿವೃದ್ಧಿಪಡಿಸುವುದು ನಮ್ಮ ಗುರಿ. ಅತಿಕ್ರಮಣ ತೆರವು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಮಾಜಿ ಸಚಿವ ಮೇಟಿ ಅವರು ಐದು ವರ್ಷ ಊರು ಉದ್ಧಾರ ಮಾಡುವ ಬದಲು, ಸ್ಲಂ ಬೆಳೆಸುವ ಕೆಲಸ ಮಾಡಿದ್ದಾರೆ. ಅವರು ಹೋರಾಟ ನಡೆಸಿದರೂ ಅತಿಕ್ರಮಣ ತೆರವು ಮುಂದುವರಿಯಲಿದೆ ಎಂದು ಬಿಟಿಡಿಎ ಅಧ್ಯಕ್ಷರೂ ಆಗಿರುವ ಶಾಸಕ ಡಾ|ವೀರಣ್ಣ ಚರಂತಿಮಠ ಹೇಳಿದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಅನಧಿಕೃತ ಕಟ್ಟಡ ತೆರವು ಕಾರ್ಯ ಮುಂದುವರೆಯಲಿದೆ. ಈಗಾಗಲೇ ಎರಡು ದಿನಗಳ ಹಿಂದೆ ಅತಿಕ್ರಮಣ ತೆರವು ಮಾಡಿದ ಪ್ರದೇಶದ ಜನರಿಗೆ 16 ಬಾರಿ ಹೇಳಿದರೂ ಕೇಳಿರಲಿಲ್ಲ. ಕೊರೊನಾ ಮುಗಿದ ಬಳಿಕವೇ ಈ ಕಾರ್ಯ ಕೈಗೊಳ್ಳಲಾಗಿದೆ. ಕೊರೊನಾ ವೇಳೆ ಸೇವಾ ಕಾರ್ಯವೂ ಮಾಡಿದ್ದೇವೆ. ಅಭಿವೃದ್ಧಿ ಕಾರ್ಯವೂ ಮಾಡುತ್ತಿದ್ದೇವೆ ಎಂದರು.

ಹೊರಗಿನವರಿಂದ ಸೈಟ್‌ ಬೇಡಿಕೆ: ಬೇರೆ ಬೇರೆ ಊರಿನವರು, ಬಾಗಲಕೋಟೆಯ ಖಾಲಿ ಜಾಗದಲ್ಲಿ ಒಂದು ಶೆಡ್‌ ಹಾಕಿ, ಬಿಟಿಡಿಎದಿಂದ ಸೈಟ್‌ ಕೇಳುವ ಪರಿಪಾಠ ಇಲ್ಲಿದೆ. ಯಾರೋ ಬಂದು ಅನಧಿಕೃತವಾಗಿ ಶೆಡ್‌ ಹಾಕಿ ನಿವೇಶನ ಕೇಳಿದರೆ ಕೊಡಲು ಸಾಧ್ಯವಿಲ್ಲ. ಇದಕ್ಕೆ ಆಸ್ಪದವೂ ಕೊಡಲ್ಲ. ಐದು ವರ್ಷ ಆಡಳಿತ ನಡೆಸಿದ ಮಾಜಿ ಸಚಿವ ಮೇಟಿ ಅವರು, ಒಬ್ಬರಿಗೂ ಒಂದು ಸೈಟ್‌ ಕೊಡಲಿಲ್ಲ. ನಾವು ಅಧಿಕಾರಕ್ಕೆ ಬಂದ ಬಳಿಕ ಈ ವರೆಗೆ 1200 ನಿವೇಶನ ಕೊಟ್ಟಿದ್ದೇವೆ. ಹಳೆಯ ಹರಿಜನ ಕೇರಿ, ಮೊಟ್ಟ ಮೊದಲು ಮುಳುಗಡೆಯಾಗಿತ್ತು. ಅವರಿಗಾಗಿ ಸೆಕ್ಟರ್‌ ನಂ.45ನ್ನು ಅಭಿವೃದ್ಧಿಪಡಿಸಿ, ಮನೆ ಕಟ್ಟಿಕೊಳ್ಳಲು ಅನುಕೂಲ ಮಾಡಲಾಗಿದೆ. ಅಲ್ಲದೇ ಈಗ ಮತ್ತೆ 15 ಎಕರೆ ಆಶ್ರಯ ಮನೆ ಕಟ್ಟಲು ಭೂಮಿ ನೀಡಲಾಗಿದೆ. ಸ್ಲಂಗಳನ್ನು ಮುಕ್ತಗೊಳಿಸಿ, ಸುಂದರ ಬಾಗಲಕೋಟೆ ನಿರ್ಮಿಸುವುದು ನಮ್ಮ ಗುರಿ ಎಂದು ಹೇಳಿದರು.

