ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಕಳೆದ ವರ್ಷದ ಆಗಸ್ಟ್ ನಲ್ಲಿ ಕೇಂದ್ರ ಸರ್ಕಾರ ರದ್ದುಗೊಳಿಸಿದ ನಂತರ ಜಮ್ಮು-ಕಾಶ್ಮೀರದ ಜೈಲುಕೋಣೆಯಲ್ಲಿ ದಿಢೀರನೆ ಸಂಖ್ಯೆ ಏರತೊಡಗಿತ್ತು. ಅಲ್ಲದೇ ಇತ್ತೀಚೆಗೆ ಅಧಿಕಾರಿಗಳು ಸಾಮಾಜಿಕ ಜಾಲತಾಣಗಳಲ್ಲಿ, ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರು ಮತ್ತು ಉಗ್ರರ ಪರ ಮೃದುಧೋರಣೆ ತಳೆದಿರುವವರನ್ನು ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು ಎಂದು ವರದಿ ತಿಳಿಸಿದೆ.
ಅನಂತ್ ನಾಗ್ ಜೈಲಿನಲ್ಲಿ ಈಗಾಗಲೇ 90ಕ್ಕೂ ಅಧಿಕ ಕೈದಿಗಳಿಗೆ ಕೋವಿಡ್ 19 ಪಾಸಿಟಿವ್ ಎಂದು ವರದಿ ಬಂದ ನಂತರ ಮತ್ತೆ 35 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ, ಜಮ್ಮು-ಕಾಶ್ಮೀರದ ಜೈಲುಗಳಲ್ಲಿ 3,234ಕ್ಕಿಂತ ಹೆಚ್ಚು ಕೈದಿಗಳನ್ನು ಬಂಧಿಸಿಡಲು ಸಾಧ್ಯವಿಲ್ಲ. ಆದರೆ ಈಗ 3,700 ಕೈದಿಗಳು ಜೈಲಿನಲ್ಲಿದ್ದಾರೆ.
ಜೈಲುಗಳಲ್ಲಿ ಕೈದಿಗಳ ಸಂಖ್ಯೆ ಹೆಚ್ಚಾಗುತ್ತಿದ್ದ ಪರಿಣಾಮ ಜೈಲುಗಳು ಕೋವಿಡ್ 19 ಎಪಿಕ್ ಸೆಂಟರ್ ಗಳಾಗುತ್ತಿವೆ ಎಂದು ವರದಿ ಹೇಳಿದೆ.
ಕೆಲವು ಜೈಲುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೈದಿಗಳು ತುಂಬಿಕೊಂಡಿದ್ದಾರೆ. ಇದರಲ್ಲಿ ಅನಂತ್ ನಾಗ್ ಜೈಲು ಕೂಡಾ ಒಂದಾಗಿದೆ. ಬಂಧಿತರಲ್ಲಿ ನೂರಾರು ಮಹಿಳೆಯರು ಹಾಗೂ ಹಿರಿಯ ನಾಗರಿಕರು ಸೇರಿದ್ದಾರೆ ಎಂದು ವರದಿ ತಿಳಿಸಿದೆ.
ಕಾಶ್ಮೀರದ ಜೈಲು ಕೋಣೆಗಳು ಸಮರ್ಪಕವಾಗಿಲ್ಲ ಎಂದು ಸ್ಥಳೀಯ ಜೈಲು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಹೊಸ ಕೋವಿಡ್ ಪ್ರಕರಣಗಳಿಂದಾಗಿ ಬಂಧಿತ ಕುಟುಂಬದವರು ಕೈದಿಗಳ ಆರೋಗ್ಯ ಸ್ಥಿತಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.