ಮುಳುಗಡೆ ಏರಿಯಾದಲ್ಲಿ ಸಸಿ ನೆಡುವ ಕಾರ್ಯ ನಮ್ಮ ಆಡಳಿತದಲ್ಲಿ ಕೈಗೊಂಡ ನಿರ್ಧಾರವಲ್ಲ. ಮೇಟಿ ಅವರಿದ್ದಾಗಲೇ ಟೆಂಡರ್‌ ಕೂಡ ಆಗಿ, ಶೇ.10ರಷ್ಟು ಕೆಲಸ ಮಾಡಿದ್ದರು. ಅದೇ ಕೆಲಸ ಈಗ ಮುಂದುವರೆದಿದೆ. ಇದರಲ್ಲಿ ನಮ್ಮ ಪಾತ್ರವಿಲ್ಲ. ಆದರೂ, ಮುಳುಗಡೆ ಪ್ರದೇಶದಲ್ಲಿ ನೀರು ಬಂದರೂ, ಹಾನಿಯಾಗದಂತಹ ಗಿಡ ನೆಡಲು ಸೂಚಿಸಲಾಗಿದೆ ಎಂದರು. ಸ್ವಂತ ಮನೆ ಬಾಡಿಗೆ; ನಗರದ ಹಲವು ಪ್ರದೇಶಗಳ ಜನರು, ನವನಗರ, ಆಶ್ರಯ ಬಡಾವಣೆಗಳಲ್ಲಿನ ಸ್ವಂತ ಮನೆಗಳನ್ನು ಬಾಡಿಗೆ ಕೊಟ್ಟಿದ್ದಾರೆ. ತಾವು ನದಿ ದಂಡೆಯ ಮೇಲೆಯೇ ವಾಸವಾಗಿದ್ದಾರೆ. ಅವರಿಗೆ ಕಟ್ಟಡ ಪರಿಹಾರ, ಸ್ವಂತ ನಿವೇಶನ ಎಲ್ಲವೂ ಕೊಟ್ಟರೂ ಇನ್ನೂ ಏಕೆ ಹಳೆಯ ಮುಳುಗಡೆ ಪ್ರದೇಶದಲ್ಲಿದ್ದಾರೆ. ಪಂಕಾ ಮಸೀದಿ ಬಳಿ ಚರಂಡಿಗಳೇ ಮಾಯವಾಗಿವೆ. ಹಲವರು ಮನೆ, ಅಂಗಡಿ ಕಟ್ಟಿಕೊಂಡಿದ್ದಾರೆ. ಇಂತಹ ಅತಿಕ್ರಮಣ ಸಹಿಸಲು ಸಾಧ್ಯವಿಲ್ಲ. ಇದು ನಿರಂತರವಾಗಿ ನಡೆಯುತ್ತದೆ. ಯಾರು ಅತಿಕ್ರಮಣ ಮಾಡಿಕೊಂಡಿದ್ದಾರೋ, ಅವರು ಒಂದು ವಾರದಲ್ಲಿ ತೆರವುಗೊಳಿಸಬೇಕು. ಇಲ್ಲದಿದ್ದರೆ ನಗರಸಭೆ, ಬಿಟಿಡಿಎ ಅಧಿಕಾರಿಗಳು ಅವುಗಳನ್ನು ತೆರವುಗೊಳಿಸಲಿದ್ದಾರೆ ಎಂದು ಹೇಳಿದರು.

ಊರು ದೇವತೆ ಎಂದು ಪೂಜಿಸುವ ದುರ್ಗವ್ವ, ದ್ಯಾಮವ್ವನ ಗುಡಿಯೇ ಕಾಣದಷ್ಟು ಅತಿಕ್ರಮಣ ಮಾಡಲಾಗಿತ್ತು. ಈಚೆಗೆ ಅಲ್ಲಿ ಉಡಿ ತುಂಬುವ ಕಾರ್ಯ ಸುಸೂತ್ರವಾಗಿ ನಡೆಯಲು ಅತಿಕ್ರಮಣ ತೆರವುಗೊಳಿಸಲಾಗಿದೆ. ನಾವೆಲ್ಲ ಹೋರಾಟ ಮಾಡಿಯೇ ಬಂದವರು. ಮಾಜಿ ಸಚಿವ ಮೇಟಿ ಅವರಿಗೆ ಹೋರಾಟ ಮಾಡುವುದು ಹೊಸದು. ಅವರು ಯಾವುದೇ ಹೋರಾಟ ನಡೆಸಲಿ. ಅತಿಕ್ರಮಣ ತೆರವು ಮುಂದುವರೆಯಲಿದೆ ಎಂದರು.

Advertisement

ಡಿಸಿ-ಸಿಇಒ ಜವಾಬ್ದಾರಿ: ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಅತಿಕ್ರಮಣದ ಮೂಲಕ ಸ್ಲಂ ತಲೆ ಎತ್ತದಂತೆ ನೋಡಿಕೊಳ್ಳುವುದು ಡಿಸಿ ಮತ್ತು ಜಿಪಂ ಸಿಇಒ ಜವಾಬ್ದಾರಿ. ಅವರೂ ಕೂಡ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಬಾಗಲಕೋಟೆಗೆ ಬಂದು ಒಂದು ಗುಡಿಸಲು ಹಾಕಿಕೊಂಡ್ರೆ ಸಾಕು, ಒಂದು ಸೈಟ್‌ ಸಿಗುತ್ತದೆ ಎಂಬಂತೆ ಹಲವರು ವರ್ತಿಸುತ್ತಿದ್ದಾರೆ. ಅದಕ್ಕಾಗಿಯೇ ಅನಧಿಕೃತವಾಗಿ ಶೆಡ್‌, ಮನೆ ಕಟ್ಟಿಕೊಂಡಿದ್ದಾರೆ. ಅಂತಹ ಶೆಡ್‌, ಮನೆಗೆ ನಿವೇಶನ ಕೊಡಲಾಗಲ್ಲ. ಮುಳುಗಡೆ ಜಾಗದವರಿಗೆ ನೀಡಿದ ಸ್ವಂತ ಜಾಗದಲ್ಲಿ ಮನೆ ಕಟ್ಟಿಕೊಳ್ಳಬೇಕು. ನವನಗರದಲ್ಲಿ ಸೈಟ್‌ ಪಡೆದವರು, ಕೂಡಲೇ ಸ್ಥಳಾಂತರಗೊಳ್ಳಬೇಕು. ಇಲ್ಲದಿದ್ದರೆ ತೆರವು ಅನಿವಾರ್ಯ ಎಂದು ಹೇಳಿದರು.

ದ್ವೇಷದ ರಾಜಕೀಯ ಮಾಡಿದ್ಯಾರು?: ನಾವು ಎಂದಿಗೂ ದ್ವೇಷದ ರಾಜಕಾರಣ ಮಾಡಿಲ್ಲ. ಈ ಹಿಂದೆ ಅಧಿಕಾರದಲ್ಲಿದ್ದಾಗ ಕುಮಾರೇಶ್ವರ ಆಸ್ಪತ್ರೆಗೆ ನೀರು ಪೂರೈಕೆ ಸ್ಥಗಿತಗೊಳಿಸಿದವರು, ಕಟ್ಟಡ ತೆರವುಗೊಳಿಸಲು ನೋಟಿಸ್‌ ಕೊಡಿಸಿದ್ದು, ಕಾಟನ್‌ ಮಾರುಕಟ್ಟೆಯ ಅಂಗಡಿ ಬಂದ್‌ ಮಾಡಿಸಿದ್ದು ಯಾರು ಎಂಬುದು ತಿಳಿದುಕೊಳ್ಳಲಿ. ನಿಜವಾಗಿ ದ್ವೇಷದ ರಾಜಕಾರಣ ಮಾಡಿದ್ದು ಯಾರು ಎಂಬುದು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು. ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಬಿಟಿಡಿಎ ಸದಸ್ಯರಾದ ಕುಮಾರ ಯಳ್ಳಿಗುತ್ತಿ, ಮೋಹನ ನಾಡಗೌಡ, ಶಿವಾನಂದ ಟವಳಿ, ಮಾಜಿ ಅಧ್ಯಕ್ಷರಾದ ಜಿ.ಎನ್‌. ಪಾಟೀಲ, ಸಿ.ವಿ. ಕೋಟಿ, ಕಾನೂನು ಸಲಹೆಗಾರ ಕೆ.ಎಸ್‌. ದೇಶಪಾಂಡೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜು ರೇವಣಕರ, ಪ್ರಭು ಹಡಗಲಿ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next